ಇದಕ್ಕೂ ಮುನ್ನ ಶಿವಮೊಗ್ಗದ ಗುರುಪುರ ಬಿಜಿಎಸ್ ಆಂಗ್ಲಮಾಧ್ಯಮ ಶಾಲೆ ಅಂತಾರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಆಟಗಾರರಾದ ಎಸ್.ಪವನ್ ಮತ್ತು ಎಸ್.ಪುನೀತ್ ರಾಷ್ಟ್ರಧ್ವಜಾರೋಹಣ ಮಾಡಿದರು. ಬಿಜಿಎಸ್ ಪಬ್ಲಿಕ್‌ಶಾಲೆ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ಯೋಗ ವಿದ್ಯಾರ್ಥಿನಿ ಕು.ಬಿ.ಕೆ.ಸಿಂಚನಾ ನಾಡ ಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಕ್ಕಳ ಮನಸ್ಸು ದೇವರ ಮನಸ್ಸಿದ್ದಂತೆ. ಮುಗ್ದ ಮನಸ್ಸುಗಳಲ್ಲಿ ಕಲ್ಮಶವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ಭಾವನೆಗಳಿಗೆ ಭಾಷೆಯ ಲೇಪನ ಕೊಟ್ಟು ಬರಹ ಮೂಡಿಸಲು ಸಾಧ್ಯವಾಗುವುದಾದರೆ ವೇದ ಉಪನಿಷತ್ತುಗಳಿಗೆ ಸರಿಸಮನಾದ ಸತ್ಯ ಹೊರಹೊಮ್ಮುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಾವನೆ ಶುದ್ಧವಾಗಿದ್ದರೆ ಭಾಷೆಯ ಬೆಂಬಲವಿರುವುದಿಲ್ಲ. ಕಲಿಯಬಾರದ, ಕಲಿಯಬಹುದಾದ ಎಲ್ಲಾ ಭಾಷೆಗಳನ್ನು ಕಲಿತರೆ ಭಾವನೆ ಶುದ್ಧವಾಗಿರುವುದಿಲ್ಲ. ಭಾವನೆಯನ್ನು ಶುದ್ಧವಾಗಿಟ್ಟುಕೊಂಡು ಭಾಷೆಯನ್ನು ಅಚ್ಚುಕಟ್ಟಾಗಿ ಕಲಿತ ವ್ಯಕ್ತಿ ಮಹಾನ್ ಕವಿ, ಸಾಹಿತಿಗಳಾಗಿ ಸಮಾಜವನ್ನು ತಿದ್ದುವಂತಹ ಉತ್ಕೃಷ್ಟ ಸಾಹಿತ್ಯವನ್ನು ರಚಿಸಿ ಜಗತ್ತಿಗೆ ಕೊಡುತ್ತಾರೆ ಎಂದರು.

ಈ ಕಾಲಘಟ್ಟದಲ್ಲಿ ಮಕ್ಕಳನ್ನು ಕರೆಸಿ ಸಮ್ಮೇಳನದ ಮೂಲಕ ಅವರನ್ನು ಉತ್ತೇಜಿಸಲು ಶ್ರೀಕ್ಷೇತ್ರದಲ್ಲಿ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಓದುವ ಮಕ್ಕಳೆಲ್ಲರೂ ವೈದ್ಯರು, ಇಂಜಿನಿಯರ್, ವಕೀಲರಾಗಬೇಕೆಂದು ಕನಸು ಕಾಣಲು ಹೊರಟರೆ ಕೊನೆಗೆ ಬದುಕಿನ ತುದಿಯಲ್ಲಿ ನಿಂತಾಗ ನಿರಾಶೆಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದರು.

