ಸಾರಾಂಶ
- ಸಂಸದ ಸಿದ್ದೇಶ್ವರರನ್ನೇ ನೆಚ್ಚಿ ಕುಳಿತಿದ್ದರೆ ಸಂಕಷ್ಟ: ಟೀಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಯಾವುದೇ ಹವಾ ಇಲ್ಲ. ಇಲ್ಲಿ ಇರುವುದು ಒಂದೇ ಹವಾ. ಅದು ಅಭಿವೃದ್ಧಿಯ ಹವಾ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಎದುರಾಳಿ ಪಕ್ಷ ಬಿಜೆಪಿಗೆ ಟಾಂಗ್ ನೀಡಿದರು.ಮಾಯಕೊಂಡ ಕ್ಷೇತ್ರದ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಿಂದ ಮಂಗಳವಾರ ಪ್ರಚಾರ ಕೈಗೊಂಡ ಅವರು, ಕತ್ತಲಗೆರೆ, ಕವಳಿ ತಾಂಡಾ, ಕಶೆಟ್ಟಿಹಳ್ಳಿ, ಸಂಗಾಹಳ್ಳಿ, ಬೆಳಲಗೆರೆ, ಕುರುಬರಹಳ್ಳಿ, ಹರ್ಲಿಪುರ, ಮರಬನಹಳ್ಳಿ, ಕೋಟಿಹಾಳ, ಹರೋಸಾಗರ, ಸಾಗರಪೇಟೆ, ಬಸವಾಪಟ್ಟಣ, ದಾಗಿನಕಟ್ಟೆ, ಯಲೋದಹಳ್ಳಿ ಇತರೆಡೆ ಪ್ರಚಾರ ಕೈಗೊಂಡು ಮಾತನಾಡಿದರು. ದಾವಣಗೆರೆಯಲ್ಲಿ ಅಭಿವೃದ್ಧಿಯ ಹವಾ ಮಾತ್ರ ಇದೆ ಎಂದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕ್ಷೇತ್ರದಲ್ಲಿ ಸಾಧಿಸಿದ ಅಭಿವೃದ್ಧಿಯ ಹವಾ ಮಾತ್ರ ಇದೆ. ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಥಳೀಯ ಶಾಸಕರ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.ದಕ್ಷಿಣ-ಉತ್ತರ ವಿಧಾನಸಭಾ ಕ್ಷೇತ್ರಗಳು ರಾಜ್ಯಕ್ಕೆ ಮಾದರಿ ಆಗುವಂತೆ ಅಭಿವೃದ್ಧಿಯಾಗಿವೆ. ಎಲ್ಲಾ ಕ್ಷೇತ್ರಕ್ಕೂ ಅನುದಾನ ಕಲ್ಪಿಸಲಾಗಿದೆ. ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಅವರು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡದಿದ್ದರೆ, ಬಿಜೆಪಿಯ ಸಂಸದರನ್ನು ನೆಚ್ಚಿ ಕುಳಿತಿದ್ದರೆ ಜನರು ಇವತ್ತು ಸಂಕಷ್ಟ ಅನುಭವಿಸಬೇಕಾಗುತ್ತಿತ್ತು. ಇಂತಹ ಸಂಸದರನ್ನು ಕ್ಷೇತ್ರದ ಮತದಾರರು ಮೊದಲು ಮನೆಗೆ ಕಳುಹಿಸಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಭರವಸೆ ನೀಡಿತ್ತು. ಅದರಂತೆ ನಮ್ಮ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆ ಜಾರಿಗೆ ತಂದು ಇಂದು ಚನ್ನಗಿರಿ ಕ್ಷೇತ್ರಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ₹110 ಕೋಟಿ ಹಣ ಫಲಾನುಭವಿಗಳಿಗೆ ವಿತರಿಸಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆ ನೀಡಲಾಗಿದೆ ಎಂದು ಹೇಳಿದರು.ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ ₹1 ಲಕ್ಷ, ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗ ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ₹400ಕ್ಕೆ ಹೆಚ್ಚಳ ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಶಾಸಕ ಕೆ.ಎಸ್.ಬಸವಂತಪ್ಪ, ಬ್ಲಾಕ್ ಅಧ್ಯಕ್ಷ ಬಿ.ಜಿ.ನಾಗರಾಜ, ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.- - - -30ಕೆಡಿವಿಜಿ23, 24:
ಮಾಯಕೊಂಡ ಕ್ಷೇತ್ರದ ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತಯಾಚಿಸಿದರು. ಶಾಸಕ ಕೆ.ಎಸ್.ಬಸವಂತಪ್ಪ ಇದ್ದರು.