ಕಾಂಗ್ರೆಸ್ಸಿನಲ್ಲಿ ಹಿಂದೂಗಳು, ದಲಿತರಿಗೆ ರಕ್ಷಣೆ ಇಲ್ಲ-ಶಿವಯೋಗಿ ಟೀಕೆ

| Published : Apr 22 2024, 02:17 AM IST

ಸಾರಾಂಶ

ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ಹತ್ಯೆ ಆರೋಪಿ ಫಯಾಜ್‌ನನ್ನು ಎನ್‌ಕೌಂಟರ್ ಮಾಡಬೇಕಾದ ಸರ್ಕಾರವೇ ಆತನ ಮನೆಗೆ ಪೊಲೀಸ್ ರಕ್ಷಣೆ ಒದಗಿಸಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಆರೋಪಿಸಿದರು.

ಬ್ಯಾಡಗಿ: ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ಹತ್ಯೆ ಆರೋಪಿ ಫಯಾಜ್‌ನನ್ನು ಎನ್‌ಕೌಂಟರ್ ಮಾಡಬೇಕಾದ ಸರ್ಕಾರವೇ ಆತನ ಮನೆಗೆ ಪೊಲೀಸ್ ರಕ್ಷಣೆ ಒದಗಿಸಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ವರ್ಗಕ್ಕೆ ಸೇರಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಾಗಲೇ ಕಾಂಗ್ರೆಸ್‌ನಲ್ಲಿ ಹಿಂದೂಗಳಿಗೆ ಮತ್ತು ದಲಿತರಿಗೆ ರಕ್ಷಣೆ ಇಲ್ಲವೆಂಬುದು ಸ್ಪಷ್ಟವಾಗಿದೆ. ಈಗಲೂ ಕಾಲಮಿಂಚಿಲ್ಲ, ಕಾಂಗ್ರೆಸ್‌ನಲ್ಲಿರುವ ಎಲ್ಲ ಹಿಂದೂಗಳು ಮತ್ತು ದಲಿತರು ಸಿದ್ದರಾಮಯ್ಯ ಅವರ ಮುಖಕ್ಕೆ ರಾಜೀನಾಮೆ ಎಸೆದು ಬಿಜೆಪಿ ಸೇರ್ಪಡೆಗೊಂಡು ನಿಮ್ಮ ಕುಟುಂಬಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಹೇಳಿದರು.

ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ‘ಜಿಹಾದಿ’ ಮನಸ್ಥಿತಿ ಹೆಚ್ಚಾಗುತ್ತಿದೆ. ಮದರಸಾಗಳಲ್ಲಿ ಇಂತಹ ಶಿಕ್ಷಣ ನೀಡಲಾಗುತ್ತಿದೆ. ಮೊನ್ನೆಯಷ್ಟೇ ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ್ ಪರವಾದ ಘೋಷಣೆ, ಹನುಮಾನ್ ಚಾಲೀಸಾ ಹಾಕಿದವರ ಮೇಲೆ ಹಲ್ಲೆ ಇವೆಲ್ಲವುಗಳನ್ನು ನೋಡಿಯೂ ಕಾಂಗ್ರೆಸ್ಸಿನಲ್ಲಿರುವ ನಮ್ಮ ಹಿಂದೂ ಸಹೋದರರಿಗೆ ಏನೂ ಅನ್ನಿಸುತ್ತಿಲ್ಲವೇ? ಅಲ್ಲಿ ನಡೆದಿದ್ದು ಇಲ್ಲಿ ನಡೆಯುವುದಿಲ್ಲವೆಂದು ಅಂದುಕೊಳ್ಳಬೇಡಿ. ನೈತಿಕತೆ ಇದ್ದರೆ ಇಂದೇ ಎಲ್ಲರೂ ಕಾಂಗ್ರೆಸ್‌ಗೆ ಸಾಮೂಹಿಕ ರಾಜೀನಾಮೆ ನೀಡುವಂತೆ ಮನವಿ ಮಾಡಿದರು.

ಪ್ರಸಕ್ತ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಕಾಂಗ್ರೆಸ್‌ನ ಬಹುತೇಕ ಮುಖಂಡರು ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದರು. ಕುರುಬರಿಗೆ ಅವಮಾನ: ನ್ಯಾಯವಾದಿ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅಪ್ಪಿಕೊಂಡ ಕುರುಬ ಸಮಾಜ, ಅಧಿಕಾರಕ್ಕೆ ಬರುವಂತೆ ನೋಡಿಕೊಂಡಿದೆ. ಆದರೆ ಇತ್ತೀಚೆಗೆ ನಡೆದ ಮುಸ್ಲಿಂ ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರು ಮುಂದಿನ ಜನ್ಮ ಅಂತಾ ಒಂದಿದ್ದರೆ ಮುಸ್ಲಿಂ ಕುಟುಂಬದಲ್ಲಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಅದೊಂದು ರಾಜಕೀಯ ಭಾಷಣವಾಗಿದ್ದರೆ ನಮ್ಮದೇನೂ ಅಭ್ಯಂತರವಿರಲಿಲ್ಲ. ಅಷ್ಟಕ್ಕೂ ಸಿದ್ಧರಾಮಯ್ಯನವರಿಗೆ ಜನ್ಮಕೊಟ್ಟ ಹಾಲುಮತ ಸಮಾಜದಿಂದ ಅವರಿಗಾದ ಅನ್ಯಾಯವೇನು? ಬಹಿರಂಗಪಡಿಸುವಂತೆ ಆಗ್ರಹಿಸಿದರು. ಹೋರಾಟ ನಿಲ್ಲಲ್ಲ: ಸುರೇಶ ಆಸಾದಿ ಮಾತನಾಡಿ, ಘಟನೆ ನಡೆದು 3 ದಿನಗಳಾದರೂ ಮುಖ್ಯಮಂತ್ರಿ ಇತ್ತ ಸುಳಿದಿಲ್ಲ. ನೇಹಾ ಹಿರೇಮಠ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಈ ವೇಳೆ ವಿಷ್ಣುಕಾಂತ ಬೆನ್ನೂರ, ವಿನಯ ಹಿರೇಮಠ, ಮಂಜುನಾಥ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.