ಒಳಮೀಸಲಾತಿ ