ಗಂಗಾವತಿ: ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದಲ್ಲಿ ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಇದ್ದಾಗ ಅದು ಕೈಲಾಸ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ನ್ಯಾಯಾಧೀಶ ಸದಾನಂದ ನಾಯ್ಕ್ ಹೇಳಿದರು.

ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಐದನೇ ವಾರ್ಷಿಕೋತ್ಸವ ಮತ್ತು ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಗಂಗಾವತಿಯ ಉಪವಿಭಾಗ ಹಾಗೂ ಹೆರಿಗೆ ಆಸ್ಪತ್ರೆಯ ಸರ್ವ ಸಿಬ್ಬಂದಿಗೆ ಗೌರವ ಸನ್ಮಾನ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಕೆಲಸ ಮಾಡುವವರು ಕಾರ್ಮಿಕರೇ.ನ್ಯಾಯಾಧೀಶರೂ ಕಾರ್ಮಿಕರೇ, ಕಟ್ಟಡ ಕಾರ್ಮಿಕರೂ ಕಾರ್ಮಿಕರೇ. ಯಾವುದೂ ಕನಿಷ್ಠ ಅಥವಾ ಶ್ರೇಷ್ಠ ಅಲ್ಲ.ಜಗಜ್ಯೋತಿ ಬಸವಣ್ಣನವರು ಹೇಳಿದಂತೆ ಯಾವ ಕಾಯಕದಲ್ಲಾದರೂ ಕೈಲಾಸವಿದೆ. ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯ ಕಾಪಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಗಾಗಿ ಗಂಗಾವತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನ್ಯಾಯಾಧೀಶ ನಾಗೇಶ್ ಪಾಟೀಲ್ ಮಾತನಾಡಿ, ಕಾರ್ಮಿಕರು ನ್ಯಾಯ ಸಿಗುವ ಬಗ್ಗೆ ಅನುಮಾನಪಡಬೇಡಿ. ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಉಚಿತ ಸಲಹೆ ಹಾಗೂ ನ್ಯಾಯ ಪಡೆಯಲು ಎಲ್ಲ ಸೌಲಭ್ಯಗಳಿವೆ. ನಿಮ್ಮ ಹಕ್ಕುಗಳಿಗೆ ತೊಂದರೆಯಾದಲ್ಲಿ ನ್ಯಾಯಾಲಯಕ್ಕೆ ಭೇಟಿ ನೀಡಬೇಕೆಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಆರೋಗ್ಯ ಇಲಾಖೆಯಲ್ಲೇ ವಿಶ್ವ ಆರೋಗ್ಯ ದಿನಾಚರಣೆ ಆಚರಿಸುತ್ತಿರುವುದು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸುತ್ತಿರುವುದು ಅರ್ಥಪೂರ್ಣ.ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲರೂ ಆಹಾರ,ನಿದ್ರೆ, ಮನಸ್ಸಿನ ನೆಮ್ಮದಿ ಕಾಪಾಡಿಕೊಂಡು ಆರೋಗ್ಯವಾಗಿ ಬಾಳಬೇಕು ಎಂದರು. ಈ ವೇಳೆ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಗೌಡ, ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಸೇರಿದಂತೆ ಅನೇಕರು ಇದ್ದರು.