ಹೇಮಗಿರಿ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ರಕ್ಷಣೆ, ಸೂಕ್ತ ಸೌಲಭ್ಯಗಳಿಲ್ಲ

| Published : Jul 11 2025, 12:32 AM IST

ಹೇಮಗಿರಿ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ರಕ್ಷಣೆ, ಸೂಕ್ತ ಸೌಲಭ್ಯಗಳಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೇಮಗಿರಿ ಅಣೆಕಟ್ಟೆ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಹೇಮಗಿರಿ ನಾಡಿನ ಸುಂದರ ಪ್ರವಾಸಿ ಸ್ಥಳವಾಗಿ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳಲು ಮುಂದಾಗಬೇಕಿದೆ.

ಎಂ.ಕೆ.ಹರಿಚರಣ ತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರವಾಸಿ ತಾಣ, ತಾಲೂಕಿನ ಹೇಮಗಿರಿ ಅಣೆಕಟ್ಟೆ ಬಳಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ರಕ್ಷಣೆ ಮತ್ತು ಸೂಕ್ತ ಸೌಲಭ್ಯಗಳು ಇಲ್ಲದೆ ಪರಿಸರ ನಿರ್ವಹಣಾ ಕೊರತೆಯಿಂದ ನಲುಗುತ್ತಿದೆ.

ಪಟ್ಟಣದಿಂದ ಸುಮಾರು 8 ಕಿಮೀ ದೂರದಲ್ಲಿ ಹೇಮಗಿರಿ ಅಣೆಕಟ್ಟೆ ಇದೆ. ಶತಮಾನಗಳ ಹಿಂದೆ ಮೈಸೂರಿನ ಅರಸರು ಈ ಪ್ರದೇಶದ ಜನರಿಗೆ ನೀರಾವರಿ ಸೌಲಭ್ಯ ಒದಗಿಸಿ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಸಲುವಾಗಿ ಹೇಮಾವತಿ ನದಿಗೆ ಹೇಮಗಿರಿ ಬಳಿ ಅಣೆಕಟ್ಟೆಯನ್ನು ನಿರ್ಮಿಸಿ, ನೀರಾವರಿಗೆ ಬಳಕೆ ಮಾಡಿದ್ದಾರೆ.

ಹೇಮಗಿರಿ ಅಣೆಕಟ್ಟೆಯಿಂದ ಸುಮಾರು 4 ಸಾವಿರ ಎಕರೆ ಪ್ರದೇಶದ ಕೃಷಿಗೆ ಭೂಮಿಯಲ್ಲಿ ರೈತರು ಭತ್ತ, ಕಬ್ಬು ಮುಂತಾದ ಬೆಳೆಗಳನ್ನು ಬೆಳೆಯಲು ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಹೇಮಗಿರಿ ಬೆಟ್ಟದ ಮೇಲೆ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯವಿದ್ದು, ಹೇಮಗಿರಿಯ ದನಗಳ ಜಾತ್ರೆ ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿದೆ.

ದಕ್ಷಿಣಾಭಿಮುಖವಾಗಿ ಹರಿದು ಬರುವ ಹೇಮಾವತಿ ನದಿ ಹೇಮಗಿರಿ ಬೆಟ್ಟದ ಬುಡಕ್ಕೆ ಅಪ್ಪಳಿಸಿ, ಪಶ್ಚಿಮಾಭಿ ಮುಖವಾಗಿ ತಿರುಗುತ್ತದೆ. ಹೇಮಾವತಿ ನದಿಗೆ ಮೈಸೂರು ಅರಸರು ನಿರ್ಮಿಸಿರುವ ಹೇಮಗಿರಿ ಅಣೆಕಟ್ಟೆ ಮನಮೋಹಕವಾಗಿದ್ದು ನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಮಳೆಗಾಲದಲ್ಲಿ ಹೇಮೆ ಮೈದುಂಬಿ ಹರಿಯುವಾಗ ಅಣೆಕಟ್ಟೆ ಸಂಪೂರ್ಣ ಜಲವಶವಾಗಿ ರುದ್ರ ರಮಣೀಯವಾಗಿರುತ್ತದೆ. ಹೇಮೆ ಒಡಲಿನಲ್ಲಿ ನೀರು ಕಡಿಮೆಯಾದರೆ ಅಣೆಕಟ್ಟೆಯಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ನೀರು ಮನಮೋಹಕ ದೃಶ್ಯ ಕಾವ್ಯವನ್ನು ಬರೆದು ಬಿಡುತ್ತದೆ.

