ಸಾರಾಂಶ
- ಆದರೆ ಈ ಹಿಂದಿನಂತೆ ನೀರಿನ ಕಂದಾಯ ಕಡ್ಡಾಯ ಪಾವತಿಸಬೇಕು: ಪಾಲಿಕೆ ಕಾಂಗ್ರೆಸ್ ಸದಸ್ಯ ಎ.ನಾಗರಾಜ ಹೇಳಿಕೆ - ಪಾಲಿಕೆ ಚುನಾವಣೆ ಸೋಲಿನ ಹತಾಶೆಯಲ್ಲಿ ಬಿಜೆಪಿ ಮಿಥ್ಯಾರೋಪ: ವ್ಯಂಗ್ಯ । ಆಸ್ತಿ ತೆರಿಗೆ ಹೆಚ್ಚಳ ಬಿಜೆಪಿ ಬಳುವಳಿ: ಟೀಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ದಾವಣಗೆರೆ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಸೇರಿದಂತೆ ಸದಸ್ಯರು ಜಲಸಿರಿ ಸೇರಿದಂತೆ ವಿವಿಧ ನೆಪವೊಡ್ಡಿ, ಜನರನ್ನು ದಾರಿ ತಪ್ಪಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪಾಲಿಕೆ ಕಾಂಗ್ರೆಸ್ ಹಿರಿಯ ಸದಸ್ಯ ಎ.ನಾಗರಾಜ ತಿರುಗೇಟು ನೀಡಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ, ಪಾಲಿಕೆಯಲ್ಲಿ ಹಾಗೂ ಈಚಿನ ಚುನಾವಣೆಯಲ್ಲಿ ಸೋತ ಬಿಜೆಪಿಯವರು ಹತಾಶರಾಗಿ ಕಾಂಗ್ರೆಸ್ಸಿನ ವಿರುದ್ಧ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದರು.
ಕೆಲ ವಾರ್ಡ್‌ಗಳಲ್ಲಿ ನಾಲ್ಕೈದು ತಿಂಗಳಿನಿಂದ ಪ್ರತಿ ಮನೆಗೂ ಶುದ್ಧ ನೀರು ಪೂರೈಸಲಾಗುತ್ತಿದೆ. ಉಳಿದ ಕೆಲವು ಕಡೆ ಕಾಮಗಾರಿ ಸಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ಬಿಲ್ ನೀಡದಂತೆ ಹಿಂದೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದೆವು. ಅದರಂತೆ ಮೇಯರ್ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ. ಎಲ್ಲ ವಾರ್ಡ್‌ನಲ್ಲಿ ಜಲಸಿರಿ ಕಾಮಗಾರಿ ಪೂರ್ಣಗೊಂಡು, ನೀರನ್ನು ಪೂರೈಸಿದ ನಂತರವೇ ಬಿಲ್ ನೀಡುವಂತೆ ಸೂಚನೆ ನೀಡಲಾಗಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿವರೆಗೂ ಪ್ರತಿ ತಿಂಗಳು ಈ ಹಿಂದೆ ಇದ್ದ ನೀರಿನ ಶುಲ್ಕವನ್ನೇ ಕಡ್ಡಾಯವಾಗಿ ಪಾವತಿಸುವಂತೆ ತಿಳಿಸಲಾಗಿದೆ ಎಂದು ನಾಗರಾಜ ಹೇಳಿದರು.ಆಸ್ತಿ ತೆರಿಗೆ ವಿಚಾರದಲ್ಲಿ 2021ರಲ್ಲಿ ಬಿಜೆಪಿ ಸರ್ಕಾರದ ಅವಧಿಯ ಚಾಲ್ತಿ ಸಾಲಿನ ಮಾರುಕಟ್ಟೆ ದರಗಳನ್ನು ಅಳವಡಿಸಿಕೊಂಡು, ಆಸ್ತಿ ತೆರಿಗೆ ಲೆಕ್ಕಾಚಾರ ಮಾಡುವಂತೆ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ಕ್ಕೆ ಆಗಿನ ಕೇಂದ್ರ ಆದೇಶದಂತೆ ತಿದ್ದುಪಡಿ ತಂದು, ಆಗಿನ ಬಿಜೆಪಿ ಆಳ್ವಿಕೆಯು ಪಾಲಿಕೆಯಲ್ಲಿ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ, ಆಸ್ತಿ ತೆರಿಗೆ ಹೆಚ್ಚಿಸುವ ತೀರ್ಮಾನ ಕೈಗೊಂಡಿತ್ತು. ಆದೇಶ ಜಾರಿಗೆ ತರದಿದ್ದರೆ ಕೇಂದ್ರದ 15ನೇ ಹಣಕಾಸು ಅನುದಾನ ಇತರೆ ಅನುದಾನ ನೀಡುವುದಿಲ್ಲ ಎಂಬ ಕಾರಣಕ್ಕೆ ಅಂದಿನ ವಿಪಕ್ಷ ಕಾಂಗ್ರೆಸ್ ಸದಸ್ಯರ ವಿರೋಧದ ಮಧ್ಯೆಯೂ ಆಸ್ತಿ ತೆರಿಗೆ ಹೆಚ್ಚಳದ ಹೊಸ ನಿಯಮ ಜಾರಿಗೆ ತಂದಿದ್ದು ಇದೇ ಬಿಜೆಪಿ ಎಂದರು.
