ಕಲ್ಲು ಹೊಡೆದ ಕಿಡಿಗೇಡಿಗಳಿಗೆ ಕ್ಷಮೆಯೇ ಇಲ್ಲ: ಶಾಸಕ ಕೆ.ಎಂ.ಉದಯ್

| Published : Sep 18 2025, 01:10 AM IST

ಕಲ್ಲು ಹೊಡೆದ ಕಿಡಿಗೇಡಿಗಳಿಗೆ ಕ್ಷಮೆಯೇ ಇಲ್ಲ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ತಾಲೂಕಿನಲ್ಲಿ ಶೇ.೯೭ರಷ್ಟು ಹಿಂದೂಗಳು ಇದ್ದಾರೆ. ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಮರ್ಥರು ಇಲ್ಲೇ ಇದ್ದಾರೆ. ಆದರೆ, ಎಲ್ಲಿಂದಲೋ ಬಂದವರು ಇಲ್ಲಿನ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಘಟನೆಗಳು ನಡೆದಾಗ ಯಾವುದೇ ಪಕ್ಷದವರಾದರೂ ಆಗಲಿ ಶಾಂತಿ ಕಾಪಾಡುವ ಕೆಲಸ ಮಾಡಬೇಕು. ಆದರೆ, ಬೆಂಕಿ ಹಚ್ಚುವ ಕೆಲಸ ಮಾಡಬಾರದು.

ಕನ್ನಡಪ್ರಭ ವಾರ್ತೆ ಮದ್ದೂರು

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳಿಗೆ ಕ್ಷಮೆಯೇ ಇಲ್ಲ ಎಂದು ಶಾಸಕ ಕೆ.ಎಂ. ಉದಯ್ ಸ್ಪಷ್ಟವಾಗಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೋಮು ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಘಟನೆ ಪಟ್ಟಣದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಈ ವರ್ಷ ಆಕಸ್ಮಿಕವಾಗಿ ಘಟನೆ ನಡೆದುಹೋಗಿದೆ. ಶಾಂತಿಯನ್ನು ಕದಡಿರುವ ಕಿಡಿಗೇಡಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.

ಬೆಂಕಿ ಹಚ್ಚುವ ಕೆಲಸ ಸಲ್ಲದು:

ಮದ್ದೂರು ತಾಲೂಕಿನಲ್ಲಿ ಶೇ.೯೭ರಷ್ಟು ಹಿಂದೂಗಳು ಇದ್ದಾರೆ. ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಮರ್ಥರು ಇಲ್ಲೇ ಇದ್ದಾರೆ. ಆದರೆ, ಎಲ್ಲಿಂದಲೋ ಬಂದವರು ಇಲ್ಲಿನ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಘಟನೆಗಳು ನಡೆದಾಗ ಯಾವುದೇ ಪಕ್ಷದವರಾದರೂ ಆಗಲಿ ಶಾಂತಿ ಕಾಪಾಡುವ ಕೆಲಸ ಮಾಡಬೇಕು. ಆದರೆ, ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಕೆಲವರು ರಾಜಕೀಯವಾಗಿ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು.

ನಾವೆಲ್ಲಾ ಹಿಂದೂಗಳೇ. ನಾನೂ ಸಹ ಸಾಕಷ್ಟು ದೇವಾಲಯ ಜೀರ್ಣೋದ್ಧಾರ ಮಾಡಿದ್ದೇನೆ. ಯಾರೋ ಎಲ್ಲಿಂದಲೋ ಬಂದು ನನ್ನ ಮತ್ತು ಸರ್ಕಾರದ ವಿರುದ್ಧ ಮಾತನಾಡುವುದು ಸಮಂಜಸವಲ್ಲ. ಶಾಂತಿಭಂಗ ತರುವ ಕೆಲಸ ಮಾಡಬೇಡಿ. ಈಗಾಗಲೇ ಪೊಲೀಸರು ೨೨ ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವರಿಗೆ ಹುಡುಕಾಟ ನಡೆದಿದೆ. ತನಿಖೆ ಪ್ರಗತಿಯಲ್ಲಿದ್ದು, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದರು.