ಈ ಸುಂದರ ಅಣೆಕಟ್ಟೆ ನೋಡಲು ನಿತ್ಯ ನೂರಾರು ಜನ ಮನೆ- ಮಕ್ಕಳೊಂದಿಗೆ ಬರುತ್ತಾರೆ. ಪ್ರವಾಸೋಧ್ಯಮ ಅಭಿವೃದ್ಧಿ ದೃಷ್ಟಿಯಿಂದ ಹೇಮಗಿರಿ ಅಣೆಕಟ್ಟೆ ಬಳಿ ಈ ಹಿಂದೆ ರಾಜ್ಯ ಸರ್ಕಾರ ನೀರಾವರಿ ಇಲಾಖೆ ಮೂಲಕ ಹೈಮಾಸ್ಟ್ ವಿದ್ಯುತ್ ದೀಪ, ನದಿಗೆ ರಕ್ಷಣಾತ್ಮಕ ತಂತಿ ಬೇಲಿ ಮತ್ತು ಪ್ರವಾಸಿಗರು ಕುಳಿತುಕೊಂಡು ವಿಶ್ರಾಂತಿ ಪಡೆಯಲು ಕಲ್ಲಿನ ಬೆಂಚುಗಳನ್ನು ಹಾಕಿಸಿದೆ.

ಲಕ್ಷಾಂತರ ರು. ವ್ಯಯಿಸಿ ಪ್ರವಾಸಿಗರಿಗೆ ಕಲ್ಪಿಕೊಟ್ಟಿದ್ದ ಸೌಲಭ್ಯಗಳು ನೀರಾವರಿ ಇಲಾಖೆ ಅಸಡ್ಡೆಯಿಂದ ಹಾಳಾಗುತ್ತಿವೆ. ಸಂಜೆ ವೇಳೆ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಿದ್ದ ಹೈಮಾಸ್ಟ್ ವಿದ್ಯುತ್ ದೀಪ ಹಾಳಾಗಿದೆ. ದೀಪದ ಕಂಬ ಮಾತ್ರ ಸ್ಮಾರಕದಂತೆ ನಿಂತಿದೆ.

ನದಿ ದಂಡೆಯಲ್ಲಿ ಪ್ರವಾಸಿಗರು ವಿರಮಿಸಲು ಹಾಕಿಸಿದ್ದ ಕಲ್ಲಿನ ಬೆಂಚುಗಳ ಸುತ್ತ ಗಿಡಗೆಂಟೆಗಳು ಬೆಳೆದಿದ್ದು, ಸರ್ಕಾರದ ಆಶಯಕ್ಕೆ ಹಿನ್ನಡೆಯಾಗಿದೆ. ನದಿ ದಂಡೆಯ ರಕ್ಷಣಾ ತಂತಿ ಬೇಲಿಯ ಸುತ್ತಲೂ ಗಿಡಗೆಂಟೆಗಳು ಬೆಳೆದು ಅಣೆಕಟ್ಟೆಯ ಸೌಂದರ್ಯ ವೀಕ್ಷಣೆಗೆ ಅಡಚಣೆಯಾಗಿದೆ. ಅಣೆಕಟ್ಟೆ ವೀಕ್ಷಣಾ ಸ್ಥಳ ಒಬ್ಬ ಪಾದಚಾರಿ ನಿಲ್ಲುವಷ್ಟು ಕಿರಿದಾಗಿದೆ. ಪ್ರವಾಸಿಗರು ಸ್ವಲ್ಪ ಎಚ್ಚರ ತಪ್ಪಿದರೂ ನದಿ ಪಾಲಾಗುವುದು ಗ್ಯಾರಂಟಿ.

ಅಣೆಕಟ್ಟೆಯ ಪರಿಸರ ನಿರ್ವಹಣೆ ನೀರಾವರಿ ಇಲಾಖೆಗೆ ಸೇರಿದ್ದರೂ ಇಲ್ಲಿನ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಶ್ರಮಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೇಮಗಿರಿ ಅಣೆಕಟ್ಟೆ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಹೇಮಗಿರಿ ನಾಡಿನ ಸುಂದರ ಪ್ರವಾಸಿ ಸ್ಥಳವಾಗಿ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳಲು ಮುಂದಾಗಬೇಕಿದೆ.

ಹೇಮಗಿರಿ ಅಣೆಕಟ್ಟೆ ಬಳಿ ನೀರಾವರಿ ಇಲಾಖೆಯ ಸವಡೆಗಳಿಂದ ಕಲ್ಲಿನ ಬೆಂಚುಗಳ ಸುತ್ತ ಗಿಡಗೆಂಟೆಗಳನ್ನು ಕೀಳಿಸಿ, ಕೆಟ್ಟು ಹೋಗಿರುವ ಹೈಮಾಸ್ಟ್ ವಿದ್ಯುತ್ ದೀಪಕ್ಕೆ ಮರು ಜೀವಕೊಡಬೇಕು. ಅಣೆಕಟ್ಟೆ ವೀಕ್ಷಣಾ ಸ್ಥಳ ಅತ್ಯಂತ ಕಿರಿದಾಗಿದೆ. ಅದನ್ನು ಶಾಶ್ವತವಾಗಿ ಬಂದ್ ಮಾಡಿ ಆಧುನಿಕ ವೀಕ್ಷಣಾ ಗೋಪುರ ನಿರ್ಮಿಸುವ ಅಗತ್ಯವಿದೆ ಎಂಬುದು ಪ್ರವಾಸಿಗರ ಆಗ್ರಹವಾಗಿದೆ.