ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಪ್ಪಡಿ, ಚಿಕ್ಕಲ್ಲೂರು ಜಾತ್ರೆಯ ಪಂಕ್ತಿಸೇವೆ ಸಂಬಂಧ ಹೈಕೋರ್ಟ್ ನೀಡಿರುವ 2017ರ ಮಧ್ಯಂತರ ಆದೇಶದಲ್ಲಿ ಸಂವಿಧಾನ ಹಾಗೂ ಪರಂಪರೆಯನ್ನೇ ಎತ್ತಿ ಹಿಡಿದಿದೆ. ಪ್ರಾಣಿಬಲಿ ನಿಲ್ಲಿಸಿ, ಪಂಕ್ತಿಸೇವೆ, ಆಹಾರಹಕ್ಕು, ಜನರ ಭಾವನೆಗೆ ಅಡ್ಡಿ ಬೇಡ ಎಂಬ ಸ್ಪಷ್ಟನೆ ನೀಡಿದೆ. ಹೀಗಿದ್ದರೂ ಜಿಲ್ಲಾಡಳಿತ ಅಜ್ಞಾನದಿಂದ ಕೋರ್ಟ್ ಆದೇಶ ಪಾಲಿಸುತ್ತಿಲ್ಲ, ಹೀಗಾಗಿ ಕುಯ್ಯುವುದು ಮತ್ತು ಬಲಿಕೊಡುವುದು ಎರಡರ ವ್ಯತ್ಯಾಸಗಳನ್ನು ಜಿಲ್ಲಾಡಳಿತ ಅರಿಯಬೇಕಾಗಿದೆ, ಹಾಗಾಗಿ ಜಿಲ್ಲಾಡಳಿತ ವಾಸ್ತವ ಅರಿತು ಪಂಕ್ತಿ ಸೇವೆ ಸುಗಮವಾಗಲು ಸಹಕರಿಸಿಬೇಕು ಎಂದು ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರ ನರಸಿಂಹೇ ಗೌಡ ತಿಳಿಸಿದರು.ದೇವಸ್ಥಾನ ಆವರಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಂವಿಧಾನ ವಿರೋಧಿ ನಡೆಗೆ ಈ ಬಾರಿ ಛಿಮಾರಿ ಹಾಕಿ ಪರಂಪರೆ ಉಳಿಸಲಾಗುವುದು. ಬಲಿ ಪೀಠವಿಲ್ಲದ ಜಾಗದಲ್ಲಿ ಪ್ರಾಣಿ ಬಲಿ ನಿಷೇಧ ಎಂಬ ನೆಪದಲ್ಲಿ ಲಕ್ಷಾಂತರ ಮಂದಿಯ ಒಕ್ಕಲುತನದವರ ಮಂಟೇಸ್ವಾಮಿ ಪರಂಪರೆಗೆ ಕಳಂಕ ತರುವ ಕೆಲಸವಾಗುತ್ತಿದೆ, ಈ ಬಾರಿ ಇದಕ್ಕೆ ನಾಂದಿ ಹಾಡಲಿದ್ದೇವೆ ಎಂದರು.ಮಂಟೇಸ್ವಾಮಿ ಪರಂಪರೆ ಕರ್ನಾಟಕದಲ್ಲಿದ್ದು, ಸಂಶೋಧನೆಯಿಂದ 13 ಕೃತಿ ಬಂದಿದೆ. ಇಲ್ಲಿ ಬಲಿ ಕೊಡುವ ಪದ್ಧತಿ ಇಲ್ಲ, ಒಕ್ಕಲುತನ ಲಕ್ಷಾಂತರ ಮಂದಿಯ ಸುಗ್ಗಿಯ ಸಂತೃಪ್ತಿ ಕೃತಜ್ಞತೆ ಸೇವೆಯ ವಿಶಿಷ್ಟ ಆಚರಣೆಯಾಗಿದೆ. ಇದನ್ನು ಅಡ್ಡಿಪಡಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ಪ್ಲೇಕ್ಸ್ ಅಳವಡಿಸಿ, ಕುರಿ, ಕೊಳಿ ಪ್ರಾಣಿಗಳನ್ನು ಹಿಡಿಯಲು ಮುಂದಾಗುವುದು ಸರಿಯಲ್ಲ. ಅದೇ ಚಾಳಿ ಮತ್ತು ಘರ್ಷಣೆ ಆಗದೆ ಈ ಬಾರಿ ಸುಸೂತ್ರವಾಗಿ ಜಾತ್ರೆ, ಪಂಕ್ತಿಸೇವೆ ನಡೆಸಲು ಅನುವು ಮಾಡಬೇಕು ಎಂದರು.
