ಸಾರಾಂಶ
ಬೆಳಗಾವಿ : ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಅವರ ಬಂಧನದ ಹಿಂದೆ ಯಾವುದೇ ದ್ವೇಷ ರಾಜಕಾರಣವಿಲ್ಲ, ಅವರಿಗೀಗ ಮಾಡಿದ್ದುಣ್ಣೋ ಮಾರಾಯ ಎಂಬಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಮನಿರತ್ನ ವಿಚಾರದಲ್ಲಿ ಯಾರು ದ್ವೇಷ ರಾಜಕಾರಣ ಮಾಡುತ್ತಾರೆ? ಅವರು ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರೇನು ಮುನಿರತ್ನ ಅವರಿಗೆ ಕೆಟ್ಟ ಮಾತುಗಳಿಂದ ಬೈಯಿರಿ, ಅಥವಾ ಬ್ಲಾಕ್ ಮೇಲ್ ಮಾಡಿ ಎಂದು ಹೇಳಿದ್ದಾರಾ? ಎಂದು ಪ್ರಶ್ನಿಸಿದರು.
ಕೆಲವೊಬ್ಬರು ಮಾತನಾಡುತ್ತಾರೆ ನಿಜ, ಆದರೆ, ಅದನ್ನು ಪ್ರಮಾಣಿಕರಿಸಿ ನೋಡಬೇಕು. ಆದರೆ, ಮುನಿರತ್ನ ವಿಚಾರದಲ್ಲಿ ಏನಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. ಮುನಿರತ್ನ ಅವರು ಮಹಿಳೆಯರ ಬಗ್ಗೆ ಆಡಿರುವ ಕೀಳು ಮಾತುಗಳನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವ ಮಾತುಗಳನ್ನು ಯಾರೂ ಕೂಡ ಆಡಬಾರದೆಂದು ಹೇಳಿದರು.