ಸಾರಾಂಶ
ಕೊಪ್ಪಳ: ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆರ್ಥಿಕ ಹೊಡೆತವಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸ್ಪಷ್ಟಪಡಿಸಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ. 6.90 ಕೋಟಿ ಜನರಿಗೆ ₹1 ಲಕ್ಷ ಕೋಟಿ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು ₹96 ಲಕ್ಷ ಕೋಟಿ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ; ಮುಂದುವರಿಸುತ್ತೇವೆ ಎಂದರು.ನಾವು ಗ್ಯಾರಂಟಿ ಬಂದ್ ಮಾಡಿದರೆ ಜನ ಸುಮ್ಮನಿರುತ್ತಾರಾ? ಕೊಟ್ಟಿದ್ದನ್ನು ನಿಲ್ಲಿಸಲು ಆಗುವುದಿಲ್ಲ, ಮುಂದೆಯೂ ತೆಗೆಯಬಾರದು. ಗ್ಯಾರಂಟಿಯಿಂದ ಹಣದ ಭಾರವಿದೆ, ಆದರೆ ಅದಕ್ಕೆ ಪರಿಹಾರ ಹುಡುಕಿಕೊಂಡಿದ್ದೇವೆ ಎಂದರು.
ಶೆಟ್ಟರ್ ಸ್ಟ್ಯಾಂಡರ್ಡ್ ಇಟ್ಕೊಬೇಕಿತ್ತು:ಬಿಜೆಪಿ ಟಿಕೆಟ್ ನೀಡದೇ ಇದ್ದಾಗ ಜಗದೀಶ್ ಶೆಟ್ಟರ್ ನಮ್ಮ ಪಕ್ಷಕ್ಕೆ ಬರಬಾರದಿತ್ತು. ಬಂದ ಮೇಲೆ ಮರಳಿ ಹೋಗಬಾರದಿತ್ತು. ಶೆಟ್ಟರ್ ಒಂದು ಸ್ಟ್ಯಾಂಡರ್ಡ್ ಇಟ್ಕೊಬೇಕಿತ್ತು ಎಂದು ಬಸವರಾಜ ರಾಯರಡ್ಡಿ ಹೇಳಿದರು.ಕಾಂಗ್ರೆಸ್ ಗೆ ಬಂದಿದ್ದು ಆತುರದ ನಿರ್ಧಾರ, ಹೋಗಿದ್ದು ಕೂಡ ಆತುರದ ನಿರ್ಧಾರವಾಗಿದೆ. ಸೋತ ಮೇಲೆಯೂ ಎಂಎಲ್‌ಸಿ ಮಾಡಿದ್ದರು. ಶೆಟ್ಟರ್ ಹೀಗೆ ಮಾಡಬಾರದಿತ್ತು. ರಾಜಕಾರಣ ಕೆಳಮಟ್ಟದಲ್ಲಿದೆ. ಯಾವ ಪಕ್ಷದಲ್ಲಿ ಕೂಡ ನೈತಿಕತೆ ಮೌಲ್ಯ ಉಳಿದಿಲ್ಲ. ಬಿಜೆಪಿಯಲ್ಲಿ ಇಲ್ಲವೇ ಇಲ್ಲ ಎಂದರು.ಇವತ್ತಿನ ನಮ್ಮ ಸಂಖ್ಯಾ ಬಲದಲ್ಲಿ ನಮ್ಮನ್ನು ಯಾರೂ ಅಲುಗಾಡಿಸಲು ಆಗಲ್ಲ. ಯಾರು ಬಿಟ್ಟು ಹೋಗುವುದಿಲ್ಲ ಎಂದರು.ಕೆಲವರು ನಮಗೆ ನಿಗಮ ಮಂಡಳಿ ಹುದ್ದೆ ವಿಚಾರದಲ್ಲಿ ಕೇಳಿಲ್ಲ ಅಂದಿದ್ದಾರೆ. ಅವರ ಹೇಳಿಕೆಯಲ್ಲಿ ತಪ್ಪೇನಿದೆ? ಅವರ ಅಭಿಪ್ರಾಯ ಅವರು ಹೇಳಿದ್ದಾರೆ ಎಂದರು.ಲಕ್ಷ್ಮಣ ಸವದಿ ಅವರೇ ಹೇಳಿದ್ದಾರೆ, ಬಿಜೆಪಿಗೆ ಹೋಗಲ್ಲ ಅಂತ. ಯಾರು ಹೋಗ್ತಾರೋ ಬಿಡ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಬಿಟ್ಟು ಶಾಸಕರು ಹೋಗ್ತಾರೆ ಅನ್ನುವುದು ಊಹಾಪೋಹ. ನಮ್ಮ ಶಾಸಕರ ಸಂಖ್ಯಾಬಲ ಹೆಚ್ಚಾಗಿದೆ. ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ. ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಪುನರುಚ್ಚರಿಸಿದರು.ಬಜೆಟ್ ತಯಾರಿ ನಡೆದಿದೆ. ಅಧಿಕಾರಿಗಳು ಏನು ಮಾಡಬೇಕು ಎಂಬ ಮಾಹಿತಿ ಕೊಟ್ಟಿದ್ದಾರೆ. ಇನ್ನು ಹಲವು ಇಲಾಖೆಗಳ ಸಭೆ ಕರೆಯಲಾಗಿದೆ. ನಂತರ ಬಜೆಟ್ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ನಯಾಪೈಸೆಯನ್ನೂ ಕೊಟ್ಟಿಲ್ಲ. ನಾವು ಸುಮ್ಮನೆ ಕೂಡದೇ ಪ್ರತಿ ರೈತರಿಗೆ ₹2 ಸಾವಿರ ಕೊಡುತ್ತಿದ್ದೇವೆ ಎಂದು ರಾಯರಡ್ಡಿ ಕೇಂದ್ರ ಸರ್ಕಾರವನ್ನು ದೂರಿದರು.