ಕನ್ನಡದಲ್ಲಿ ಪರೀಕ್ಷೆ ಅವಕಾಶ ಕೊಟ್ಟು ಕಿತ್ತುಕೊಂಡ ರೈಲ್ವೆ! ನೈಋತ್ಯ ರೈಲ್ವೆ ಮತ್ತೆ ಶಾಕ್‌

| Published : Aug 02 2024, 01:32 AM IST / Updated: Aug 02 2024, 09:34 AM IST

ಕನ್ನಡದಲ್ಲಿ ಪರೀಕ್ಷೆ ಅವಕಾಶ ಕೊಟ್ಟು ಕಿತ್ತುಕೊಂಡ ರೈಲ್ವೆ! ನೈಋತ್ಯ ರೈಲ್ವೆ ಮತ್ತೆ ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಡ್ತಿಗಾಗಿ ಕನ್ನಡದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ರೈಲ್ವೆ ಉದ್ಯೋಗಿಗಳಿಗೆ ನೈಋತ್ಯ ರೈಲ್ವೆ ಮತ್ತೆ ಶಾಕ್‌ ಕೊಟ್ಟಿದೆ. ಪರೀಕ್ಷಾ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿದ್ದ ಇಲಾಖೆ ಇದೀಗ ಹಾಲ್‌ ಟಿಕೆಟ್‌ನಲ್ಲಿ ಕನ್ನಡಕ್ಕೆ ಕೊಕ್‌ ನೀಡಿದೆ. 

 ಮಯೂರ್‌ ಹೆಗಡೆ

  ಬೆಂಗಳೂರು :  ಬಡ್ತಿಗಾಗಿ ಕನ್ನಡದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ರೈಲ್ವೆ ಉದ್ಯೋಗಿಗಳಿಗೆ ನೈಋತ್ಯ ರೈಲ್ವೆ ಮತ್ತೆ ಶಾಕ್‌ ಕೊಟ್ಟಿದೆ. ಪರೀಕ್ಷಾ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿದ್ದ ಇಲಾಖೆ ಇದೀಗ ಹಾಲ್‌ ಟಿಕೆಟ್‌ನಲ್ಲಿ ಕನ್ನಡಕ್ಕೆ ಕೊಕ್‌ ನೀಡಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆವ ಆಯ್ಕೆ ಕೊಟ್ಟಿದೆ. ಇದರಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ನೈಋತ್ಯ ರೈಲ್ವೆಯು ಸಹಾಯಕ ಲೋಕೋಪೈಲಟ್‌ ಹುದ್ದೆಗಳಿಗೆ ಮೇ ತಿಂಗಳಲ್ಲಿ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯ (ಜಿಡಿಸಿಇ) ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರೀಕ್ಷೆ ಬರೆವ ಅವಕಾಶವಿತ್ತು. ಹೀಗಾಗಿ ಕನ್ನಡಿಗ ಅಭ್ಯರ್ಥಿಗಳು ಪರೀಕ್ಷಾ ಸಿದ್ಧತೆ ಕೈಗೊಂಡಿದ್ದರು. ಆಗಸ್ಟ್ 3ಕ್ಕೆ ಈ ಪರೀಕ್ಷೆಯಿದೆ. ಆದರೆ, ಈ ನಡುವೆ ಪರೀಕ್ಷಾರ್ಥಿಗಳಿಗೆ ನೀಡಲಾದ ಹಾಲ್‌ ಟಿಕೆಟ್‌ನಲ್ಲಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆವಂತೆ ಆಯ್ಕೆ ನೀಡಲಾಗಿದೆ.

ಹುಬ್ಬಳ್ಳಿ ವಿಭಾಗದಲ್ಲಿ 521, ಮೈಸೂರು 130, ಬೆಂಗಳೂರು ವಿಭಾಗದಲ್ಲಿ 278 ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದೆ. ಎರಡು ತಿಂಗಳಿಂದ ಪರೀಕ್ಷೆ ಸಿದ್ಧತೆ ನಡೆಸಿದ್ದ ಕನ್ನಡಿಗರು ಇದೀಗ ಮಾತೃಭಾಷೆಯಲ್ಲಿ ಪರೀಕ್ಷೆ ಬರೆವ ಆಯ್ಕೆ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತಿದ್ದಾರೆ. ಈ ಹಿಂದೆ ನಡೆದ ಜಿಡಿಸಿಇ ಪರೀಕ್ಷೆಗಳಲ್ಲಿ ಕನ್ನಡದ ಅವಕಾಶ ನೀಡಿದ್ದ ಇಲಾಖೆ ಈ ಬಾರಿ ಯಾಕೆ ನೀಡುತ್ತಿಲ್ಲ ಎಂದು ನೌಕರರು ಪ್ರಶ್ನಿಸಿದ್ದಾರೆ.

