ಸಾರಾಂಶ
- ಕುಮಾರ ಬಂಗಾರಪ್ಪಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ಬಿಎಸ್‌ವೈ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಫೆ.23ಲೂಸ್ ಟಾಕಿಂಗ್‌ನ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ರಿಗೆ ಅವರಿವರನ್ನು ಬೈಯ್ಯುವುದೇ ಕೆಲಸವಾಗಿದೆ. ಬಿಜೆಪಿ ಮೇಲೆ ಅಭಿಮಾನವಿದ್ದಿದ್ದರೆ ಹೀಗೆಲ್ಲಾ ಹಾದಿಬೀದಿಯಲ್ಲಿ ಮಾತನಾಡಬಾರದು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೋಟಿಸ್ ನೀಡಿದರೆ ಅದನ್ನೇ ಫೇಕ್ ನೋಟಿಸ್ ಅಂತಾ ಹೇಳಿದ ಯತ್ನಾಳ್‌ಗೆ ವಿಜಯೇಂದ್ರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದರು. ಬಬಲೇಶ್ವರ ನಿಮ್ಮ ಕ್ಷೇತ್ರ, ಅಲ್ಲಿಂದ ಸ್ಪರ್ಧೆ ಮಾಡಿ. ಅದನ್ನು ಬಿಟ್ಟು ಪ್ರಭಾವಿ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ? ಕುಟುಂಬ ರಾಜಕಾರಣ ಅಂತಾ ಮಾತನಾಡುತ್ತೀರಾ? ನಿಮ್ಮ ಮಕ್ಕಳನ್ನ ಸರ್ಕಾರಿ ಕಾರ್ಯಕ್ರಮದಲ್ಲಿ ಕರೆ ತರುತ್ತೀರಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ನಾವೆಲ್ಲಾ ಮೊನ್ನೆ ಫೆ.12ರಂದು ಸಭೆಗೆ ಆಯೋಜನೆ ಮಾಡಿದ್ದೆವು. ಆದರೆ, ರಾಜ್ಯಾಧ್ಯಕ್ಷರು ಬೇಡ ಅಂದಿದ್ದಕ್ಕೆ ಸುಮ್ಮನಾದೆವು. ನಾವು ಪಕ್ಷಕ್ಕೆ, ಅಧ್ಯಕ್ಷರಿಗೆ ಗೌರವ ನೀಡುತ್ತೇವೆ. ಹಾಗಾಗಿ ಸಭೆ ಮಾಡಲಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.- - -
ಬಾಕ್ಸ್ * ನಿಮಗೆ ತಾಕತ್ತಿದ್ರೆ ನಾಯಕತ್ವ ಬದಲಿಸಿ ಕಾಂಗ್ರೆಸ್ ಪಕ್ಷದಲ್ಲಿ ಅನಾಥ ಶಿಶುವಾಗಿದ್ದ ಕುಮಾರ ಬಂಗಾರಪ್ಪ ನಿಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ಬಿ.ಎಸ್.ಯಡಿಯೂರಪ್ಪ. ನಿಮ್ಮ ಕ್ಷೇತ್ರದಲ್ಲಿ ನೀವೇನು ಪಕ್ಷ ಸಂಘಟನೆ ಮಾಡಿದ್ದೀರಿ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.ನೀವು ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆಂದು ಹೇಳುತ್ತೀರಾ? ನೀವೇನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ? ಮಿಸ್ಟರ್ ಕುಮಾರ ಬಂಗಾರಪ್ಪನವರೇ ನಿಮಗೆ ತಾಕತ್ತು ಇದ್ದರೆ, ರಾಜ್ಯ ನಾಯಕತ್ವ ಬದಲಾವಣೆ ಮಾಡಿ ನೋಡೋಣ ಎಂದು ಏಕವಚನದಲ್ಲೇ ಸವಾಲು ಹಾಕಿದರು.
ವಿಜಯೇಂದ್ರರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಜೊತೆಗೆ ಜಿಪಂ, ತಾಪಂ, ಮುಂದಿನ ವಿಧಾನಸಭೆ ಚುನಾವಣೆಯ ಸಾರಥ್ಯವನ್ನೂ ವಹಿಸುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಸಮಾವೇಶ ಆಯೋಜಿಸುತ್ತೇವೆ ಎಂದು ಯಡಿಯೂರಪ್ಪ ಜನ್ಮದಿನ ಆಚರಣೆ ಕುರಿತ ಪ್ರಶ್ನೆಗೆ ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ರಾವ್ ಜಾಧವ್ ಇತರರು ಇದ್ದರು.
- - -ಕೋಟ್
ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ನಿರ್ವಾಹಕನ ಮೇಲೆ ಗಲಾಟೆ ಮಾಡಿರುವ ಪುಂಡರ ಕೃತ್ಯವನ್ನು ಎಲ್ಲರೂ ಪಕ್ಷಾತೀತವಾಗಿ ಖಂಡಿಸಬೇಕು. ಕಂಡಕ್ಟರ್ ಮೇಲೆ ಕೇಸ್ ಮಾಡಿರುವುದು ತಪ್ಪು. ನಾವೆಲ್ಲರೂ ಕನ್ನಡ ತಾಯಿಯ ಒಂದೇ ಮಕ್ಕಳಾಗಿರಬೇಕು. ಹಿಜಾಬ್ ವಿಚಾರದಲ್ಲಿ ಸರ್ಕಾರ ನಿಲುವು ಬದಲಿಸಿದರೆ, ನಾವು ಕೇಸರಿ ಹಾಕುತ್ತೇವೆ- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ, ಬಿಜೆಪಿ ಮುಖಂಡ
- - - -23ಕೆಡಿವಿಜಿ2:ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.