ಮುಂಡರಗಿಯಲ್ಲಿ ಕಾಮದಹನವೂ ಇಲ್ಲ, ಬಣ್ಣದಾಟವೂ ಇಲ್ಲ!

| Published : Mar 14 2025, 12:37 AM IST

ಮುಂಡರಗಿಯಲ್ಲಿ ಕಾಮದಹನವೂ ಇಲ್ಲ, ಬಣ್ಣದಾಟವೂ ಇಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಹೋಳಿ ಹುಣ್ಣಿಮೆ ಬಂತೆಂದರೆ ಸಾಕು, ಎಲ್ಲ ಕಡೆಗಳಲ್ಲಿ ಬಣ್ಣ-ಬಣ್ಣದ ರಂಗಿನ ಹೋಳಿ ನಡೆಯುತ್ತದೆ. ಇಡೀ ಯುವ ಸಮೂಹ ಹೋಳಿ ಹುಣ್ಣಿಮೆಯ ದಿನ ಬಣ್ಣದೋಕುಳಿಯಲ್ಲಿ ಮಿಂದೆದ್ದು ಖುಷಿ ಪಡುತ್ತದೆ. ಬಾಯಿ-ಬಾಯಿ ಬಡಿದುಕೊಂಡು ಓಡಾಡುತ್ತಿರುತ್ತಾರೆ. ಆದರೆ ಮುಂಡರಗಿ ಪಟ್ಟಣ ಮತ್ತು ಸುತ್ತಮುತ್ತಲಿನ ಶಿರೋಳ, ರಾಮೇನಹಳ್ಳಿ, ಮಕ್ತುಂಪುರ, ಬೆಣ್ಣಿಹಳ್ಳಿ, ನಾಗರಹಳ್ಳಿ, ಬರದೂರು, ತಾಂಬ್ರಗುಂಡಿ ಸೇರಿ 7 ಗ್ರಾಮಗಳಲ್ಲಿ ಕಾಮದಹನವೂ ಇಲ್ಲ, ಬಣ್ಣದೋಕುಳಿಯೂ ಇಲ್ಲ.

ಶರಣು ಸೊಲಗಿ

ಕನ್ನಡಪ್ರಭ ವಾರ್ತೆ ಮುಂಡರಗಿ

ಪಟ್ಟಣದಲ್ಲಿ ಶ್ರೀ ಲಕ್ಷ್ಮಿ ಕನಕನರಸಿಂಹ ದೇವಸ್ಥಾನ ಇರುವುದರಿಂದ ಇಲ್ಲಿ ಹಿಂದಿನಿಂದಲೂ ಹೋಳಿ ಹಬ್ಬ ನಿಷೇಧಿಸಲಾಗಿದೆ. ಹೋಳಿ ಹುಣ್ಣಿಮೆ ಆಚರಿಸದಿರುವುದರಿಂದ ಇಲ್ಲಿನ ಯುವಕರು, ಮಕ್ಕಳು ಕಾಮಣ್ಣನನ್ನು ಸುಟ್ಟು ಬಂದು, ಕುಳ್ಳಿನಲ್ಲಿ ಕಾಮಣ್ಣನನ್ನು ಸುಟ್ಟಿದ್ದ ಬೆಂಕಿತಂದು, ಅದರಿಂದ ಮನೆಯ ಮುಂದೆ ಕಡಲೆ ಸುಟ್ಟು ತಿನ್ನುವುದಾಗಲಿ, ಆನಂತರ ಬಣ್ಣದ ಓಕಳಿ ಆಡುವುದಾಗಲಿ ಮಾಡುವುದಿಲ್ಲ.

ಹಳ್ಳಿಯಲ್ಲಿ ಹೊಯ್ಕೊಂಡ್ ಬಾಯಿಗೆ ಹೋಳಿಗೆ ತುಪ್ಪ ಎನ್ನುವ ಮಾತಿದೆ. ಅದರಿಂದಲೂ ಇಲ್ಲಿನ ಯುವಕರು ಹಾಗೂ ಮಕ್ಕಳು ವಂಚಿತರಾಗಿದ್ದಾರೆ.