ತಮಿಳಲ್ಲಿದೆ, ಕನ್ನಡದಲ್ಲೇಕಿಲ್ಲ?:

ದಕ್ಷಿಣ ರೈಲ್ವೆಯು ತಮಿಳುನಾಡಿನಲ್ಲಿ 2017-18ರಿಂದಲೇ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಮಿಳಿನಲ್ಲಿ ಬರೆವ ಆಯ್ಕೆಯನ್ನು ನೀಡಿದೆ. ಪ್ರತಿ ವರ್ಷವೂ ಸಾವಿರಾರು ಬಡ್ತಿ ಪರೀಕ್ಷೆಗಳು ಆ ರಾಜ್ಯದ ಅಧಿಕೃತ ಭಾಷೆಯಲ್ಲಿ ನಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ನೈಋತ್ಯ ರೈಲ್ವೆಯಿಂದ ಇದಿನ್ನೂ ಜಾರಿಯಾಗಿಲ್ಲ. ಕನ್ನಡಿಗರು ಹಿಂದಿ/ ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ರಾಜ್ಯದವರು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಕೇಳುತ್ತಿದ್ದರೂ ಇನ್ನೂ ಬೇಡಿಕೆ ಈಡೇರಿಲ್ಲ.

‘ನಾವು ಕನ್ನಡದಲ್ಲೇ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದೆವು. ಆದರೆ, ಹಾಲ್‌ ಟಿಕೆಟ್‌ನಲ್ಲಿ ಹಿಂದಿ/ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡಿರುವ ಕಾರಣ ಸಮಸ್ಯೆಯಾಗಿದೆ. ಇಲಾಖೆ ಪರೀಕ್ಷೆ ಮುಂದೂಡಬೇಕು. ಜೊತೆಗೆ ಕನ್ನಡದ ಆಯ್ಕೆ ನೀಡಬೇಕು’ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ ಹೇಳಿದರು.

ಇಂಗ್ಲಿಷ್‌ ಜ್ಞಾನಕ್ಕೆ ಪ್ರತ್ಯೇಕ ಪರೀಕ್ಷೆ:

ರೈಲ್ವೆ ಮಂಡಳಿ ಪ್ರಕಾರ ಪರೀಕ್ಷೆಯಲ್ಲಿ ಇಂಗ್ಲಿಷ್ ಬದಲಿಗೆ ಪ್ರಾದೇಶಿಕ ಭಾಷೆಯ ಬಳಕೆಗೆ ಅನುಮತಿಸಬಹುದು. ಇಲಾಖೆಯ ಸೂಚನೆಗಳನ್ನು ಅಭ್ಯರ್ಥಿ ಅರ್ಥ ಮಾಡಿಕೊಳ್ಳುತ್ತಾನೋ ಇಲ್ಲವೊ ಎಂಬುದಕ್ಕಾಗಿ ಇಂಗ್ಲಿಷ್ ಜ್ಞಾನವನ್ನು ಪ್ರತ್ಯೇಕವಾಗಿ ಪರೀಕ್ಷಿಸಬಹುದು. ವಿಶೇಷ ಸಂದರ್ಭ ಪರೀಕ್ಷೆಗಳನ್ನು ಇಂಗ್ಲಿಷ್‌ನಲ್ಲಿ ನಡೆಸಬಹುದು. ಆದರೆ, ಅದು ಕಡಿಮೆ ಸಂಖ್ಯೆಯಲ್ಲಿರಬೇಕು ಎಂದು ಹೇಳಿದೆ.

ಪರೀಕ್ಷೆ ಮುಂದೂಡಿಕೆ?

ಏಕಾಏಕಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಕೊಕ್‌ ನೀಡಿರುವ ಬಗ್ಗೆ ನೌಕರರ ಸಂಘದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಆ.3ರ ಪರೀಕ್ಷೆಗಳನ್ನೇ ಮುಂದೂಡಲು ಚಿಂತನೆ ನಡೆಸಿದೆ. ಬಳಿಕ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡುವ ಅವಕಾಶ ನೀಡಬೇಕೆ, ಬೇಡವೆ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 ತಾಂತ್ರಿಕ ವಿಚಾರಗಳು, ಬಹುಆಯ್ಕೆ ಮಾದರಿ ಪರೀಕ್ಷೆ ಇರುವುದರಿಂದ ಕನ್ನಡದ ಆಯ್ಕೆ ಇಲ್ಲ. ನಾವು ಆರ್‌ಆರ್‌ಸಿಯಿಂದ ನಡೆಸುವ ಪರೀಕ್ಷೆಗಳಲ್ಲಿ ಕನ್ನಡದ ಆಯ್ಕೆ ನೀಡುತ್ತೇವೆ.

- ಡಾ.ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