ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನ-ದಿನಕ್ಕೆ ಹದಗೆಟ್ಟು ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಸಚಿವ (ನರಸಿಂಹನಾಯಕ) ರಾಜೂಗೌಡ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನ-ದಿನಕ್ಕೆ ಹದಗೆಟ್ಟು ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಸಚಿವ (ನರಸಿಂಹನಾಯಕ) ರಾಜೂಗೌಡ ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು, ಅಂದಿನಿಂದ ಇಂದಿನವರೆಗೆ ದಿನಾಲೂ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ, ಹಲವಾರು ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಚುನಾವಣೆ ಪೂರ್ವದಲ್ಲಿ ಅವಸರದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಿ, ಅವುಗಳಿಗೆ ಅನುದಾನ ಒದಗಿಸುವಲ್ಲಿ ಕೂಡ ಸರ್ಕಾರ ಹೆಣಗಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ನರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ, ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ ವಿಬಿಜಿರಾಂಜಿ) ಎಂಬ ಯೋಜನೆಯನ್ನು ಜಾರಿಗೊಳಿಸಿದೆ, ಇದರಲ್ಲಿ ಹಲವಾರು ಮಹತ್ವದ ಬದಲಾಣೆಗಳನ್ನು ಮಾಡಿ, ದೇಶದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಈ ಹಿಂದೆ 100 ದಿನಗಳ ಕೆಲಸ ನೀಡಲಾಗುತ್ತಿತ್ತು, ಅದನ್ನು 125 ದಿನಗಳಿಗೆ ವಿಸ್ತಾರಗೊಳಿಸಿ ಅಕ್ರಮಗಳಿಗೆ ಕಡಿವಾಣ ಹಾಕಲು ಯತ್ನಿಸಿದೆ, ಜೊತೆಗೆ ಕೇಂದ್ರ ಸರ್ಕಾರ ಈ ಯೋಜನೆಗೆ ಶೇ.60 ರಷ್ಟು ಅನುದಾನ ನೀಡುತ್ತದೆ, ಇದರಲ್ಲಿ ಆಯಾ ರಾಜ್ಯ ಸರ್ಕಾರಗಳ ಅಭಿವೃದ್ಧಿ ಪರ ಕಾಳಜಿ ಇರಲಿ ಎಂದು ಶೇ. 40ರಷ್ಟು ಅನುದಾನ ಒದಗಿಸಲು ನಿರ್ದೇಶನ ನೀಡಲಾಗಿದೆ ಎಂದರು.ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳ ಘೋಷಣೆಯಿಂದ ಆರ್ಥಿಕವಾಗಿ ದಿವಾಳಿಯಾಗಿದೆ, ಕೇವಲ ಮಹಾತ್ಮ ಗಾಂಧಿ ಹೆಸರು ಈ ಯೋಜನೆಯಿಂದ ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿ, ಹಲವಾರು ಕಡೆ ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ತರಾಟೆಗೆ ತೆಗೆದುಕೊಂಡರು.
ಈ ಯೋಜನೆಯಲ್ಲಿ ಕೃಷಿ ಕಾರ್ಮಿಕರಿಗೆ ಅನುಕೂಲವಾಗಲೀ ಎಂಬ ದೃಷ್ಟಿಯಿಂದ 60 ದಿನಗಳ ಕಾಮಗಾರಿ ಸ್ಥಗೀತ ಮಾಡಲಾಗುತ್ತದೆ, ಇದರಿಂದ ಅವರು ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ, ಮಹಾತ್ಮ ಗಾಂಧಿಜಿಯವರ ಕನಸಿನಂತೆ ಕೇಂದ್ರ ಸರ್ಕಾರ ರಾಮರಾಜ್ಯ ನಿರ್ಮಾಣ ಮಾಡುವ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಆದರೆ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮಹತ್ವ ಇಲಾಖೆಗಳ ಸಭೆಗೆ ಹಾಜರಾಗದೇ, ಅನುದಾನ ಕೇಳದೆ, ದಿನಾಲೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವಾರು ಇಲಾಖೆಗಳ ಮಹತ್ವದ ಯೋಜನೆಗಳು ಪೂರ್ಣಗೊಂಡಿಲ್ಲ, ಪರಿಣಾಮ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ, ನಾವೂ ಪಕ್ಷದ ವತಿಯಿಂದ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದೇವೆ ಎಂದರು.
ಬಳ್ಳಾರಿ ಗಲಾಟೆ ಬಗ್ಗೆ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳು ಎಂತಹ ಸಂದರ್ಭದಲ್ಲಿ ತಮ್ಮ ಸಂಯಮವನ್ನು ಕಳೆದುಕೊಳ್ಳಬಾರದು, ಆ ಘಟನೆಯಿಂದ ಅಲ್ಲಿನ ಕಾಂಗ್ರೆಸ್ ಶಾಸಕನ ಉದ್ದೇಶ ಬಯಲಾಗಿದೆ, ಜಿಲ್ಲೆಯಲ್ಲಿ ಪಕ್ಷವನ್ನು ಸಧೃಢವಾಗಿ ಸಂಘಟಿಸಲು ಎಲ್ಲರೂ ಒಗ್ಗಟ್ಟಾಗಿದ್ದೇವೆ, ಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೇಟ್ ನೀಡಲಿದೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ದೇವಿಂದ್ರನಾಥ ನಾದ್, ಅಮೀನರಡ್ಡಿ ಯಾಳಗಿ, ರಾಚನಗೌಡ ಮುದ್ನಾಳ, ಕು,ಲಲಿತಾ ಅನಪೂರ, ಮಹೇಶರಡ್ಡಿ ಮುದ್ನಾಳ, ಸಿದ್ದಣ್ಣಗೌಡ ಕಾಡಂನೋರ, ನಾಗರತ್ನ ಕುಪ್ಪಿ, ಮಲ್ಲಪ್ಪ ಮೇಳಗಿ ಹಲವರು ಹಾಜರಿದ್ದರು.