ಅಂದು ಬಿಜೆಪಿ ಜಾರಿಗೆ ತಂದ ಆದೇಶದಂತೆ ಈ ದುಪ್ಪಟ್ಟು ತೆರಿಗೆ ಜಾರಿಗೆ ಬಂದಿದೆ. ಬಿಜೆಪಿ ಜಾರಿಗೆ ತಂದ ಆದೇಶದಂತೆ ಚಾಲ್ತಿ ಸಾಲಿನ ಮಾರುಕಟ್ಟೆ ದರಗಳನ್ನು ಆಸ್ತಿ ತೆರಿಗೆಗೆ ಅಳವಡಿಸಿಕೊಳ್ಳಬೇಕಾಗಿದ್ದರಿಂದ ಅಕ್ಟೋಬರ್ 2023ರಲ್ಲಿ ಹೊಸ ಮಾರುಕಟ್ಟೆ ದರಗಳ ಪರಿಷ್ಕರಣೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ನೇತೃತ್ವದಲ್ಲಿ 2023ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇ-ಆಸ್ತಿ ಆಂದೋಲನ ಮಾಡಿ, ಸ್ಥಳದಲ್ಲೇ ಇ-ಆಸ್ತಿ ನಮೂನೆ-2 ಅನ್ನು ವಿತರಿಸಲಾಗಿತ್ತು. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಆಂದೋಲನ ನಡೆಸಲಾಗುವುದು. ಈಗಾಗಲೇ ಆಸ್ತಿ ತೆರಿಗೆ ಪಾವತಿಗೆ ವಲಯ ಕಚೇರಿಗಳಲ್ಲಿ ಏಪ್ರಿಲ್, ಮೇ ತಿಂಗಳಿಗೆ ಶೇ.5 ರಿಯಾಯಿತಿ ನೀಡಲಾಗಿದೆ. ಉಚಿತ ಫಾರಂ ಕೊಡಲು, ಹೆಚ್ಚುವರಿ ಕೌಂಟರ್ ತೆರೆಯಲಾಗಿತ್ತು. ಜು.31ರವರೆಗೂ ನಮ್ಮ ಸರ್ಕಾರ ರಿಯಾಯಿತಿ ಮುಂದುವರಿಸಿದೆ ಎಂದು ನಾಗರಾಜ್ ತಿಳಿಸಿದರು.
ಕಳೆದ 3 ತಿಂಗಳ ಕಾಲ ನೀತಿ ಸಂಹಿತೆ ಜಾರಿ ಇದ್ದುದರಿಂದ ಸಾಮಾನ್ಯ ಸಭೆ ಕರೆಯಲು ಸಾಧ್ಯವಾಗಿರಲಿಲ್ಲ. ಈಗಾಗಲೇ ಸ್ಥಾಯಿ ಸಮಿತಿ ಸಭೆಗಳನ್ನು ಕರೆಯಲು ಆದೇಶಿಸಲಾಗಿದೆ. ನಂತರ ಸಾಮಾನ್ಯ ಸಭೆ ಕರೆಯಲು ಅಧಿಕಾರಿಗಳಿಗೆ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್ ಆದೇಶಿಸಿದ್ದಾರೆ. ಇಷ್ಟೆಲ್ಲಾ ಆದರೂ ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತ ಪ್ರತಿಭಟಿಸುತ್ತಿದ್ದಾರೆ ಎಂದು ಎ.ನಾಗರಾಜ ವಿಪಕ್ಷದ ಕಾಲೆಳೆದರು.ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಕೆ.ಚಮನ್ ಸಾಬ್, ಅಬ್ದುಲ್ ಲತೀಫ್, ಸತೀಶ, ಲೋಕೇಶ, ದಾದಾಪೀರ್, ಅಲೆಕ್ಸ್ ಇತರರು ಇದ್ದರು.
