ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದ್ವೇಷಕ್ಕೆ ಅಂತ್ಯವಿಲ್ಲ. ಆದರೆ, ಅದಕ್ಕೆ ಔಷಧಿಯನ್ನು ಸಾಹಿತ್ಯವೇ ನೀಡಬಲ್ಲದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟರು.

ನಗರದ ಸಾಹಿತ್ಯ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ “ಮನೆಗೊಂದು ಗ್ರಂಥಾಲಯ” ಅಭಿಯಾನದ ಕರಪತ್ರ ಬಿಡುಗಡೆ ಹಾಗೂ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಿಸಿ ಮಾತನಾಡಿದರು.

ಮನೆಗೊಂದು ಗ್ರಂಥಾಲಯ ಎಂಬ ಅಭಿಯಾನವು ಕೇವಲ ಯೋಜನೆಯಲ್ಲ, ಜ್ಞಾನ ಮತ್ತು ಮಾನವೀಯತೆಯ ಬೆಳಕನ್ನು ಪ್ರತಿ ಮನೆಯೊಳಗೆ ತಲುಪಿಸುವ ಸಾಂಸ್ಕೃತಿಕ ಚಳವಳಿಯಾಗಿದೆ. ಇಂದಿನ ಸಮಾಜದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ, ಹಿಂಸೆ ಮತ್ತು ಅಸಹಿಷ್ಣುತೆ ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪದವಿಗಳು, ಪಾಂಡಿತ್ಯಗಳು ಹೆಚ್ಚಾದರೂ ಮನುಷ್ಯತ್ವ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾಹಿತ್ಯ ಓದಿನ ಸಂಸ್ಕೃತಿ ಮನುಷ್ಯನ ಮನಸ್ಸನ್ನು ಮೃದುಗೊಳಿಸಿ, ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸುತ್ತದೆ ಎಂದು ಹೇಳಿದರು.


ಮುಖ್ಯ ಅತಿಥಿಗಳಾದ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಪುಸ್ತಕ ಸಂಸ್ಕೃತಿಯನ್ನು ಮನೆಮನೆಗೆ ತಲುಪಿಸುವ ಕಾರ್ಯ ಇಂದಿನ ಅವಶ್ಯಕತೆಯಾಗಿದೆ. ಹೊಸ ತಲೆಮಾರಿನಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ, ವಾಚನಾಭಿರುಚಿ ಕಮ್ಮಟ, ‘ಓದು ಕನ್ನಡಿಗ’ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಗೊಂಡಂತೆ ಹತ್ತು ಸದಸ್ಯರ ಜಾಗೃತ ಸಮಿತಿಯನ್ನು ರಚಿಸಿ, ಪುಸ್ತಕ ಖರೀದಿ ಮತ್ತು ಓದುವ ಸಂಸ್ಕೃತಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮಾತನಾಡಿ, ಮನೆಗೊಂದು ಗ್ರಂಥಾಲಯ ದೇವರ ಮನೆಯಷ್ಟೇ ಪವಿತ್ರವಾದ ಜ್ಞಾನದ ಕೇಂದ್ರವಾಗಬೇಕು. ದಿನಸಿ ಸಾಮಗ್ರಿಗಳ ಪಟ್ಟಿಯಲ್ಲಿ ಪುಸ್ತಕಕ್ಕೂ ಸ್ಥಾನ ಸಿಗಬೇಕು ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರದ ಸದಸ್ಯೆ ಅಕ್ಷತಾ ಕೆ. ಹುಂಚದಕಟ್ಟೆ ಮಾತನಾಡಿದರು‌. ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಸಾಹಿತಿ ಬಿ. ಚಂದ್ರೇಗೌಡ, ಡಾ. ಎಚ್. ಟಿ. ಕೃಷ್ಣಮೂರ್ತಿ, ಷಣ್ಮುಖಾಚಾರ್, ಆರ್. ರತ್ನಯ್ಯ, ರೇವಣಪ್ಪ ಬಿದರಗೆರೆ ಹಾಗೂ ಭದ್ರಾವತಿ ರೇವಣಪ್ಪ ಉಪಸ್ಥಿತರಿದ್ದರು. ಗಾಯಕಿ ಲಲಿತಮ್ಮ ವಿಠಲದಾಸ್ ಪ್ರಾರ್ಥಿಸಿ, ಎಂ.ಎಂ. ಸ್ವಾಮಿ ಸ್ವಾಗತಿಸಿ, ಕೆ. ಎಸ್. ಮಂಜಪ್ಪ ನಿರೂಪಿಸಿ, ಡಿ. ಗಣೇಶ್ ವಂದಿಸಿದರು. ಇದೇ ವೇಳೆ ಮಾಜಿ ಸಚಿವ ಡಿ. ಸುಧಾಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮನೆಗೊಂದು ಗ್ರಂಥಾಲಯಕ್ಕೆ ಜಿಲ್ಲಾ ಜಾಗೃತ ಸಮಿತಿ

ಮನೆಗೊಂದು ಗ್ರಂಥಾಲಯ ಅಭಿಯಾನಕ್ಕೆ ಜಿಲ್ಲಾ ಮಟ್ಟದ ಜಾಗೃತ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಸಂಚಾಲಕರಾಗಿ ಡಿ. ಮಂಜುನಾಥ, ಸದಸ್ಯರಾಗಿ ಡಿ. ಗಣೇಶ್, ಪರಶುರಾಮ ಮಟ್ಟೇರ, ಮೋಹನ್ ಕುಮಾರ್, ಕೆ. ಎಸ್. ಹುಚ್ಚರಾಯಪ್ಪ, ಶಂಕರ್ ಶೇಟ್, ಡಾ. ಪ್ರಸನ್ನ, ಗಣೇಶ್ ಮೂರ್ತಿ ನಾಗರಕೊಡಿಗೆ ಮತ್ತು ಗಾಯತ್ರಿ ಶೇಷಗಿರಿ ತಂಡ ಕಾರ್ಯನಿರ್ವಹಿಸಲಿದೆ.