ಅನುಕಂಪದ ಮತ ಹಾಕಿಸಿಕೊಳ್ಳುವ ಅನಿವಾರ್ಯತೆ ಇಲ್ಲ: ನಿಖಿಲ್ ಕುಮಾರಸ್ವಾಮಿ

| Published : Mar 31 2024, 02:15 AM IST / Updated: Mar 31 2024, 06:40 AM IST

ಅನುಕಂಪದ ಮತ ಹಾಕಿಸಿಕೊಳ್ಳುವ ಅನಿವಾರ್ಯತೆ ಇಲ್ಲ: ನಿಖಿಲ್ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ಈ ಬಾರಿ ನಿಖಿಲ್ ಸ್ಪರ್ಧಿಸಬೇಕೆಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದರು. ಆದರೆ, ಎಚ್ ಡಿಕೆ ಅವರೇ ಮೈತ್ರಿ ಅಭ್ಯರ್ಥಿಯಾಗಲು ಒತ್ತಾಸೆ, ಹಾರೈಕೆ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಮಣಿದು ಕುಮಾರಣ್ಣ ನಿಮ್ಮ ಮುಂದೆ ನಿಂತಿದ್ದಾರೆ.

  ನಾಗಮಂಗಲ :  ಜಿಲ್ಲೆಯ ಜನತೆಗೆ ಮೋಸ ಮಾಡಿ ಅನುಕಂಪ ಗಿಟ್ಟಿಸಿಕೊಂಡು ಮತ ಹಾಕಿಸಿಕೊಳ್ಳುವ ಅನಿವಾರ್ಯತೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗಾಗಲೀ, ಅಥವಾ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗಾಗಲಿ ಬಂದಿಲ್ಲ. ನಮ್ಮ ಕುಟುಂಬ ಯಾವತ್ತೂ ಸಹ ಮೊಸಳೆ ಕಣ್ಣೀರು ಹಾಕಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ತಿರುಗೇಟು ನೀಡಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಶ್ರೀ ಬಡಗೂಡಮ್ಮದೇವಿ ದೇವಸ್ಥಾನದ ಆವರಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಮಾರಣ್ಣ ಒಬ್ಬ ಭಾವನಾತ್ಮಕ ಜೀವಿ. ನಾಡಿನ ಜನರಿಗೆ ಕಷ್ಟ ಸಮಸ್ಯೆಗಳು ಎದುರಾದಾಗ ಕುಮಾರಣ್ಣನಿಗೆ ಕಣ್ಣೀರು ಬರುತ್ತೆ. ಕಾಂಗ್ರೆಸ್‌ನವರಿಗೆ ಕುಮಾರಸ್ವಾಮಿ ಸ್ಪರ್ಧೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಮೋಸ ಹಾಗೂ ರಾಜಕೀಯ ಷಡ್ಯಂತ್ರ್ಯಕ್ಕೆ ಒಬ್ಬ ಯುವಕ ಬಲಿಯಾಗಿದ್ದಾನೆ. ಈ ಬಾರಿ ನಿಖಿಲ್ ಸ್ಪರ್ಧಿಸಬೇಕೆಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದರು. ಆದರೆ, ಎಚ್ ಡಿಕೆ ಅವರೇ ಮೈತ್ರಿ ಅಭ್ಯರ್ಥಿಯಾಗಲು ಒತ್ತಾಸೆ, ಹಾರೈಕೆ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಮಣಿದು ಕುಮಾರಣ್ಣ ನಿಮ್ಮ ಮುಂದೆ ನಿಂತಿದ್ದಾರೆ ಎಂದು ಹೇಳಿದರು.

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು, ಮುಖಂಡರ ಮನಸ್ಸನ್ನು ಒಂದು ಮಾಡಿಕೊಂಡರೆ ಗೆಲುವು ನಿಶ್ಚಿತ. ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ದೇಶವನ್ನು ರಕ್ಷಿಸುವ ಜವಾಬ್ದಾರಿ ವಹಿಸಿದರೆ, ಕಾವೇರಿ ರಕ್ಷಿಸಲು ಎಚ್.ಡಿ.ಕಮಾರಸ್ವಾಮಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸಬೇಕು ಎಂದರು.

ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಗ್ಯಾರಂಟಿ ಭರವಸೆಗಳ ಮೂಲಕ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಾಯಕರ ದುರಹಂಕಾರದ ಸೊಕ್ಕು ಮುರಿಯಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ನಿಲ್ಲಬೇಕು ಎಂದು ಹೇಳಿದರು.

ಜಾತಿ ಜಾತಿಗಳನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಇದಕ್ಕೆ ಎರಡೂ ಪಕ್ಷದವರು ಅವಕಾಶ ನೀಡಬಾರದು. ಕುಮಾರಸ್ವಾಮಿ ಅವರ ಜನಪರ ಯೋಜನೆಗಳ ಕುರಿತು ಪ್ರತಿ ಹಳ್ಳಿಯಲ್ಲಿಯೂ ಜನರಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಗೆಲ್ಲಿಸಿಕೊಡಬೇಕೆಂದು ಕೈಮುಗಿದು ಮನವಿ ಮಾಡಿದರು.

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಜೆಡಿಎಸ್‌ನಿಂದ ರಾಜಕೀಯ ಶಕ್ತಿ ಪಡೆದು ಅವರ ಬಗ್ಗೆಯೇ ಜಿಲ್ಲಾ ಮಂತ್ರಿ ಮಾತನಾಡುತ್ತಿದ್ದಾರೆ. ಅವರಿಗೆ ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ರಾಜ್ಯದಲ್ಲಿ ಒಕ್ಕಲಿಗರ ನಾಯಕತ್ವ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಚುನಾವಣಾ ವೀಕ್ಷಕ ಸುನಿಲ್ ಸುಬ್ರಹ್ಮಣ್ಯ ಮಾತನಾಡಿದರು. ಕೆ.ಆರ್.ಪೇಟೆ ಶಾಸಕ ಎಚ್.ಸಿ.ಮಂಜು, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಮನ್ಮುಲ್ ನಿರ್ದೇಶಕ ಕೋಟಿ ರವಿ, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯರಾದ ಎನ್.ಎಂ.ರಾಮಸ್ವಾಮಿಗೌಡ, ಮುತ್ತಣ್ಣ ಸೇರಿ ಹಲವರಿದ್ದರು.