- - -ಕೋಟ್ಸ್ ದಾವಣಗೆರೆ ಕೆಲ ಭಾಗದಲ್ಲಿ ಜಲಸಿರಿ ಯೋಜನೆ ಕಾಮಗಾರಿ ಇನ್ನೂ ನಡೆಯುತ್ತಿದೆ. ಸಂಪೂರ್ಣ ಮುಗಿಯದ ಹೊರತು ಬಿಲ್ ನೀಡದಂತೆ ಹಿಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದೆವು. ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗೂ ಜಲಸಿರಿ ನೀರು ಪೂರೈಸಿದ ನಂತರವಷ್ಟೇ ಬಿಲ್ ನೀಡುವಂತೆ ಆದೇಶಿಸಲಾಗಿದೆ. ಈ ವಿಚಾರ ಜಿಲ್ಲಾ ಸಚಿವರ ಗಮನಕ್ಕೂ ತಂದಿದ್ದೇವೆ. ಜನರು ಗೊಂದಲಕ್ಕೆ ಒಳಗಾಗಬಾರದು. ಜಲಸಿರಿ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ. ಆದರೆ, ಹಳೇ ನೀರಿನ ಕಂದಾಯ ಪಾವತಿಸಿದರೆ ಸಾಕು
- ಬಿ.ಎಚ್.ವಿನಾಯಕ ಪೈಲ್ವಾನ್, ಮೇಯರ್, ಮಹಾನಗರ ಪಾಲಿಕೆ- - - ದಾವಣಗೆರೆ ಪಾಲಿಕೆ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಈಗ ಲೋಕಸಭೆ ಚುನಾವಣೆಯಲ್ಲೂ ಸ್ಥಾನ ಕಳೆದುಕೊಂಡು ಒಂದು ರೀತಿ ಅತಂತ್ರ ಪರಿಸ್ಥಿತಿಗೆ ತಲುಪಿದೆ. ಇಷ್ಟು ದಿನ ಅಧಿಕಾರ ಅನುಭವಿಸಿದ್ದಂತಹ ಬಿಜೆಪಿಯವರು ಈಗ ಸ್ಥಳೀಯವಾಗಿ, ರಾಜ್ಯದಲ್ಲಿ ಅಧಿಕಾರ ಇಲ್ಲದೇ, ಕೇಂದ್ರದಲ್ಲೂ ಪೂರ್ಣ ಪ್ರಮಾಣದ ಅಧಿಕಾರ ಇಲ್ಲದ್ದರಿಂದ ಬುದ್ಧಿಮಾಂದ್ಯರಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯನ್ನು ರಾಜ್ಯ, ರಾಷ್ಟ್ರದ ಮತದಾರರು, ದಾವಣಗೆರೆ ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ
- ಜಿ.ಎಸ್.ಮಂಜುನಾಥ ಗಡಿಗುಡಾಳ, ಕಾಂಗ್ರೆಸ್ ಸದಸ್ಯ, ಪಾಲಿಕೆ- - - ಪಾಲಿಕೆ ಕಂದಾಯ ಶಾಖೆಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಕೆಲಸ ನಿಗದಿತ ಸಮಯದಲ್ಲಿ ಆಗದಿದ್ದರೆ ಹೊಸ ಸಹಾಯವಾಣಿ ಸಂಖ್ಯೆ-82772-34444 ಸ್ಥಾಪಿಸಿದ್ದೇವೆ. ಸಾರ್ವಜನಿಕರು ಈ ಸಹಾಯವಾಣಿಗೆ ಸಂಪರ್ಕಿಸಬೇಕು. ಸಚಿವ ಮಲ್ಲಿಕಾರ್ಜುನ್ ಆದೇಶದಂತೆ ಪಾಲಿಕೆ ಆಡಳಿತ ಚುರುಕಾಗಿದೆ. ಈ ಹಿಂದೆ ಅಕ್ರಮವಾಗಿ ಪಾರ್ಕ್ ಜಾಗ, ಸಿಎ ನಿವೇಶನಗಳಿಗೆ ತೆರೆದಿದ್ದ ಖಾತೆಗಳನ್ನು ರದ್ದುಪಡಿಸಿ, ಪಾಲಿಕೆ ವಶಕ್ಕೆ ಪಡೆಯಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ 12 ಅಧಿಕಾರಿಗಳನ್ನು ಅಮಾನತುಗೊಳಿಸಿ, ಆದೇಶ ಮಾಡಲಾಗಿದೆ
- ಕೆ.ಚಮನ್ ಸಾಬ್, ಹಿರಿಯ ಸದಸ್ಯ, ಪಾಲಿಕೆ- - - -25ಕೆಡಿವಿಜಿ6:
ದಾವಣಗೆರೆ ಪಾಲಿಕೆ ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಸದಸ್ಯರಾದ ಎ.ನಾಗರಾಜ, ಮಂಜುನಾಥ ಗಡಿಗುಡಾಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.