ಹೊರಗಿನವರಿಂದ ಬುದ್ಧಿ ಹೇಳಿಸಿಕೊಳ್ಳಬೇಕಿಲ್ಲ:

ಮದ್ದೂರು ಗಣೇಶ ಮೆರವಣಿಗೆ ಮೇಲೆ ಕಲ್ಲುತೂರಾಟ ಪ್ರಕರಣ ನಡೆದ ದಿನ ಬೆಳಗ್ಗೆ ವಿದೇಶಕ್ಕೆ ತೆರಳಿದ್ದೆ. ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗಿರಲಿಲ್ಲ. ಮಗಳ ಕಾಲೇಜು ಪ್ರವೇಶ ಮಾಡಿಸಲು ಹೋಗಿದ್ದೆನು. ಆ ದಿನ ರಾತ್ರಿಯೇ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ಳುತ್ತಿದ್ದೆನು. ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತಂದು ಶಾಂತಿ ನೆಲೆಸುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.

ಫೋಕ್ಸೋ ಕೇಸ್ ಹಾಕಿಸಿಕೊಂಡವರು, ಲಂಚ ಪಡೆದು ಬಂಧನಕ್ಕೊಳಗಾದವರು ಮದ್ದೂರಿಗೆ ಬಂದು ಬುದ್ಧಿ ಹೇಳಬೇಕಾ. ಮದ್ದೂರಿಗೆ ಇವರ ಕೊಡುಗೆ ಏನಿದೆ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದ ಕೆ.ಎಂ.ಉದಯ್, ಯುವಕರನ್ನು ದಿಕ್ಕು ತಪ್ಪಿಸಬೇಡಿ. ಮಾಧ್ಯಮಗಳ ಮುಂದೆ ಶೋ ಕೊಟ್ಟು ಪ್ರಚೋದನಕಾರಿ ಭಾಷಣ ಮಾಡುತ್ತಾ ಮಂಡ್ಯವನ್ನು ಮಂಗಳೂರು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಮದ್ದೂರಿನಲ್ಲಿ ಗೂಂಡಾಗಿರಿ ಸಂಸ್ಕೃತಿ ಇಲ್ಲ:

ಮಸೀದಿ ಮುಂದೆ ಶವ ಸಾಗಿಸುವ ವೇಳೆ ತಮಟೆ ಹೊಡೆಯಲು ಬಿಡಲ್ಲ, ರಸ್ತೆಯಲ್ಲಿ ಹೋಗುವುದಕ್ಕೂ ಅವಕಾಶ ನೀಡದೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ಅದನ್ನು ಪ್ರಶ್ನಿಸಿದರೆ ಹೊಡೆಯಲು ಬರುತ್ತಾರೆ ಎಂಬ ಸ್ಥಳೀಯರ ಆರೋಪದ ಬಗ್ಗೆ ಕೇಳಿದಾಗ, ಆ ಸ್ಥಳೀಯರ ಪೈಕಿ ಒಂದಿಬ್ಬರಿಗೆ ವೈಮನಸ್ಸಿದೆ. ಈ ಎಲ್ಲಾ ಸಮಸ್ಯೆಗಳು ಮುಂದೆ ಎದುರಾಗದಂತೆ ಪರಿಹಾರ ಸೂಚಿಸಲಾಗುವುದು. ರಾಮ್-ರಹೀಂ ನಗರದಲ್ಲಿ ಪೊಲೀಸ್ ಚೌಕಿ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವುದಾಗಿ ಹೇಳಿದರು.

ಕಾಂಗ್ರೆಸ್ ಸರ್ಕಾರ ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಬಿಜೆಪಿ-ಜೆಡಿಎಸ್ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಹೋರಾಟ ಮಾಡುವುದಿಲ್ಲ. ಬಿಜೆಪಿ-ಜೆಡಿಎಸ್ ನಾಯಕರು ಯಾರಾದರೂ ಹಿಂದೂಗಳಿಗೆ ಸಹಾಯ ಮಾಡಿದ್ದಾರೆಯೇ. ಕೇವಲ ಧರ್ಮ ವಿಚಾರ ಮುಂದಿಟ್ಟು ರಾಜಕೀಯವಾಗಿ ನೆಲೆ ನಿಲ್ಲುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ ಎಂದು ಟೀಕಿಸಿದರು.