ಚಿಕ್ಕ ವಯಸ್ಸಿನಲ್ಲೇ ಎರಡು ಡಾಕ್ಟರೇಟ್ ಪದವಿ ಪಡೆದಿರುವ ಮೈಸೂರಿನ ಪೂರ್ಣಚೇತನ ಶಾಲೆ 4ನೇ ತರಗತಿ ವಿದ್ಯಾರ್ಥಿನಿ ಡಾ.ಪೃತ್ವು ಪಿ.ಅದ್ವೈತ್ ಮಾತನಾಡಿ, ಕನ್ನಡ ಭಾಷೆ ನಮ್ಮ ಸಂಸ್ಕೃತಿ. ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಗಳನ್ನು ಮಾತನಾಡುವ ನಾವು ನಮ್ಮ ಮಾತೃಭಾಷೆಯನ್ನು ಎಷ್ಟು ಮಾತನಾಡುತ್ತಿದ್ದೇವೆಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.

ಮುದ್ರಣ ಯುಗದಿಂದ ಡಿಜಿಟಲ್ ಯುಗಕ್ಕೆ ಬಂದಿರುವ ನಮ್ಮ ಪೀಳಿಗೆಗೆ ಕನ್ನಡ ವಿಷಯಗಳೇ ತಿಳಿಯುತ್ತಿಲ್ಲ. ಸಾಮಾಜಿಕ ಜಾಲತಾಣ, ಧಾರಾವಾಹಿಗಳಲ್ಲೂ ಕೂಡ ಉತ್ತಮ ಕನ್ನಡ ಬಳಸುವುದನ್ನು ನಿಲ್ಲಿಸಿದ್ದಾರೆ. ಪೋಷಕರು ಅವರದ್ದೇ ಆದ ಚಿಂತನೆಯಲ್ಲಿ ಮುಳುಗಿದ್ದಾರೆ. ಶಾಲೆಗಳು ಇಂಗ್ಲಿಷ್ ಮೇಲೆ ನಿಂತಿವೆ. ಹೀಗಾದರೆ ಕನ್ನಡವನ್ನು ಕಲಿಸುವವರು ಯಾರು ಎಂದು ವಿಷಾದ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಪ್ರಾಸ್ತಾವಿಕ ನುಡಿಗಳಾಡಿದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ, ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ, ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿದರು.

ಇದಕ್ಕೂ ಮುನ್ನ ಶಿವಮೊಗ್ಗದ ಗುರುಪುರ ಬಿಜಿಎಸ್ ಆಂಗ್ಲಮಾಧ್ಯಮ ಶಾಲೆ ಅಂತಾರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಆಟಗಾರರಾದ ಎಸ್.ಪವನ್ ಮತ್ತು ಎಸ್.ಪುನೀತ್ ರಾಷ್ಟ್ರಧ್ವಜಾರೋಹಣ ಮಾಡಿದರು. ಬಿಜಿಎಸ್ ಪಬ್ಲಿಕ್‌ಶಾಲೆ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ಯೋಗ ವಿದ್ಯಾರ್ಥಿನಿ ಕು.ಬಿ.ಕೆ.ಸಿಂಚನಾ ನಾಡ ಧ್ವಜಾರೋಹಣ ನೆರವೇರಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಮೈಸೂರಿನ ನಾದಶ್ರೀ ಆರ್.ಭಟ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ. ಬೆಂಗಳೂರಿನ ಎನ್.ಸೃಜನಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಮತ್ತು ಶಿವಮೊಗ್ಗ ಪುರಲೆ ಗುರುಪುರದ ಬಿಜಿಎಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಮಾನ್ವಿ ಅಧ್ಯಕ್ಷತೆಯಲ್ಲಿ ಕಥಾಗೋಷ್ಠಿ ನಡೆದವು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಬೆಂಗಳೂರಿನ ಗೋಸಾಯಿ ಮಠದ ಪೀಠಾಧ್ಯಕ್ಷ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ, ಮಕ್ಕಳ ಸಾಹಿತ್ಯ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ಮಂಜುನಾಥ್, ಸಿಪಿಐ ನಿರಂಜನ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿ ವಿವಿಧ ಶಾಖಾಮಠಗಳ ಶ್ರೀಗಳು ಮತ್ತು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ವಿದ್ಯಾರ್ಥಿಗಳು ಇದ್ದರು.