ಸ್ವ ಉದ್ಯೋಗ ಸಾಲಕ್ಕೆ ಶಿಕ್ಷಣ ಮಾನದಂಡ ಬೇಡ

| Published : Oct 10 2023, 01:00 AM IST

ಸಾರಾಂಶ

ಬಿಪಿಎಲ್‌, ಜಾತಿ, ಆದಾಯ ಪ್ರಮಾಣಪತ್ರದ ಆಧಾರದಲ್ಲೇ ನಿಗಮಗಳ ಸಾಲ ನೀಡಿ ಕುರುಬ ಸಮಾಜ ಮುಖಂಡ ಎನ್.ಜೆ.ನಿಂಗಪ್ಪ ಆಗ್ರಹ

ಬಿಪಿಎಲ್‌, ಜಾತಿ, ಆದಾಯ ಪ್ರಮಾಣಪತ್ರದ ಆಧಾರದಲ್ಲೇ ನಿಗಮಗಳ ಸಾಲ ನೀಡಿ ಕುರುಬ ಸಮಾಜ ಮುಖಂಡ ಎನ್.ಜೆ.ನಿಂಗಪ್ಪ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರವು ವಿವಿಧ ಅಭಿವೃದ್ಧಿ ನಿಗಮಗಳಿಂದ ಆಯಾ ಸಮುದಾಯಗಳ ನಿಗಮದ ಮೂಲಕ ಸ್ವಯಂ ಉದ್ಯೋಗಕ್ಕೆ ನೀಡುತ್ತಿರುವ ಸಾಲ ಸೌಲಭ್ಯಕ್ಕೆ ಫಲಾನುಭವಿಗಳಿಗೆ ವಿದ್ಯಾರ್ಹತೆ ಕಡ್ಡಾಯಗೊಳಿಸಿದ್ದು ತಕ್ಷಣ ಕೈಬಿಡಬೇಕು ಎಂದು ಹಿಂದುಳಿದ ವರ್ಗ ಸೇರಿ ವಿವಿಧ ಸಮುದಾಯಗಳ ಮುಖಂಡರು ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುರುಬ ಸಮಾಜದ ಹಿರಿಯ ಮುಖಂಡ, ಪಾಲಿಕೆ ಮಾಜಿ ಸದಸ್ಯ ಎನ್‌.ಜೆ.ನಿಂಗಪ್ಪ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಕಲ್ಪಿಸುತ್ತಿರುವ ಸರ್ಕಾರವು ಸೌಲಭ್ಯ ಪಡೆಯಲು ಫಲಾನುಭವಿಗಳಿಗೆ ವಿದ್ಯಾರ್ಹತೆ ನಿಗದಿಪಡಿಸಿದ್ದು ಸರಿಯಲ್ಲ. ವಿದ್ಯಾರ್ಹತೆ ಮಾನದಂಡ ತೆಗೆದು ಹಾಕಿ, ಮೊದಲಿದ್ದಂತೆ ಬಿಪಿಎಲ್‌ ಕಾರ್ಡ್‌, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಾತ್ರ ಪರಿಗಣಿಸಲು, ಕಡ್ಡಾಯಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳು ಸೇರಿ ಎಲ್ಲಾ ಜಾತಿ, ಸಮುದಾಯಗಳಲ್ಲೂ ಅನಕ್ಷರಸ್ಥರು, ಬಡವರು, ಕೂಲಿ ಕಾರ್ಮಿಕರಿದ್ದಾರೆ. ಅಕ್ಷರ ಕಲಿತಿದ್ದರೆ ಎಲ್ಲಾದರೂ ಸಣ್ಣಪುಟ್ಟ ಕೆಲಸವನ್ನಾದರೂ ಆ ಜನರು ಮಾಡುತ್ತಿದ್ದರು. ಆದರೆ, ವಿದ್ಯೆ ವಂಚಿತರು ವ್ಯಾಪಾರ, ಅಂಗಡಿ, ಸೊಪ್ಪು ತರಕಾರಿ, ಹಣ್ಣು ಹಂಪಲು ಮಾರಾಟದಂತಹ ಸ್ವಯಂ ಉದ್ಯೋಗ ಕೆಲಸದಿಂದ ಜೀವನ ಕಟ್ಟಿಕೊಂಡಿರುತ್ತಾರೆ. ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸುವಷ್ಟು ಶಕ್ತರಾಗಿರುವುದಿಲ್ಲ ಎಂದು ತಿಳಿಸಿದರು.