ನನ್ನಷ್ಟು ಯಾರೂ ಅನುದಾನ ತಂದಿಲ್ಲ:

ನಾನು ಶಾಸಕನಾದ ಬಳಿಕ ರಸ್ತೆ, ಚರಂಡಿ, ಸೇತುವೆ, ನೀರಾವರಿ ಯೋಜನೆಗಳಿಗೆ ನಾನು ತಂದಿರುವಷ್ಟು ಅನುದಾವನ್ನು ಇಂದಿನ ಯಾವ ಶಾಸಕರೂ ತಂದಿಲ್ಲ. ಕ್ಷೇತ್ರದ ಅಭಿವೃದ್ಧಿ ಮಾಡುವುದು ನಮ್ಮ ಕೆಲಸ. ಹಿಂದೆ ಅಧಿಕಾರದಲ್ಲಿದ್ದವರೆಲ್ಲಾ ಏನು ಕೊಡುಗೆ ಕೊಟ್ಟಿದ್ದಾರೆ. ನಾನು ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಕೋಟಿ ರು. ಹಣ ತಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ ಎಂದರು.

ಗೋಷ್ಠಿಯಲ್ಲಿ ಕೆ.ಎಂ.ದೊಡ್ಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ನಗರಸಭೆ ಅಧ್ಯಕ್ಷೆ ಕೋಕಿಲಾ, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಇದ್ದರು.ಅವಶ್ಯಕತೆ ಇರಲಿಲ್ಲ

ಪ್ರಗತಿಪರ ಸಂಘಟನೆಗಳು ಯಾವ ಉದ್ದೇಶದಿಂದ ಸಾಮರಸ್ಯ ನಡಿಗೆ ಕಾರ್ಯಕ್ರಮ ಆಯೋಜಿಸಿವೆಯೋ ಗೊತ್ತಿಲ್ಲ. ಈಗ ಅದರ ಅವಶ್ಯಕತೆ ಇರಲಿಲ್ಲ. ಅವರೊಂದಿಗೆ ನಾನೂ ಕೂಡ ಚರ್ಚೆ ಮಾಡುತ್ತೇನೆ. ಪಟ್ಟಣದಲ್ಲಿ ಶಾಂತಿ ಕದಡದಂತೆ ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ.

- ಕೆ.ಎಂ.ಉದಯ್‌, ಶಾಸಕ

ಸೆ.೨೨ರಂದು ಮದ್ದೂರಿನಲ್ಲಿ ಸಾಮರಸ್ಯ ನಡಿಗೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಉಂಟಾದ ಗಲಭೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ನಡುವೆ ಸೌಹಾರ್ದತೆ, ಸಾಮರಸ್ಯ ಬೆಳೆಸಲು ಪರಸ್ಪರ ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಪ್ರಗತಿಪರ ಸಂಘಟನೆಗಳ ವತಿಯಿಂದ ಸೆ.೨೨ರಂದು ಸಾಮರಸ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦.೩೦ಕ್ಕೆ ಪಟ್ಟಣದ ಟಿ.ಬಿ. ವೃತ್ತದಿಂದ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಪ್ರತಿಮೆ ಬಳಿಯಿಂದ ಆರಂಭಗೊಳ್ಳುವ ನಡಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐತಿಹಾಸಿಕ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಬಳಿ ಸಮಾವೇಶಗೊಳ್ಳಲಿದೆ ಎಂದರು.

ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುವ ಕ್ರಿಮಿನಲ್‌ಗಳನ್ನು ಕ್ರಿಮಿಲ್‌ಗಳಾಗಿಯೇ ನೋಡಬೇಕು. ಅಂಬೇಡ್ಕರ್ ಬರೆದ ಸಂವಿಧಾನ ನೀಡಿರುವ ಕಾನೂನಿನ ವ್ಯಾಪ್ತಿಯಲ್ಲಿ ಕ್ರಿಮಿನಲ್‌ಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಸೌಹಾರ್ದ-ಸಾಮರಸ್ಯದ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಮುಖಂಡರಾದ ಶಿವರಾಜ್ ಮರಳಿಗ, ಶಂಕರೇಗೌಡ ಬೋರಾಪುರ, ಜಗದೀಶ್ ನಗರಕೆರೆ, ಹುರುಗಲವಾಡಿ ರಾಮಯ್ಯ ಇತರರಿದ್ದರು.