ಸಾರಾಂಶ
ಚಿಕ್ಕಮಗಳೂರು, ಮಕ್ಕಳ ಮನಸ್ಸಿನಲ್ಲಿ ಕಲ್ಮಶ, ಬೇಧಭಾವ, ಜಾತಿ, ಧರ್ಮ ಎನ್ನುವುದು ಇರುವುದಿಲ್ಲ. ಎಲ್ಲರನ್ನು ಪ್ರೀತಿಸುವ, ಪರಸ್ಪರ ಒಪ್ಪಿ, ಅಪ್ಪಿಕೊಳ್ಳುವ ಮನಸ್ಸಿಯಿರುವ ಕಾರಣ ಹಿರಿಯರು ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.
ಚಿಕ್ಕಮಗಳೂರಿನ ಎಐಟಿ ಕ್ಯಾಂಪಸ್‌ನಲ್ಲಿ ಚುಂಚೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳ ಮನಸ್ಸಿನಲ್ಲಿ ಕಲ್ಮಶ, ಬೇಧಭಾವ, ಜಾತಿ, ಧರ್ಮ ಎನ್ನುವುದು ಇರುವುದಿಲ್ಲ. ಎಲ್ಲರನ್ನು ಪ್ರೀತಿಸುವ, ಪರಸ್ಪರ ಒಪ್ಪಿ, ಅಪ್ಪಿಕೊಳ್ಳುವ ಮನಸ್ಸಿಯಿರುವ ಕಾರಣ ಹಿರಿಯರು ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.ನಗರದ ಎಐಟಿ ಕ್ಯಾಂಪಸ್‌ನಲ್ಲಿ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಹಾಗೂ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಚುಂಚೋತ್ಸವ ಉದ್ಘಾಟಿಸಿ ಶ್ರೀಗಳು ಆರ್ಶೀವಚನ ನೀಡಿದರು. ಶಿಕ್ಷಕರಿಗಿಂತ ಮೊದಲು ಪಾಲಕರು ಮಕ್ಕಳ ಮನಸ್ಸನ್ನು ಅರ್ಥೈಸಿಕೊಳ್ಳಬೇಕು. ಮಾನವ ಜನಿಸುವಾಗ ವಿಶ್ವಮಾನವನಾಗುತ್ತಾನೆ. ಬೆಳೆಯುತ್ತಾ ಅಲ್ಪಮಾನವರಾಗುತ್ತಾನೆ. ಹೀಗಾಗಿ ಬಾಲ್ಯದಲ್ಲೇ ಮಕ್ಕಳ ಮನಸ್ಸಿನೆಂಬ ಕೈಚೀಲವನ್ನು ಸಂಸ್ಕಾರ, ಸಂಸ್ಕೃತಿಯಿಂದ ತುಂಬಿಸಬೇಕು. ಆಸಕ್ತಿ ಹೊಂದಿರುವ ಚಟುವಟಿಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಚಂಚಲತೆ, ಸ್ಥಿರವಾಗಿ ನಿಲ್ಲದ ಮನಸ್ಸುಗಳು ಮಕ್ಕಳಲ್ಲಿವೆ. ಸೂಕ್ಷ್ಮವಾಗಿ ಅರಿತು ಒಳಿತಿನ ದಾರಿಯಲ್ಲಿ ಕೊಂಡೊಯ್ಯುವುದು ಶಿಕ್ಷಕರ ಜವಾಬ್ದಾರಿ. ಪಠ್ಯೇತರ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಾತ್ಮಕ ಒಲವು ಮೂಡಿಸುವುದು ಅಗತ್ಯ. ಹಸಿ ಗೋಡೆಯಂತಿರುವ ಮಕ್ಕಳ ಮನಸ್ಸನ್ನು ಸದೃಢವಾಗಿಸಲು ಎಳೆ ವಯಸ್ಸಿನಿಂದಲೇ ತಿದ್ದಿ ತೀಡಬೇಕು ಎಂದು ತಿಳಿಸಿದರು.ಬಾಲ್ಯದಿಂದಲೇ ಮಕ್ಕಳು ಶ್ರದ್ಧೆಯಿಂದ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು. ಭವಿಷ್ಯದಲ್ಲಿ ಸಮಾಜ ರಕ್ಷಿಸುವ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಅಥವಾ ಪೊಲೀಸ್ ಸ್ಥಾನ ಅಲಂಕರಿಸಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಕಾಪಾಡುವಂಥ ದೊಡ್ಡ ಜವಾಬ್ದಾರಿ ಹೊತ್ತು ಮುನ್ನಡೆಯಬಹುದು ಎಂದರು.