ತಾಯಿಗಿಂತ ದೊಡ್ಡ ಶಕ್ತಿ ಜಗತ್ತಿನಲ್ಲಿಲ್ಲ

| Published : Dec 16 2024, 12:46 AM IST

ಸಾರಾಂಶ

ಭಗವಂತನಿಗೂ ಭಕ್ತಿಗೂ ಮಧ್ಯೆ ಇರುವ ಅಜ್ಞಾನ ಮತ್ತು ಅಹಂಕಾರ ಎಂಬ ಪರದೆಯದನ್ನು ಸರಿಸಿದಾಗ ಮಾತ್ರ ದೇವರು ಕಾಣಿಸುತ್ತಾನೆ. ನಂಬಿಕೆಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಸಿದ್ಧಗಂಗಾ ಮಠಾಧೀಶರಾದ ಡಾ. ಶಿವಕುಮಾರಸ್ವಾಮಿಗಳು ಅಭಿಪ್ರಾಯಪಟ್ಟರು. ತಾಯಿ ಮಕ್ಕಳಿಗೆ ಕೊಡುವಂತಹ ಸಂಸ್ಕಾರ ಯಾರಿಂದಲೂ ಕೊಡಲು ಸಾಧ್ಯವಿಲ್ಲ. ತಾಯಿಗಿಂತ ದೊಡ್ಡ ಶಕ್ತಿ, ದೊಡ್ಡ ದೇವರು ಜಗತ್ತಿನಲ್ಲಿ ಕಾಣುವುದಿಲ್ಲ. ದೇವರು ಸೇರಿದಂತೆ ಯಾವುದೇ ಋಣ ತೀರಿಸಬಹುದು. ಆದರೆ ತಾಯಿ ಋಣ ತೀರಿಸಲು ಸಾಧ್ಯವಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಭಗವಂತನಿಗೂ ಭಕ್ತಿಗೂ ಮಧ್ಯೆ ಇರುವ ಅಜ್ಞಾನ ಮತ್ತು ಅಹಂಕಾರ ಎಂಬ ಪರದೆಯದನ್ನು ಸರಿಸಿದಾಗ ಮಾತ್ರ ದೇವರು ಕಾಣಿಸುತ್ತಾನೆ. ನಂಬಿಕೆಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಸಿದ್ಧಗಂಗಾ ಮಠಾಧೀಶರಾದ ಡಾ. ಶಿವಕುಮಾರಸ್ವಾಮಿಗಳು ಅಭಿಪ್ರಾಯಪಟ್ಟರು.

ಪಟ್ಟಣದ ಪಕ್ಕದಲ್ಲೇ ಇರುವ ದಡದಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವ್ವಾಮಿ ದೇವಾಲಯದ ಶಿಖರ ಕಲಶಾರೋಹಣ ಹಾಗೂ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಮನೆ ಎಂದರೆ ಮನಸ್ಸಿನ ನೆಮ್ಮದಿ ಎಂದರ್ಥ. ಮನೆ ಯಾವಾಗಲೂ ಸಂಸ್ಕಾರವಂತಾಗಿದ್ದರೆ ನೆಮ್ಮದಿ, ಶಾಂತಿ ಮತ್ತು ಸಮಾಧಾನ ಸಿಗುತ್ತದೆ. ತಾಯಿ ಮಕ್ಕಳಿಗೆ ಕೊಡುವಂತಹ ಸಂಸ್ಕಾರ ಯಾರಿಂದಲೂ ಕೊಡಲು ಸಾಧ್ಯವಿಲ್ಲ. ತಾಯಿಗಿಂತ ದೊಡ್ಡ ಶಕ್ತಿ, ದೊಡ್ಡ ದೇವರು ಜಗತ್ತಿನಲ್ಲಿ ಕಾಣುವುದಿಲ್ಲ. ದೇವರು ಸೇರಿದಂತೆ ಯಾವುದೇ ಋಣ ತೀರಿಸಬಹುದು. ಆದರೆ ತಾಯಿ ಋಣ ತೀರಿಸಲು ಸಾಧ್ಯವಿಲ್ಲ ಎಂದರು.

