ಸಾರಾಂಶ
ಬ್ಯಾಡಗಿ: ಕ್ಷಯರೋಗದ (ಟಿಬಿ) ಕುರಿತು ಭಯಪಡುವ ಅಗತ್ಯವಿಲ್ಲ. ರೋಗಗ್ರಸ್ಥರಿಗೆ ಸೂಕ್ತ ಚಿಕಿತ್ಸೆ ಸೇರಿದಂತೆ ಕ್ಷಯರೋಗ ಮುಕ್ತ ಭಾರತ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರತಿ ಲಕ್ಷಕ್ಕೆ 237 ಜನರಿಗೆ ಅಂಟಿದ್ದ ರೋಗವನ್ನು ಪ್ರಸ್ತುತ 195ಕ್ಕೆ ಇಳಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ ಹೇಳಿದರು.
ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕ್ಷಯರೋಗ ಮುಕ್ತ ಭಾರತ ಮತ್ತು ಮಹಾಮಾರಿ ಏಡ್ಸ್, ನಾಯಿ ಕಡಿತ ರೇಬೀಸ್ ಚುಚ್ಚು ಮದ್ದು ನೀಡುವ ಮಾಹಿತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ 2024ರಲ್ಲಿ ದೇಶದಲ್ಲಿ ಅಂದಾಜು 25 ಲಕ್ಷ ಜನರನ್ನು ಪತ್ತೆ ಹಚ್ಚಿ ಚಿಕಿತ್ಸೆಗೊಳಪಡಿಸಲಾಗಿದೆ, ಪೋಲಿಯೋ ಮುಕ್ತ ಭಾರತ ಮಾದರಿಯಲ್ಲಿ ಕ್ಷಯರೋಗ ಮುಕ್ತ ಭಾರತ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಸರ್ಕಾರ ಸೇರಿದಂತೆ ಆರೋಗ್ಯ ಇಲಾಖೆಯ ಮೂಲ ಉದ್ದೇಶವಾಗಿದೆ ಎಂದರು.ನಿಗದಿತ ಅಂತರ ಕಾಪಾಡಿಕೊಳ್ಳಿ: ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟಿರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರಲಿದ್ದು ಬಳಿಕ ಮೆದುಳು, ಮೂತ್ರಪಿಂಡಗಳು ಅಥವಾ ಬೆನ್ನುಮೂಳೆಯಂತಹ ದೇಹದ ಇತರ ಭಾಗಗಳಿಗೂ ಹರಡಬಹುದು. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡುವಾಗ ಗಾಳಿಯ ಮೂಲಕ ಕ್ಷಯರೋಗ ಹರಡುತ್ತದೆ, ಹೀಗಾಗಿ ಯಾವುದೇ ವ್ಯಕ್ತಿಯ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ನಿಗದಿತ ಅಂತರವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ರೋಗದ ಲಕ್ಷಣಗಳು: ಚಿಕಿತ್ಸೆ ಪಡೆದಾಗ್ಯೂ 3 ವಾರಗಳಿಗಿಂತ ಹೆಚ್ಚು ಕಾಲ ನಿರಂತರ ಕೆಮ್ಮು, ಎದೆ ನೋವು ರಕ್ತ ಅಥವಾ ಕಫದೊಂದಿಗೆ ಕೆಮ್ಮುವುದು. ದಣಿವು ಮತ್ತು ದೌರ್ಬಲ್ಯ, ರಾತ್ರಿವೇಳೆಯಲ್ಲಿ ಕಾರಣವಿಲ್ಲದೇ ಬೆವರುವುದು, ಹಸಿವು ಕಡಿಮೆ, ತೂಕ ನಷ್ಟ, ನಿರಂತರ ಜ್ವರ ಇದರ ಲಕ್ಷಣಗಳಾಗಿದ್ದು ಇಂತಹ ಅಪಾಯಕಾರಿ ಅಂಶಗಳು ವ್ಯಕ್ತಿಯಲ್ಲಿ ಕಂಡು ಬಂದಲ್ಲಿ ಕೂಡಲೇ ಸರ್ಕಾರಿ ಅಸ್ಪತ್ರೆಯ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.ಬಳಿಕ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಆರೋಗ್ಯ ರಕ್ಷಣೆ ಕುರಿತು ಪ್ರತ್ಯೇಕ ಸಮಾಲೋಚನೆ ನಡೆಸುವ ಮೂಲಕ ಶುಚಿತ್ವದ ಕುರಿತು ಮಾಹಿತಿ ನೀಡಲಾಯಿತು. ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಅಧ್ಯಕ್ಷತೆ ವಹಿಸಿದ್ದರು, ಡಾ ಬಿ.ಎನ್. ದೇವೇಂದ್ರ ಡಾ.ಎಮ್.ವಿ. ಕಮ್ಮಾರ, ಡಾ. ಸತೀಶ್, ಜೆ.ಪಿ. ವಿನಾಯಕ, ಡಿ.ಎನ್. ಚಂದ್ರಶೇಖರ, ವಿ. ಮಮತಾ, ವಿ.ರೇಶ್ಮಾ ಇನ್ನಿತರರು ಉಪಸ್ಥಿತರಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಶಿವಪ್ಪ ಕಾರ್ಯಕ್ರಮ ನಡೆಸಿಕೊಟ್ಟರು.