ಆರ್ಥಿಕ ಚೇತರಿಕೆಗೆ ಸಹಾಯ:

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಲಿಂಗಾಯತ, ಮರಾಠ, ನಿಜಗುಣ ಅಂಬಿಗರ ಚೌಡಯ್ಯ, ವಿಶ್ವಕರ್ಮ, ಉಪ್ಪಾರ, ಸವಿತಾ ಸಮಾಜ, ಮಡಿವಾಳ ಸಮಾಜ ಸೇರಿ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿ ಅನಕ್ಷರಸ್ಥರು, ಬಡವರು, ಕೂಲಿ ಕಾರ್ಮಿಕ ವರ್ಗದ ಜನರು, ಮಹಿಳೆಯರು ತಮ್ಮ ಹಾಗೂ ಕುಟುಂಬದ ಆರ್ಥಿಕ ಏಳಿಗೆಗಾಗಿ ನಿಗಮದಿಂದ ಸಾಲ ಸೌಲಭ್ಯ ಪಡೆದು, ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದರು. ಈಗ ಸಾಲ ಸೌಲಭ್ಯಕ್ಕೆ ವಿದ್ಯಾರ್ಹತೆ ನಿಗದಿಪಡಿಸಿದ್ದರಿಂದ ತೀವ್ರ ತೊಂದರೆಯಾಗಿದೆ ಎಂದು ಹೇಳಿದರು.

ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ನೀಡಿ, ಆರ್ಥಿಕವಾಗಿ ಚೇತರಿಸಿಕೊಳ್ಳಲು ಶಕ್ತಿ ನೀಡಬೇಕಾದ್ದು ನಿಗಮಗಳ ಕೆಲಸ. ಆದರೆ, ನಿಗಮಗಳಲ್ಲಿ ಜಾರಿಗೆ ತಂದ ವಿದ್ಯಾರ್ಹತೆ ಮಾನದಂಡ, ಹೊಸ ನಿಯಮಗಳು ಸ್ವಯಂ ಉದ್ಯೋಗದ ಕನಸು ಕಂಡ ಜನರನ್ನು ನಿರಾಸೆಗೆ ನೂಕುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿದ್ಯಾರ್ಹತೆ ಮಾನದಂಡ ತೆಗೆದು ಹಾಕಬೇಕು ಎಂದು ಎನ್‌.ಜೆ.ನಿಂಗಪ್ಪ ಸರ್ಕಾರಕ್ಕೆ ಆಗ್ರಹಿಸಿದರು.

ವಿವಿಧ ಸಮುದಾಯಗಳ ಮುಖಂಡರಾದ ಟಿ.ಡಿ.ಹಾಲೇಶ, ಆರ್‌.ಕರಿಬಸಪ್ಪ, ವೀರಣ್ಣ, ಅಣ್ಣಪ್ಪ ತಣಿಗೆರೆ, ಮಹೇಶ, ಎ.ಆರ್‌.ಈರಣ್ಣ, ಟಿ.ಪರಶುರಾಮ, ಉಚ್ಚೆಂಗೆಪ್ಪ, ಮಲ್ಲಿಕಾರ್ಜುನ ಕೈದಾಳೆ, ಯೋಗೇಂದ್ರ, ಎ.ಬಿ.ಚೈತ್ರಾ, ತಿಪ್ಪೇಶ ಕೈದಾಳೆ ಇತರರಿದ್ದರು.

ನಿಗಮದ ಸಾಲಕ್ಕೆ ಆಹ್ವಾನಿಸಿರುವ ಸರ್ಕಾರವು ಅರ್ಜಿದಾರರಿಗೆ ಕೆಲವು ನಿಗಮಗಳು 7ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಹತೆ ನಿಗದಿಪಡಿಸಿದ್ದು ತಕ್ಷಣ ತೆಗೆಯಬೇಕು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಳಿ ಇಲ್ಲದ ದಾಖಲೆಗಳ ಕೇಳಿ, ಅರ್ಜಿ ಸಲ್ಲಿಸಲು ಸೂಚಿಸಿದ್ದರಿಂದ ಬಹುತೇಕ ಎಲ್ಲಾ ನಿಗಮಗಳಲ್ಲಿ ಸಾಲ ಸೌಲಭ್ಯ ಪಡೆಯುತ್ತಿದ್ದ ಸಮುದಾಯಗಳ ಅನಕ್ಷರಸ್ಥರು, ಬಡವರು, ಮಹಿಳೆಯರು ಸ್ವಯಂ ಉದ್ಯೋಗದ ಅವಕಾಶ ತಪ್ಪಿದಂತಾಗಿದೆ.

ಎನ್‌.ಜೆ.ನಿಂಗಪ್ಪ, ಕುರುಬ ಸಮಾಜ ಹಿರಿಯ ಮುಖಂಡ