ಧರ್ಮಗಳು ಪ್ರೀತಿ ಕರುಣೆ ತೋರಿಸಿ ಎಂದು ಹೇಳಿವೆಯೇ ಹೊರತು ದ್ವೇಷ ಮಾಡಿ ಎಂದು ಹೇಳಿಲ್ಲ. ನಿಜ ಶರಣರಾದ ಬಸವಣ್ಣನವರು ಸಾವಿರಾರು ವರ್ಷಗಳ ಹಿಂದೆ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನೆಸಿಯ್ಯ ಎಂದರು. ಅದರೂ ಇಷ್ಟು ವರ್ಷಗಳು ಕಳೆದರೂ ಜಾತಿ ವ್ಯವಸ್ಥೆ ಕಡಿಮೆ ಆಗಿಲ್ಲ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಜಾತಿ ವ್ಯವಸ್ಥೆ ಇರುವ ಕಡೆ ಶಾಂತಿ ಮೂಡಲ್ಲ. ಬಸವಾದಿ ಶರಣರ ತತ್ವಗಳನ್ನು ಸಮಾಜ ಸರಿಯಾಗಿ ಪಾಲನೆ ಮಾಡದಿರುವುದೇ ಇಂದಿನ ಜಾತಿ ವ್ಯವಸ್ಥೆಗೆ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಭಾನುವಾರ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬಸವಣ್ಣನವರು ಸಮಾಜ ತಿದ್ದುವ ಕೆಲಸ ಮಾಡಲು ನಿರಂತರವಾಗಿ ಶ್ರಮಿಸಿದ್ದರೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದುವರೆಗೂ ಹೋಗಿಲ್ಲದಿರುವುದು ದುರಂತ ಎಂದರು.
ಸೂಫಿಗಳು, ಸಮಾಜ ಸುಧಾರಕರು ಶಿವಯೋಗಿಗಳು ಸಮಾಜ ಸುಧಾರಣೆಗಾಗಿ ಮುಖ್ಯವಾದ ಪಂಕ್ತಿಯಲ್ಲಿ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಅನೇಕ ಧರ್ಮ ಜಾತಿಗಳಿದ್ದು, ಅಸಮಾನತೆಯಿಂದಾಗಿ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.ಧರ್ಮಗಳು ಪ್ರೀತಿ ಕರುಣೆ ತೋರಿಸಿ ಎಂದು ಹೇಳಿವೆಯೇ ಹೊರತು ದ್ವೇಷ ಮಾಡಿ ಎಂದು ಹೇಳಿಲ್ಲ. ನಿಜ ಶರಣರಾದ ಬಸವಣ್ಣನವರು ಸಾವಿರಾರು ವರ್ಷಗಳ ಹಿಂದೆ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನೆಸಿಯ್ಯ ಎಂದರು. ಅದರೂ ಇಷ್ಟು ವರ್ಷಗಳು ಕಳೆದರೂ ಜಾತಿ ವ್ಯವಸ್ಥೆ ಕಡಿಮೆ ಆಗಿಲ್ಲ. ಕುವೆಂಪು ಅವರ ಕರೆಯಂತೆ ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಮನುಷ್ಯ ಧರ್ಮ ನಿರ್ಮಾಣ ಆಗಬೇಕಿದೆ ಎಂದರು.
ನಾವುಗಳು ಪ್ರಾಣಿಗಳನ್ನು ಪ್ರೀತಿಸುತ್ತೇವೆ. ಆದರೆ, ನಮ್ಮ ಸುತ್ತಲೂ ವಾಸಿಸುವ ಮನುಷ್ಯನನ್ನು ದ್ವೇಷಿಸುವ ಪರಿಸ್ಥಿತಿ ಇದೆ. ಸಮ ಸಮಾಜ ನಿರ್ಮಾಣ ಆಗಬಾರದು ಎಂದು ದ್ವೇಷ ಬಿತ್ತುವ ದುಷ್ಟ ಶಕ್ತಿಗಳಿವೆ. ಅವುಗಳನ್ನು ಗುರುತಿಸಿ ಧಮನ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಎಂದರು.ಮನುಷ್ಯನ ಕಷ್ಟ ಸುಖಗಳಿಗೆ ಸ್ಪಂದಿಸುವುದೇ ದಾಸೋಹ ಆಗಿದೆ. ಕಾಯಕ ಎಂದರೇ ಉತ್ಪಾದನೆ, ದಾಸೋಹ ಎಂದರೇ ವಿತರಣೆ ಆಗಿದ್ದು, ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರತಿಫಲವಾಗಿ ಬಂದ ಉತ್ಪನ್ನವನ್ನು ಎಲ್ಲರೂ ಅನುಭವಿಸಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.ಬಾಬಾ ಸಾಹೇಬರು ಸಂವಿಧಾನ ಅರ್ಪಿಸಿದ ನಂತರ ಮಾತನಾಡಿ ಮೇಲು ಕೀಳು ತಾರತಮ್ಯ ವೈರುದ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಇದು ಬದಲಾಗಲು ನಾವು ಬದಲಾವಣೆ ಆಗಬೇಕು ಎಂದಿದ್ದರು. ಪ್ರಜಾಪ್ರಭುತ್ವದ ಸೌಧ ಉಳಿಯಬೇಕಾದರೇ ಯಾರು ಸಹ ಅಸಮಾನತೆಯಿಂದ ನರಳಬಾರದು ಎಂದು ಅಂಬೇಡ್ಕರ್ ಅವರನ್ನು ಸ್ಮರಿಸಿದರು.
ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು ವಿಷಾದನೀಯ. ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವ ಮೌಲ್ಯಗಳನ್ನು ಪಾಲನೆ ಮಾಡಬೇಕು.ಸಮಾಜದಲ್ಲಿ ಜನರ ನಡುವೆ ಪ್ರೀತಿ ಇರಬೇಕು. ಇದೇ ನಮ್ಮ ಸಂಸ್ಕೃತಿ ಆಗಿದೆ. ದ್ವೇಷ ಮಾಡಬಾರದು. ಜಾತಿ ಹೋಗಬೇಕಾದರೆ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ಬರಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಚಲನೆ ಸಿಗುವುದು ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ಬಂದರೆ ಮಾತ್ರ ಸಿಗುತ್ತದೆ ಎಂದರು. ವೇದಿಕೆಯತ್ತ ಬರುತ್ತಿದ್ದ ಲೇಸರ್ ಬೆಳಕು; ಪೊಲೀಸರ ಗಲಿಬಿಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದ ವೇಳೆ ಸಾರ್ವಜನಿಕರ ಗ್ಯಾಲರಿಯಿಂದ ಪದೇ ಪದೇ ಲೇಸರ್ ಬೆಳಕು ವೇದಿಕೆಯತ್ತ ಬರುತ್ತಿತ್ತು. ಅಲ್ಲದೇ, ಸಿಎಂ ಮುಖದತ್ತ ಲೇಸರ್ ಬೆಳಕನ್ನು ಬೀಡುತ್ತಿರುವುದನ್ನು ಕಂಡ ಪೊಲೀಸರು ಕೆಲ ಕಾಲ ಗಲಿಬಿಲಿಯಾದರು. ಹಿರಿಯ ಅಧಿಕಾರಿಗಳೇ ವೇದಿಕೆಯತ್ತ ಧಾವಿಸಿ ಪರಿಶೀಲನೆಗೆ ಮುಂದಾದರು.