ಕಾರ್ಜುವಳ್ಳಿ ಹಿರೇಮಠಾಧೀಶರಾದ ಸದಾಶಿವ ಶಿವಾಚಾರ್ಯ ರವರು ಮಾತನಾಡಿ, ಆಂಜನೇಯನನ್ನು ಕೊಟ್ಟಂತಹ ನಾಡು ನಮ್ಮ ಕರುನಾಡು ಎಂದರು. ಇತ್ತೀಚಿನ ದಿನಗಳಲ್ಲಿ ಗಣೇಶ, ವೀರಭದ್ರ ಮತ್ತು ಆಂಜನೇಯಸ್ವಾಮಿಯನ್ನು ಜನರು ಹೆಚ್ಚು ಆರಾಧಿಸುತ್ತಿದ್ದಾರೆ ಎಂದರು.

ಕೊಡ್ಲಿಪೇಟೆ ಕಲ್ಲು ಮಠಾಧೀಶರಾದ ಸ್ವರೂಪಿ ಮಹಾಂತ ಸ್ವಾಮಿಗಳು ಮಾತನಾಡಿ, ವೈಜ್ಞಾನಿಕವಾಗಿ ನಾವು ಎಷ್ಟೇ ಅನುಕೂಲಗಳನ್ನು ಪಡೆದಿದ್ದರೂ ಆಂತರಿಕವಾಗಿ ನೆಮ್ಮದಿಯಾಗಿ ಬದುಕಲು ದೇವಸ್ಥಾನ ಮಠಗಳು ಬೇಕು. ಈ ಭೂಮಿಯಲ್ಲಿ ನಾವುಗಳು ಅತಿಥಿಗಳು. ಕಾಲ ಮುಗಿದ ನಂತರ ಕರೆದಾಗ ಹೋಗಬೇಕು. ನಾವು ಸಂಸ್ಕಾರವಂತರಾದರೆ ಮುಂದಿನ ಮಕ್ಕಳು ಧಾರ್ಮಿಕವಾಗಿ ಉತ್ತಮ ದಾರಿಯಲ್ಲಿ ಸಾಗುತ್ತಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಎಂ. ಎಸ್. ನಾಗೇಂದ್ರ ಸೇವಾ ಪ್ರತಿಷ್ಠಾನ ಅಧ್ಯಕ್ಷ ಸಿದ್ದೇಶ್ ನಾಗೇಂದ್ರರವರು ಮಾತನಾಡಿ, ದಿನಪತ್ರಿಕೆಗಳನ್ನು ಓದುವುದರಿಂದ ಜ್ಞಾನವೃದ್ಧಿಯಾಗುತ್ತದೆ. ಮೊಬೈಲ್ ಬಳಕೆಯಿಂದ ಸಾಮಾಜಿಕ ಜ್ಞಾನ ಕುಸಿಯುತ್ತಿದೆ. ಭಗವಂತ ಮತ್ತು ಭಕ್ತನ ಮಧ್ಯೆ ಇರುವ ಏಕೈಕ ಸೂತ್ರ ಭಕ್ತಿ. ಅದನ್ನು ಗುರುವರ್ಯರ ಮುಖಾಂತರ ಕಾಣುತ್ತೇವೆ ಎಂದರು.

ಕಲ್ಲುಮಠಾಧೀಶರಾದ ಸದಾಶಿವ ಸ್ವಾಮಿಗಳು, ತಣ್ಣೀರುಹಳ್ಳ ಮಠಾಧೀಶರಾದ ವಿಜಯಕುಮಾರ ಸ್ವಾಮಿಗಳು, ಡಿ. ಎಸ್. ನಂಜುಂಡಪ್ಪ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿ. ರೇಣುಕಪ್ರಸಾದ್, ಕೆ. ಎಸ್. ಮಂಜೇಗೌಡ, ವಿರೂಪಾಕ್ಷಪ್ಪ, ಜಯಣ್ಣ, ರುದ್ರಪ್ಪ, ಜಗದೀಶ ಶಾಸ್ತ್ರಿ ಮೊದಲಾದವರಿದ್ದರು.