ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಜಾತ್ಯತೀತ ಮತ್ತು ಸರಳತೆಯೊಂದಿಗೆ ಕಳೆದ 600 ವರ್ಷಗಳಿಂದಲೂ ಮಂಟೇಸ್ವಾಮಿ ಸಿದ್ದಪ್ಪಾಜಿ ನೀಲಗಾರರ ಪರಂಪರೆಯನ್ನು ಜೀವಂತವಾಗಿ ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ ಎಂದು ಮಳವಳ್ಳಿ, ಹೊನ್ನಾಯಕಹಳ್ಳಿ ಮಂಟೇಸ್ವಾಮಿ ಮಠ ಹಾಗೂ ಕಪ್ಪಡಿ ಕ್ಷೇತ್ರದ ಮಠಾಧೀಪತಿ ಎಂ.ಎಲ್ ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸು ತಿಳಿಸಿದರು.

ಮಠದ ಹೊನ್ನಾಯಕನಹಳ್ಳಿ ಹೊರಭಾಗದಲ್ಲಿ ನಡೆದ ಶ್ರೀಗುರುಸಿದ್ದಪ್ಪಾಜಿ ಜಾತ್ರೆ ಹಾಗೂ ಸೇವಾ ಮಹೋತ್ಸವದ ಅಂಗವಾಗಿ ಮೈಸೂರು ಪಡುವರಹಳ್ಳಿ ಅಶ್ವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್‌ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಹಳ್ಳಿ ಹಕ್ಕಿ ಹಾಡು ಜಾನಪದ ಕಾರ್ಯಕ್ರಮವನ್ನು ತಂಬೂರಿ ವೀಣೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪೂರ್ವಜರು ನೀಲಗಾರರ ಸೇವೆಗಳ ಪರಂಪರೆಯನ್ನು ಹಿಂದಿನಿಂದಲೂ ಸಂಪ್ರದಾಯ ಬದ್ದವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮಂಟೇಸ್ವಾಮಿ ಪರಂಪರೆ ಅರ್ಥ ಮಾಡಿಕೊಂಡು ಮುಂದಕ್ಕೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಂಟೇಸ್ವಾಮಿ ನೀಲಗಾರರ ಪರಂಪರೆಯಲ್ಲಿ ಆಡಂಬರವಿಲ್ಲ. ಸರಳತೆ ಕಾಪಾಡುವುದು ಮುಖ್ಯವಾಗಿದೆ. ಮಂಟೇಸ್ವಾಮಿ ವಿಚಾರಗಳನ್ನು ಅರ್ಥ ಮಾಡಿಕೊಂಡು ಜೀವನ ರೂಪಿಸಿಕೊಂಡು ಹೋಗಬೇಕಿದೆ ಎಂದರು.

ಮಳವಳ್ಳಿ ಮಹದೇವಸ್ವಾಮಿ ಜಾನಪದ ಕಲೆಯನ್ನು ಕಳೆದು 50 ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಜಾನಪದ ಕಲೆಯ ಮೂಲಕ ಮಹಾನೀಯರ ಚರಿತ್ರೆ ಜಗತ್ತಿಗೆ ತಿಳಿಯಲಿ ಎಂದರು.


ಅಂತಾರಾಷ್ಟ್ರೀಯ ಜಾನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಮಾತನಾಡಿ, ಗ್ರಾಮೀಣ ಜಾನಪದ ಕಲೆಗಳು ಉಳಿಯಬೇಕು. ಎಲೆಮರೆಕಾಯಿಯಂತಿರುವ ಪ್ರತಿಭೆಗಳು ಹೊರ ತರುವ ಪ್ರಯತ್ನವನ್ನು ಅಶ್ವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ಜಾನಪದ ಗಾಯನ. ಸೋಬಾನೆ ಪದ, ಪೂಜಾಕುಣಿತ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದೇಗೌಡ, ಪ್ರಕಾಶ್, ಕುಳ್ಳಪ್ಪ, ಸ್ವಾಮಿ, ಶ್ರೀನಿವಾಸ್, ರಾಜಣ್ಣ, ವಿಷಕಂಠ, ಯೋಗನಂದ, ವೆಂಕಟಪ್ಪ, ನಂಜುಂಡಪ್ಪ, ಸೋಮಜಮ್ಮ ಸೇರಿದಂತೆ ಇತರರು ಇದ್ದರು.