ನಾವ್ಯಾರೂ ಡಿಸಿಎಂ ಹುದ್ದೆ ಕೇಳಿಲ್ಲ: ಸತೀಶ್‌ ಜಾರಕಿಹೊಳಿ

| Published : Jun 16 2024, 01:46 AM IST

ಸಾರಾಂಶ

ಪ್ರಸ್ತುತ ಹೆಚ್ಚುವರಿ ಡಿಸಿಎಂ ಹುದ್ದೆಯ ಅವಶ್ಯಕತೆ ಇಲ್ಲ. ನಾವ್ಯಾರೂ ಡಿಸಿಎಂ ಹುದ್ದೆ ಕೇಳಿಲ್ಲ. ಈ ಬಗ್ಗೆ ಬೇಡಿಕೆಯನ್ನೂ ಇಟ್ಟಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿ: ಪ್ರಸ್ತುತ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಅವಶ್ಯಕತೆ ಇಲ್ಲ. ನಾವ್ಯಾರೂ ಡಿಸಿಎಂ ಹುದ್ದೆ ಕೇಳಿಲ್ಲ. ಈ ಬಗ್ಗೆ ಬೇಡಿಕೆಯನ್ನೂ ಇಟ್ಟಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಮೊದಲು ಡಿಸಿಎಂ ಹುದ್ದೆ ಕೇಳಿದ್ದೆವು. ಆದರೆ, ಈಗ ಡಿಸಿಎಂ ಹುದ್ದೆಯ ಅವಶ್ಯಕತೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗುವ ದೃಷ್ಟಿಯಿಂದ ಡಿಸಿಎಂ ಹುದ್ದೆ ಕೇಳಿದ್ದೆವಷ್ಟೇ. ಈಗ ನಮಗೆ ಸಚಿವ ಸ್ಥಾನ ಇದೆ. ಇನ್ನೂ ನಾಲ್ಕು ವರ್ಷ ಕೆಲಸ ಮಾಡುವ ಅವಕಾಶವಿದೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಎಲ್ಲಿ ಎಡವಿದೆ ಎಂಬುದನ್ನು ಪರಾಮರ್ಶೆ ಮಾಡಲಾಗುತ್ತದೆ. ಇನ್ನು, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನೀವು ಸಿಎಂ, ಡಿಸಿಎಂ ಬಳಿಯೇ ಕೇಳಬೇಕು ಎಂದರು.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೋಲ್ಡ್‌ವಾರ್‌ ಇದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋಲ್ಡ್‌ ಅಷ್ಟೇ ಇದೆ. ವಾರ್‌ ಇಲ್ಲ ಎಂದರು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ, ಮುಂದುವರಿಯುತ್ತವೆ. ಈ ಕುರಿತು ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಅನುದಾನ ಬಿಡುಗಡೆಯಾಗುತ್ತಿದೆ ಎಂದರು.

ಮಾಜಿ ಶಾಸಕ ಕುಮಟಳ್ಳಿ ಅವರು ನಮ್ಮ ಮನೆಗೆ ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನಾವು ಅವರ ಮನೆಗೆ ಹೋಗುತ್ತಿದ್ದೇವು. ಈಗ ನಾವು ಅಧಿಕಾರದಲ್ಲಿ ಇದ್ದಿದ್ದರಿಂದ ನಮ್ಮ ಮನೆಗೆ ಅವರು ಬಂದಿದ್ದಾರೆ ಅಷ್ಟೇ. ಕುಮಟಳ್ಳಿ ಅಷ್ಟೇ ಅಲ್ಲ, ಶ್ರೀಮಂತ ಪಾಟೀಲ್‌, ದುರ್ಯೋಧನ ಐಹೊಳೆ, ಎಸ್.ಟಿ. ಸೋಮಶೇಖರ್‌, ವಿಠ್ಠಲ್‌ ಹಲಗೆಕರ್‌ ಸೇರಿದಂತೆ ಬಿಜೆಪಿಯ ಹಲವು ಶಾಸಕರು, ನಾಯಕರು ನಮ್ಮ ಮನೆಗೆ ಬರುತ್ತಾರೆ. ಕೆಲಸ, ಕಾರ್ಯಗಳಿದ್ದರೆ ನಾಯಕರು ಬರುವುದು ಸಹಜ ಎಂದರು.