ಶತಮಾನದ ಹಿನ್ನೆಲೆಯ ಮಂಟಸ್ವಾಮಿ ಅಸಮಾನತೆಯ ವಿರುದ್ಧ ಧ್ವನಿಯೆತ್ತಿದ್ದರು. ಪರಂಪರೆಯಲ್ಲಿ ಪಂಕ್ತಿಭೇದವಿಲ್ಲ, ಇಲ್ಲಿ ಎಲ್ಲರು ಸರಿಸಮಾನ. ಮಾಂಸ ಆಹಾರ, ಸಸ್ಯಹಾರದವರು ಸಹಪಂಕ್ತಿ ಭೋಜನ ಸವಿಯಲಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ತಪ್ಪು ವರದಿ, ಸೂಚನೆ ಮೂಲಕ ಒಕ್ಕಲುತನದವರ ಭಾವನೆಗೆ ಧಕ್ಕೆ ತರುವುದು ಬೇಡ ವಾಸ್ತವ ತಿಳಿಸಬೇಕು. ಇಂತಹ ಅಡ್ಡಿ ನಿವಾರಣೆಗೆ ಹೋರಾಟ ಸಮಿತಿ ಮುಂದಾಗಿದ್ದು, ಪರಂಪರೆ ಪರವಾಗಿರುವ ಕೋರ್ಟ್ ಆದೇಶವನ್ನು ಕನ್ನಡದಲ್ಲಿ ನಮೂದಿಸಿ ಫ್ಲೆಕ್ಸ್ ಅಳವಡಿಸಲಾಗುವುದು. ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.ಮಂಟೇಸ್ವಾಮಿ ಪರಂಪರೆ ಮತ್ತು ಸಂಸ್ಕೃತಿ ಸಂಶೋಧಕ ಮಹಾದೇವಶಂಕರಪುರ ಮಾತನಾಡಿ, ಕೆಲವರು ಕೋರ್ಟ್ ಮೊರೆ ಹೋಗಿದ್ದವರಿಂದ ಪಂಕ್ತಿಸೇವೆ ಅಡ್ಡಿಯಾಗಿದೆ. ಮಧ್ಯಂತರ ಆದೇಶ ಅನುಷ್ಠಾನ ಆಗಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ಹೀಗಿದ್ದರು ಪಂಕ್ತಿ ಸೇವೆಯಲ್ಲಿ ಅಡ್ಡಿ ಅಡೆತಡೆ ಸರಿಯಲ್ಲ ಪ್ರಾಣಿಬಲಿ ನೀಡಿದರೆ ತಡೆಯಲಿ, ಆದರೆ ಇಲ್ಲಿ ಬಲಿಪೀಠವು ಇಲ್ಲ, ಬಲಿ ನೀಡುವ ಆಚರಣೆಯು ಇಲ್ಲ ಹರಕೆ, ಎಡೆಇಟ್ಟು ಪೂರ್ವಜರನ್ನು ಸ್ಮರಿಸುವ ಪದ್ಧತಿಯಷ್ಟೇ ಎಂದರು.
ಈ ವೇಳೆ ಕೊಳ್ಳೇಗಾಲ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಕಾರ್ಯದರ್ಶಿ ಶಂಭುಲಿಂಗ ಸ್ವಾಮಿ. ಎಲ್ (ರಾಜಣ್ಣ ಮುಳ್ಳೂರು), ಡಾ.ಲಿಂಗರಾಜು ಬೈರನತ್ತ, ಇಕ್ಕಡಳ್ಳಿ ಪ್ರವೀಣ್, ಮತ್ತಿಪುರ ವಿನಯ್, ಕೊತ್ತನೂರು ಪುಟ್ಟಸ್ವಾಮಿ, ರಾಚಶೆಟ್ಟಿದೊಡ್ಡಿ ಸಿದ್ದಶೆಟ್ಟಿ, ಇಕ್ಕಡಳ್ಳಿ ಶಿವರಾಮಶೆಟ್ಟಿ, ಕೊತ್ತನೂರು ಸಾವುಕಯ್ಯ, ಮೊಳಗನಕಟ್ಟೆ ರಾಜ್ ಗೋಪಾಲ್, ನರಸೀಪುರ ಆರ್.ಸಿದ್ದಯ್ಯ ಇನ್ನಿತರರು ಇದ್ದರು.