ಸಾರಾಂಶ
ಮಂಗಳವಾರ ಜೂ.25 ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಮಂಗಳವಾರ ಜೂ.25 ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ತಾಲೂಕು ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜನಸ್ಪಂದನಾ ಕಾರ್ಯಕ್ರಮದಲ್ಲಿ ವೈಯಕ್ತಿಕ ಬೇಡಿಕೆಗಳ ಬಗ್ಗೆಯೇ ಚರ್ಚೆ ನಡೆಯುವುದೇ ಹೆಚ್ಚು. ಜಿಲ್ಲಾಡಳಿತದ ಗಮನ ಸೆಳೆಯಲು ತಾಲೂಕಿನ ಕೆಲ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.ನೀರಾವರಿ ಯೋಜನೆ: ಸಿಂಗಟಾಲೂರು ಏತ ನೀರಾವರಿ ಯೋಜನೆ ಈ ಭಾಗದ ರೈತರಿಗೆ ಪ್ರಯೋಜನ ಇಲ್ಲದಂತಾಗಿದೆ. ಯೋಜನೆ 2012ರ ಸೆಪ್ಟಂಬರ್ 4ರಂದು ಆರಂಭಗೊಂಡಿದೆ. 12 ವರ್ಷ ಕಳೆದರೂ ಒಡೆದು ಹೋದ ಕಾಲುವೆಗಳ ನಿರ್ವಹಣೆಗೆ ಕಾಸು ಬಿಡುಗಡೆಯಾಗಿಲ್ಲ. ಇದರಿಂದ ರೈತರ ಜಮೀನುಗಳಿಗೆ ಸೇರಬೇಕಿದ್ದ ನೀರು ಹಳ್ಳಗಳ ಪಾಲಾಗುತ್ತಿದೆ. ಕಾಲುವೆಗಳು ಬಳ್ಳಾರಿ ಜಾಲಿ ಮತ್ತು ದೊಡ್ಡ ಪ್ರಮಾಣದ ಗಿಡ-ಮರಗಳು ಬೆಳೆದು ಕಾಲುವೆಗಳೇ ಕಾಣುತ್ತಿಲ್ಲ. ಹೂಳು ಎತ್ತಲು ಇಲಾಖೆ ಬಳಿ ಹಣವಿಲ್ಲದಂತಾಗಿದೆ.ಗ್ರಾಮೀಣ ಭಾಗದಲ್ಲಿರುವ ಕಾಲುವೆಗಳ ಹೂಳನ್ನು ನರೇಗಾ ಯೋಜನೆಯಲ್ಲಿ ತೆಗೆಯಲಾಗುತ್ತಿದೆ. ಆದರೆ ದೊಡ್ಡ ಪ್ರಮಾಣದ ಕಾಲುವೆಗಳ ಹೂಳು ತೆಗೆಯಲು ಅವಕಾಶ ಇಲ್ಲದ ಕಾರಣ, ರೈತರಿಗೆ ನೀರಾವರಿ ಸೌಲಭ್ಯ ಮರೀಚಿಕೆಯಾಗಿದೆ.
ತಾಲೂಕಿನ ಮಾಗಳ, ಹಗರನೂರು, ಹಿರೇಹಡಗಲಿ ಗ್ರಾಮಗಳ ಜಮೀನುಗಳಿಗೆ ನೀರುಣಿಸಲು ಹೊಸದಾಗಿ ಸ್ಟೀಲ್ ಪೈಪ್‌ಲೈನ್ ಮಾಡಿದ್ದಾರೆ. ಆದರೆ ಈವರೆಗೂ ಆರಂಭವಾಗಿಲ್ಲ. ಸದ್ಯ ಕಾಲುವೆ ನೀರು ನಂಬಿಕೊಂಡು, ಸಾವಿರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಮಾಗಳ ಜಾಕ್‌ವೆಲ್‌ಗೆ ನೀರೆತ್ತುವ ಮೋಟರ್ ದುರಸ್ತಿಗೆ ಬಂದಿದೆ. ಆದರೆ ಇದರ ರಿಪೇರಿಗೆ ಇಲಾಖೆಯ ಬಳಿ ಹಣ ಇಲ್ಲ. ಇದರಿಂದ ರೈತರ ಗೋಳು ಕೇಳುವವರಿಲ್ಲದಂತಾಗಿದೆ.ಕಿತ್ತು ಹೋದ ರಸ್ತೆಗಳು:
