ಸಾರಾಂಶ
ವೈದ್ಯರ ಸೇವೆಯ ನಂತರ ದಾದಿಯರು ಕೈಗೊಳ್ಳುವ ಸೇವೆಯಿಂದ ರೋಗಿಗಳು ಮಾನಸಿಕವಾಗಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಸವಣೂರು
ಸೇವೆಯಲ್ಲಿ ಒಳ್ಳೆಯ, ಕೆಟ್ಟ ಸೇವೆ ಎಂಬುದು ಇರಲು ಸಾಧ್ಯವಿಲ್ಲ. ದಾದಿಯರ ಸೇವೆಗೆ ಸರಿಸಮವಾಗಿರುವ ಸೇವೆ ಮತ್ತೊಂದಿಲ್ಲ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ಹೇಳಿದರು.ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನಾಚರಣೆ ಹಾಗೂ ದಾದಿಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೈದ್ಯರ ಸೇವೆಯ ನಂತರ ದಾದಿಯರು ಕೈಗೊಳ್ಳುವ ಸೇವೆಯಿಂದ ರೋಗಿಗಳು ಮಾನಸಿಕವಾಗಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗಿದೆ. ವೈಯಕ್ತಿಕ ಒತ್ತಡಗಳ ನಡುವೆ ದಾದಿಯರು ರೋಗಿಗಳ ಸೇವೆ ಕೈಗೊಳ್ಳುವದು ಶ್ಲಾಘನಿಯವಾಗಿದೆ ಎಂದರು.ನಿವೃತ್ತ ಶುಶ್ರೂಷಾಧಿಕಾರಿ ನಿರ್ಮಲಾ ಪಾಟೀಲ, ನಸೀಮಾ ಇಮಾನದಾರ ಹಾಗೂ ಶೋಭಾ ಕೊಂಗಿ ಸೇರಿದಂತೆ ಒಟ್ಟು ೩೨ ಶುಶ್ರೂಷಾಧಿಕಾರಿಗಳನ್ನು ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವೈದ್ಯರಾದ ಡಾ. ನಟರಾಜ್, ಡಾ. ವೀರೇಶ ಮಠಪತಿ, ಡಾ. ಚನ್ನಬಸವ ಹುಲ್ಲತ್ತಿ, ಡಾ. ಅನೂಪ ರಾಯ್ಕರ್, ಡಾ. ಪುಷ್ಪಲತಾ, ಡಾ. ಸ್ಮೀತಾ, ಶುಶ್ರೂಷಾಧಿಕಾರಿ ವೀಣಾ ಇನಾಮತಿ, ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಬಸವರಾಜ ಚಳ್ಳಾಳ ಹಾಗೂ ಇತರರು ಪಾಲ್ಗೊಂಡಿದ್ದರು.ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ವಿದ್ಯಾಧರ ಕುತನಿ, ತೇಜಸ್ವಿನಿ ಕೊಂಡಿ ಹಾಗೂ ಸುನಂದಾ ಚಿನ್ನಾಪೂರ ಕಾರ್ಯಕ್ರಮ ನಿರ್ವಹಿಸಿದರು.