ತುಮಕೂರಿನ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದೆಂಬ ದೃಷ್ಟಿಯಿಂದ ನಾಲ್ಕೈದು ದಶಕಗಳ ಹಿಂದೆಯೇ ಶ್ರೀ ಬಾಲಗಂಗಾಧರನಾಥ ಶ್ರೀ ಗಳು ಶಾಲಾ ಕಾಲೇಜು ಆರಂಭಿಸಿ ಸರ್ವ ಧರ್ಮೀಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಕರುಣಿಸಿದ ಪರಿಣಾಮ ದೇಶ, ವಿದೇಶಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಮಾತನಾಡಿ, ಪ್ರಪಂಚದಲ್ಲೇ ಭಾರತೀಯ ಜ್ಞಾನ ಭಂಡಾರಕ್ಕೆ ವಿಶಿಷ್ಟ ಶಕ್ತಿ ಹಾಗೂ ಋಷಿಮುನಿಗಳ ಪರಂಪರೆ ಇರುವ ಕಾರಣ ಸದೃಢವಾಗಿ ನಿಂತುಕೊಂಡಿದೆ. ಭಾರತೀಯ ಪಾಂಡಿತ್ಯದ ಅರಿವು ಹೊಂದಲು ವಿದೇಶಿಗರು ದೇಶಕ್ಕೆ ಆಗಮಿಸಿ ಆಳವಾದ ಅಧ್ಯಯನ ನಡೆಸುತ್ತಿರುವುದು ಕಣ್ಮುಂದಿದೆ ಎಂದರು.ಜ್ಞಾನ, ತಂತ್ರಜ್ಞಾನ ಹಾಗೂ ವಿಜ್ಞಾನ ಪರಿಚಯಿಸುವ ನಿಟ್ಟಿನಲ್ಲಿ ಶ್ರೀಗಳು ಹಿಂದೆಯೇ ಮುಂದಾಲೋಚಿಸಿ ಶಾಲೆಗಳನ್ನು ತೆರೆ ದಿದ್ದಾರೆ. ಇಂದು ವಿದ್ಯಾರ್ಥಿಗಳು ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಲು ಕಠಿಣ ಪರಿಶ್ರಮದ ಅಗತ್ಯವಿದ್ದು ಹೆಚ್ಚು ವಿದ್ಯಾರ್ಜನೆ ಯಲ್ಲಿ ತೊಡಗಿಸಿಕೊಂಡರೆ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟನಾಯ್ಕ್ ಮಾತನಾಡಿ, ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳು, ಬದುಕೆಂಬ ಜೀವನದಲ್ಲಿ ಉತ್ತಮ ಅಂಕಗಳಿಸಲು ಪರಿಶ್ರಮದ ಅಗತ್ಯ. ಪಾಲಕರು ಮಕ್ಕಳಿಗೆ ಭಗವದ್ಗೀತಾ ಗ್ರಂಥಗಳ ಶ್ಲೋಕಗಳನ್ನು ಅಭ್ಯಾಸಿಸುವ ಜೊತೆಗೆ ಸಂಸ್ಕಾರನ್ನು ಕಲಿಸುವುದು ಅತಿಮುಖ್ಯ ಎಂದರು.ಇದೇ ವೇಳೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶ್ರೀ ಗುಣನಾಥ ಸ್ವಾಮೀಜಿ ಬಹುಮಾನ ವಿತರಿಸಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದಲ್ಲಿ ಡಿಡಿಪಿಐ ಪುಟ್ಟರಾಜು, ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಜಿ.ಆರ್.ಚಂದ್ರಶೇಖರ್ ಹಾಜರಿದ್ದರು. 5 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕ್ಯಾಂಪಸ್‌ನಲ್ಲಿ ನಡೆದ ಚುಂಚೋತ್ಸವ ಕಾರ್ಯಕ್ರಮವನ್ನು ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಡಾ. ಸಿ.ಟಿ. ಜಯದೇವ್, ಪುಟ್ಟನಾಯ್ಕ್, ಜೆ.ಜಿ. ಸುರೇಂದ್ರ ಇದ್ದರು.