ಸಾರಾಂಶ
ಬೆಳಗಾವಿ : ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನದ ಪ್ರಶ್ನೆ ಅಪ್ರಸ್ತುತ. ಇಂತಹ ಯಾವುದೇ ಪ್ರಸ್ತಾಪ ಪಕ್ಷದ ಮುಂದೆ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸತೀಶ ಜಾರಕಿಹೊಳಿ ಅವರನ್ನು ಮಣಿಸಲು ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರಲಾಗುತ್ತಿದೆ ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಬಿರುಕುಂಟು ಮಾಡಲು ಇಂತಹ ಅಂತೆ-ಕಂತೆ ಸೃಷ್ಟಿಸಲಾಗುತ್ತಿದೆ. ಇವೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳು. ಕಾಂಗ್ರೆಸ್ನಲ್ಲಿ ಇಂತವೆಲ್ಲ ನಡೆಯುವುದಿಲ್ಲ ಎಂದು ಹೇಳಿದರು.
ಒಂದು ವೇಳೆ ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತಿರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಆ ಪ್ರಸ್ತಾಪವೇ ಇಲ್ಲ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನ ಸೆಳೆಯಲು ಅನೇಕ ತಂತ್ರಗಾರಿಕೆ ಆಗಿರಬಹುದು. ಜನ ನಮಗೆ ಆಶೀರ್ವಾದ ಕೊಟ್ಟಿದ್ದಾರೆ. ಸರ್ಕಾರ ನಡೆಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್, ಸಹಕಾರಿ ಸಂಘದಿಂದ ಫೈನಾನ್ಸ್ಗಳು ಅನುಮತಿ ಪಡೆದು, ಅವುಗಳ ಮಾರ್ಗಸೂಚಿಯಡಿ ಕಾನೂತ್ಮಕವಾಗಿ ವ್ಯವಹರಿಸುತ್ತಿದ್ದಾರೆ. ಸಾಲದ ನೆಪದಲ್ಲಿ ಮಹಿಳೆಯರ ಮೇಲೆ ಕೇಸ್ ಹಾಕುವುದು ಸರಿಯಲ್ಲ. ಕಾನೂನಿನ ಪ್ರಕಾರ ಮಹಿಳೆಯರಿಗೆ ಶಿಕ್ಷೆ ಕೊಡುವುದಾದರೆ ಕಾನೂನು ಮೂಲಕವೇ ಅವರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಮೈಸೂರು ಅರಮನೆ ಆಸ್ತಿ ವಿಚಾರವಾಗಿ ಸರ್ಕಾರ ವಿರೋಧ ಮಾಡುತ್ತಿಲ್ಲ. ಕೆಲವು ಆಸ್ತಿಗಳು ಸರ್ಕಾರಕ್ಕೆ ಸೇರಬೇಕು ಎಂಬ ವಾದ ನಡೆಯುತ್ತಿದೆ. ಮೈಸೂರಿನಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕೆ ಟಿಡಿಆರ್ ಮಾಡಬೇಕಾಗಿದೆ. ಹೆಚ್ಚಿನ ಪ್ರಮಾಣದ ಅನುದಾನವನ್ನು ನೀಡಲು ಸಾಧ್ಯವಾಗದ ಹಿನ್ನೆಲೆ ನಿನ್ನೆ ತುರ್ತು ಸಚಿವ ಸಂಪುಟ ಸಭೆ ಮಾಡಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುದ್ದಾಟ ಏರ್ಪಟ್ಟಿರುವುದರ ಕುರಿತ ಪ್ರಶ್ನೆಗೆ, ಇವು ಯಾವೂ ರಾಜ್ಯದ ವಿಷಯಗಳಲ್ಲ. ಎಲ್ಲಾ ಹೈಕಮಾಂಡ್ ಮುಂದೆ ಇರುವ ವಿಷಯಗಳು. ಪಕ್ಷ ಮತ್ತು ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ ಎಂದು ಹೇಳಿದರು.