ತಾಲೂಕಿನ ಗ್ರಾಮೀಣ ಭಾಗದ ನೂರಾರು ಕಿ.ಮೀ. ರಸ್ತೆಗಳ ತುಂಬೆಲ್ಲ ಬಳ್ಳಾರಿ ಜಾಲಿಮುಳ್ಳು ಮುತ್ತಿಕೊಂಡಿವೆ. ರಸ್ತೆ ತುಂಬೆಲ್ಲ ತಗ್ಗು ಗುಂಡಿಗಳ ದರ್ಬಾರ್, ಮಳೆಗಾಲ ಬಂದಾಗ ವಾಹನ ಚಾಲಕರು ಮೈಯೆಲ್ಲ ಕಣ್ಣಾಗಿ ವಾಹನ ಓಡಿಸುವ ಸ್ಥಿತಿ ಇದೆ. ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳೇ ಗೊತ್ತಾಗುತ್ತಿಲ್ಲ. ಇದರಿಂದ ಅಪಘಾತಕ್ಕೆ ಆಹ್ವಾನ ನೀಡುವ ರೀತಿಯಲ್ಲಿ ರಸ್ತೆಗಳ ಸ್ಥಿತಿ ಇದೆ.ನಿಲ್ಲದ ಸರ್ಕಾರಿ ಜಾಗ ಒತ್ತುವರಿ:
ತಾಲೂಕಿನ ಎಲ್ಲ ಕಡೆಗೂ ಸರ್ಕಾರಿ ಜಮೀನು ಲಭ್ಯತೆ ಇದೆ. ಆದರೆ ಈಗಾಗಲೇ ಎಲ್ಲ ಕಡೆಗೂ ಒತ್ತುವರಿಯಾಗಿವೆ. ಅವುಗಳನ್ನು ತೆರವು ಮಾಡಿ ಗಡಿ ಗುರುತು ಮಾಡಬೇಕಿದೆ. ಇಲ್ಲದಿದ್ದರೆ ಆ ಜಮೀನುಗಳು ಉಳ್ಳವರ ಪಾಲಾಗುತ್ತವೆ. ಹಳ್ಳಿಗಳಿಗೆ ಮಂಜೂರಾದ ಸಣ್ಣ ಕಟ್ಟಡ ನಿರ್ಮಾಣಕ್ಕೂ ಜಾಗ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಲಿದೆ.ರಸ್ತೆಬದಿಯೇ ಅಂತ್ಯಸಂಸ್ಕಾರ:
ತಾಲೂಕಿನ ಮಾಗಳ ಗ್ರಾಮದಲ್ಲಿ ಸ್ಮಶಾನವೇ ಇಲ್ಲ. ಜನರಿಗೆ ಬೇರೆ ಯಾವುದೇ ಆಯ್ಕೆ ಇಲ್ಲದೇ ಇಂದಿಗೂ ಶವಗಳನ್ನು ರಸ್ತೆಯ ಬದಿಯಲ್ಲೇ ಸುಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳನ್ನು ಕೇಳಿ ಕೇಳಿ ಜನ ಸುಸ್ತಾಗಿದ್ದಾರೆ. ತಾಲೂಕು ಆಡಳಿತ ಸ್ಮಶಾನಕ್ಕೆ ಜಾಗ ಗುರುತು ಮಾಡಲು ಸಾಧ್ಯವಾಗಿಲ್ಲ. ಈ ಹಿಂದೆ ಇದ್ದ ಸ್ಮಶಾನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಮಾಗಳಕ್ಕೆ ಸ್ಮಶಾನವೇ ಇಲ್ಲದಂತಾಗಿದೆ.ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿತರಣಾ ಕಾಲುವೆಗಳು ಅನೇಕ ಕಡೆಗಳಲ್ಲಿ ಒಡೆದು ಹೋಗಿವೆ. ಆದರೆ ಸರ್ಕಾರದಿಂದ ದುರಸ್ತಿಗೆ ಅನುದಾನ ಬಂದಿಲ್ಲ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಹೂವಿನಹಡಗಲಿಯ ಎಇಇ ರಾಘವೇಂದ್ರ.
ಮಾಗಳ ಗ್ರಾಮಕ್ಕೆ ಸ್ಮಶಾನವಿಲ್ಲದೇ ಜನರು ಶವಗಳನ್ನು ಹೂಳಲು ಮತ್ತು ಸುಡಲು ಪರದಾಡುವ ಸ್ಥಿತಿ ಇದೆ. ವಿಧಿ ಇಲ್ಲದೇ ನದಿಗೆ ಹೋಗುವ ರಸ್ತೆಯ ಮಧ್ಯೆ ಸುಡುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಈವರೆಗೆ ಈ ಊರಿಗೆ ಸ್ಮಶಾನ ಮಂಜೂರಾಗಿಲ್ಲ ಎನ್ನುತ್ತಾರೆ ಮಾಗಳ ಗ್ರಾಮಸ್ಥರು.