ಸಾರಾಂಶ
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇತ್ತೀಚೆಗೆ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಉಡುಪಿ ಜಿಲ್ಲೆಯಲ್ಲಿ 52 ಅಂಗನವಾಡಿ ಶಿಕ್ಷಕಿಯರನ್ನು ನೇಮಕ ಮಾಡಲಾಗಿದೆ. ಈ ಪೈಕಿ 51 ಮಂದಿಗೆ ಆದೇಶ ಪತ್ರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಪಾರದರ್ಶಕವಾಗಿ ಆಯ್ಕೆ ನಡೆದಿದೆ. ಯಾವುದೇ ಹಸ್ತಕ್ಷೇಪ ಆಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಡುಪಿ ಜಿಲ್ಲೆಯಲ್ಲಿ 52 ಅಂಗನವಾಡಿ ಶಿಕ್ಷಕಿಯರನ್ನು ನೇಮಕ ಮಾಡಲಾಗಿದೆ. ಈ ಪೈಕಿ 51 ಮಂದಿಗೆ ಆದೇಶ ಪತ್ರ ನೀಡಲಾಗಿದೆ. ಓರ್ವ ಅಭ್ಯರ್ಥಿ ವಿದ್ಯಾ ಗೋವಿಂದ್ ಪೂಜಾರಿ ಅವರ ಆಯ್ಕೆಗೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಅವರ ಆಯ್ಕೆ ತಡೆಹಿಡಿಯಲಾಗಿತ್ತು. ಇದೀಗ ಅವರಿಗೂ ಆದೇಶ ಪತ್ರ ನೀಡಲಾಗಿದೆ ಎಂದು ಉತ್ತರಿಸಿದರು.ಎಲ್ಲರಿಗೂ ನ್ಯಾಯ ಒದಗಿಸಿಕೊಡುವುದೇ ನಮ್ಮ ಸರ್ಕಾರದ ಉದ್ದೇಶ, ಶಿಕ್ಷಕರ ಆಯ್ಕೆಯಲ್ಲಿ ಯಾರೂ ಹಸ್ತಕ್ಷೇಪ ನಡೆಸಿದಿಲ್ಲ. ಯಾವುದೇ ಒತ್ತಡಕ್ಕೂ ಮಣಿದಿಲ್ಲ ಎಂದು ಸಚಿವೆ ಹೇಳಿದರು. ಗುಡ್ಡಗಾಡು ಪ್ರದೇಶಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು (ಮಡಿಕೇರಿ) ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಾಸಸ್ಥಳದಿಂದ ಅಂಗನವಾಡಿ ಕೇಂದ್ರಕ್ಕೆ ಇರುವ ಅಂತರವನ್ನು 3 ಕಿ.ಮೀ.ನಿಂದ 5 ಕಿ.ಮೀ.ಗೆ ವಿಸ್ತರಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವಾವಧಿಯಲ್ಲಿ 2 ಸ್ಥಾನಪಲ್ಲಟಗಳಿಗೆ ಅವಕಾಶವಿರುವುದನ್ನು ಮಾರ್ಪಾಡು ಮಾಡಿ ತುರ್ತು ಸಂದರ್ಭಗಳಲ್ಲಿ 3ನೇ ಸ್ಥಾನ ಪಲ್ಲಟ್ಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವೆ ತಿಳಿಸಿದರು.