ಹೋಳಿಹುಣ್ಣಿಮೆಯಿಂದ 6 ದಿನಗಳ ಕಾಲ ಶ್ರೀ ಲಕ್ಷ್ಮಿ ಕನಕನರಸಿಂಹ ದೇವರ‌ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ಸೇರಿದಂತೆ ವಿವಿಧ ರೀತಿಯ ಮಂಗಳ ಕಾರ್ಯಕ್ರಮಗಳು ಎಲ್ಲ ಜಾತಿ ಜನಾಂಗದವರಿಂದ ಜರುಗುತ್ತಾ ಬಂದಿದೆ. ಈ ಕಾರ್ಯಕ್ರಮವನ್ನೇ ಶ್ರೀ ಲಕ್ಷ್ಮಿ ಕನಕನರಸಿಂಹ ದೇವರ ಜಾತ್ರಾ ಮಹೋತ್ಸವ ಎಂದು ಆಚರಿಸಲಾಗುತ್ತಿದೆ.

ಈ ಲಕ್ಷ್ಮಿ ಕನಕನರಸಿಂಹ ದೇವಸ್ಥಾನದಲ್ಲಿ ಮದುವೆ ಸೇರಿದಂತೆ ವಿವಿಧ ಮಂಗಳಕರ ಕಾರ್ಯಕ್ರಮಗಳು ನಡೆಯುವುದರಿಂದ ಹೋಳಿಹಬ್ಬ ಇರುವುದಿಲ್ಲ. ಬ್ರಿಟಿಷರ ಕಾಲದಿಂದಲೂ ಈ ಪದ್ಧತಿ ಇದೆ. ಬಣ್ಣದಾಟ ಇಲ್ಲದ ಬೇಸರ ಯುವಕರನ್ನು ಕಾಡುತ್ತದೆ. ಹೀಗಾಗಿ ಯುವಕರು ತಮ್ಮ ಸಂಬಂಧಿಕರ ಊರುಗಳಿಗೆ ತೆರಳಿ ಹೋಳಿ ಆಚರಿಸುತ್ತಾರೆ‌. ಆದರೆ ಇದೇ ವೇಳೆ ಬಣ್ಣದಾಟ ಇಷ್ಟ ಇಲ್ಲದವರು ಈ ಊರಿಗೆ ಆಗಮಿಸುತ್ತಾರೆ.ಇಲ್ಲಿ 17ನೇ ಶತಮಾನದಲ್ಲಿಯೇ ಶ್ರೀ ಲಕ್ಷ್ಮಿ ಕನಕನರಸಿಂಹ ಸ್ವಾಮಿ ದೇವಸ್ಥಾನ ನಿರ್ಮಾಣವಾಗಿದ್ದು, ಇಲ್ಲಿ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ವಿವಿಧ ಮಂಗಲಕರ ಕಾರ್ಯಕ್ರಮಗಳು ಜರುಗುವುದರಿಂದ ಅಶುಭದ ಈ ಕಾರ್ಯವನ್ನು ಬ್ರಿಟಿಷರು ಆಗಲೇ ನಿಷೇಧ ಮಾಡಿದ್ದಾರೆ. ಹೀಗಾಗಿ ಮುಂಡರಗಿ‌ ಸೇರಿ ಸುತ್ತಲಿನ 7 ಗ್ರಾಮಗಳಲ್ಲಿ ಹೋಳಿ ಆಚರಿಸುವುದಿಲ್ಲ ಎಂದು ಮುಂಡರಗಿ ಲಕ್ಷ್ಮಿ ಕನಕನರಸಿಂಹ ದೇವಸ್ಥಾನದ ಧರ್ಮದರ್ಶಿ ವಿ.ಎಲ್. ನಾಡಗೌಡ್ರ ಧರ್ಮದರ್ಶಿ ಹೇಳಿದರು.