ಸಾರಾಂಶ
ದಾವಣಗೆರೆ: ಗಣಿತ ಶಾಸ್ತ್ರದ ಜ್ಞಾನವಿಲ್ಲದೇ ಇಂದಿನ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಏನನ್ನೇ ಮಾಡುವುದಕ್ಕೂ ಸಾಧ್ಯವಿಲ್ಲ, ಗಣಿತ ಎಲ್ಲಾ ವಿಷಯಗಳಿಗೂ ತಾಯಿ ಇದ್ದಂತೆ ಎಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎ.ಡಿ.ಕುಂಬಾರ ತಿಳಿಸಿದರು.ನಗರದ ಜೆಜೆಎಂ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಡಿ.ಆರ್.ಎಂ.ವಿಜ್ಞಾನ ಕಾಲೇಜಿನ ಗಣಿತ ವಿಭಾಗ ಹಮ್ಮಿಕೊಂಡಿದ್ದ ಆಧುನಿಕ ಗಣಿತ ಅಧ್ಯಯನ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಗಣಿತದಲ್ಲಿ ಪರಿಣಿತಿ ಪಡೆದರೆ ಉಳಿದ ವಿಷಯಗಳೂ ಸುಲಭವಾಗುತ್ತವೆ ಎಂದರು. ಹಿಂದೆಲ್ಲಾ ಗಣಿತಕ್ಕೆ ಹೆಚ್ಚು ಪ್ರಾಮುಖ್ಯತೆ ಇತ್ತು. 20ನೇ ಶತಮಾನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನದಾಗಿ ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ, ನಂತರದಲ್ಲಿ ಗಣಿತದ ಬಗ್ಗೆ ಆಸಕ್ತಿಯೇ ಕಡಿಮೆಯಾಯಿತು. ಆದರೆ, ಈಗ ಮತ್ತೆ ಗಣಿತ ಶಾಸ್ತ್ರದತ್ತ ಎಲ್ಲರೂ ಒಲವು ತೋರುತ್ತಿದ್ದಾರೆ. ಬೋಧಕರು ಸಹ ಗಣಿತ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು. ನಾಗಾಲೋಟದಲ್ಲಿ ಸಾಗುತ್ತಿರುವ, ಅಭಿವೃದ್ಧಿ ಪಥದಲ್ಲಿ ತೀವ್ರಗತಿಯಲ್ಲಿ ಸಾಗುತ್ತಿರುವ ತಂತ್ರಜ್ಞಾನ ಕ್ಷೇತ್ರವು ಸಂಪೂರ್ಣವಾಗಿ ಗಣಿತ ಶಾಸ್ತ್ರವನ್ನೇ ಅವಲಂಭಿಸಿರುವುದನ್ನು ನಾವ್ಯಾರೂ ಸಹ ಮರೆಯಬಾರದು. ಸಾಫ್ಟ್‌ವೇರ್ ತಂತ್ರಾಂಶ ಕ್ಷೇತ್ರದಲ್ಲಿ ಗಣಿತಶಾಸ್ತ್ರವೇ ಹಾಸು ಹೊಕ್ಕಿದೆ. ಗಣಿತ ಶಾಸ್ತ್ರವಿಲ್ಲದೇ, ಗಣಿತ ಜ್ಞಾನವಿಲ್ಲದೇ ಸಾಫ್ಟ್‌ವೇರ್ ಕ್ಷೇತ್ರದಲ್ಲೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕುವೆಂಪು ವಿವಿ ಪ್ರಾಧ್ಯಾಪಕ ಪ್ರೊ.ಎಸ್.ಕೆ.ನರಸಿಂಹಮೂರ್ತಿ ಮಾತನಾಡಿ, ನಮ್ಮ ದೈನಂದಿನ ಬದುಕಿನಲ್ಲೇ ಗಣಿತ ಹಾಸು ಹೊಕ್ಕಿದೆ. ವಿವಿಧ ಕ್ಷೇತ್ರಗಳಲ್ಲೂ ಗಣಿತದ ಪ್ರಾಮುಖ್ಯತೆಯು ದ್ವಿಗುಣಗೊಳ್ಳುತ್ತದಲೇ ಇದೆ. ವಿದ್ಯಾರ್ಥಿಗಳು ಗಣಿತವನ್ನು ಸರಿಯಾಗಿ ಅರ್ಥೈಸಿಕೊಂಡು, ಗಣಿತವನ್ನು ಕರಗತ ಮಾಡಿಕೊಂಡಾಗ ನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಹ ಕಂಡುಕೊಳ್ಳಲು ಸಾಧ್ಯವಿದೆ ಎಂದರು.ಕಾಲೇಜು ಪ್ರಾಚಾರ್ಯರಾದ ಪ್ರೊ.ಎಂ.ಬಿ.ರೂಪಶ್ರೀ ಅಧ್ಯಕ್ಷತೆ ವಹಿಸಿದ್ದರು. ದಾವಿವಿ ರಿಜಿಸ್ಟ್ರಾರ್ ಪ್ರೊ.ಯು.ಎಸ್.ಮಹಾಬಲೇಶ, ಬಾಪೂಜಿ ವಿದ್ಯಾ ಸಂಸ್ಥೆ ಖಜಾಂಚಿ ಎ.ಎಸ್.ನಿರಂಜನ್, ದಾವಿವಿ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಬಿ.ಸಿ.ಪ್ರಸನ್ನಕುಮಾರ, ಕಾಲೇಜಿನ ಗಣಿತ ಶಾಸ್ತ್ರ ಮುಖ್ಯಸ್ಥರಾದ ಡಾ.ಬಿ.ಸಿ.ಚೇತನಾ, ರಸಾಯನಶಾಸ್ತ್ರ ವಿಭಾಗ ಪ್ರಾಧ್ಯಾಪಕಿ ಡಾ.ಎಚ್.ಬಿ.ವಿ.ಸೌಮ್ಯ, ಐಕ್ಯುಎಸಿ ಸಂಯೋಜಕ ಡಾ.ಟಿ.ಮಂಜುನಾಥ, ವಿದ್ಯಾರ್ಥಿನಿ ಪುಷ್ಪಾ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))