ಸಾರಾಂಶ
- ಬೆಟ್ಟತಾವರೆಕೆರೆಯಲ್ಲಿ ಕನ್ನಡ ಜಾನಪದ ಪರಿಷತ್ ನ ಜಿಲ್ಲಾ ದಶಮಾನೋತ್ಸವ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ
ಜಾನಪದ ಧರ್ಮತೀತವಾದದ್ದು ಇದಕ್ಕೆ ಯಾವುದೇ ಚೌಕಟ್ಟು, ಇತಿಮಿತಿ ಇಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ತಿಳಿಸಿದರು.ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದಿಂದ ಬೆಟ್ಟ ತಾವರೆಕೆರೆ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದ ಜಿಲ್ಲಾ ದಶಮಾನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾಗಿದ್ದು ಎಂದಿಗೂ ನಶಿಸುವುದಿಲ್ಲ. ಕಾಲ ಕ್ರಮೇಣ ಪರಿವರ್ತನೆಗೊಳ್ಳುವ ಶಕ್ತಿ ಜಾನಪದ ಹೊಂದಿದೆ. ಎಷ್ಟೇ ಪಾಶ್ಚಾತ್ಯ ಸಂಸ್ಕೃತಿ ಬಂದರೂ ಜಾನಪದ ಸೊಗಡನ್ನು ಅಳಿಸಲು ಸಾಧ್ಯವಿಲ್ಲ. ನಮ್ಮ ಜಾನಪದ ಬೆಸೆಯುವ ಶಕ್ತಿ ಹೊಂದಿದೆ. ಈ ಕುರಿತು ಶಾಲಾ ಮತ್ತು ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಈ ದೆಸೆಯಲ್ಲಿ ಜಿಲ್ಲಾ ಮಹಿಳಾ ಘಟಕವು ಕಾರ್ಯ ಪ್ರವೃತ್ತವಾಗಿದೆ ಎಂದು ತಿಳಿಸಿದರು.ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಜಾನಪದ ನೂರೊಂದು ಕೃತಿ ಬಿಡುಗಡೆ ನೆರವೇರಿಸಿ ಮಾತನಾಡಿ ಜನಪದ ಗೀತೆಗಳು ಮಾನವೀಯ ಮೌಲ್ಯ ಹಾಗೂ ಜೀವನ ಪಾಠ ಕಲಿಸುತ್ತದೆ. ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ದೇವೇಂದ್ರಪ್ಪ ಮಾತನಾಡಿ ತರೀಕೆರೆಯಲ್ಲಿ ಬಹಳಷ್ಟು ಜಾನಪದ ಪ್ರಕಾರಗಳಿದ್ದು ಇವುಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಜಿಲ್ಲಾ ಮಹಿಳಾ ಘಟಕ ಕೆಲಸ ಮಾಡುತ್ತಿರುವುದನ್ನು ಪ್ರಶಂಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ ಮಂಜುಳಾ ಹುಲ್ಲಳ್ಳಿ ಮಾತನಾಡಿ ಜಾನಪದ ನೂರೊಂದು ಕೃತಿ ಕರೋನ ಕಾಲಘಟ್ಟದಲ್ಲಿ ನಡೆದ ನೂರೊಂದು ವಿಚಾರ ಸಂಕಿರಣಗಳ ಬಹಳ ಪ್ರಮುಖ ಲೇಖನ ಗಳಾಗಿದ್ದು ನಾಡಿನ ಬಹುತೇಕ ವಿದ್ವಾಂಸರ ಲೇಖನಗಳನ್ನು ಕೃತಿ ಒಳಗೊಂಡು ಒಂದು ಆಕಾರ ಗ್ರಂಥವಾಗಿದೆ ಎಂದು ತಿಳಿಸಿದರು.
ಬೆಟ್ಟತಾವರೆಕೆರೆ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಪ್ರಾಂಶುಪಾಲ ಸುವರ್ಣ ಅನಂತ ನಾಯ್ಕ್ ಮಾತನಾಡಿ, ಜಾನಪದ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ತಿಳಿಸಿದರು.ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಅಧ್ಯಕ್ಷ ಎಂ.ಎಸ್. ವಿಶಾಲಕ್ಷಮ್ಮ ಕಾರ್ಯಕ್ರಕಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಶಮಾನೋತ್ಸವದಲ್ಲಿ ಹತ್ತು ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡುವುದಲ್ಲದೆ ಎಲ್ಲಾ ತಾಲೂಕುಗಳಲ್ಲೂ ಸಹ ಹತ್ತು ಕಲಾವಿದರನ್ನು ಮುಂದಿನ ದಿನಗಳಲ್ಲಿ ಗುರುತಿಸಿ ಗೌರವಿಸಲಾಗುವುದು ಅಳಿವಿನಂಚಿನ ಕಲೆಗಳನ್ನು ಮಹಿಳಾ ಘಟಕದಿಂದ ಸಂರಕ್ಷ್ಮಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಪ್ರದಾನ ಕಾರ್ಯದರ್ಶಿ ಆಶಾ ರಾಜು, ಮಹಿಳಾ ಘಟಕದ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ,ರಾಮನಗರ ಜಿಲ್ಲಾಧ್ಯಕ್ಷ ಕೆ. ಸಿ. ಕಾಂತಪ್ಪ, ಕೊಪ್ಪ ಜಿಲ್ಲಾಧ್ಯಕ್ಷ ವಿಜಯ್, ರತ್ನಾಕರ್, ವಿಜಯಕುಮಾರಿ, ಕಲಾ ಮಾಲತೇಶ್, ತರೀಕೆರೆ ಸೀನಿಯರ್ ಚೇಂಬರ್ ಅಧ್ಯಕ್ಷೆ ಆಶಾ ಭೋಸ್ಲೆ, ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಸಮಿತಿ ಎಲ್ಲಾ ಸದಸ್ಯರು ತಾಲೂಕಿನ ಅಧ್ಯಕ್ಷರು ಹೋಬಳಿ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.
17ಕೆಟಿಆರ್.ಕೆ.10ಃ ತರೀಕೆರೆ ಸಮೀಪದ ಬೆಟ್ಟತಾವರೆಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್. ಬಾಲಾಜಿ ಉದ್ಘಾಟಿಸಿದರು. ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಅಧ್ಯಕ್ಷೆ ಎಂ.ಎಸ್. ವಿಶಾಲಕ್ಷಮ್ಮ ಮತ್ತಿತರರು ಇದ್ದರು.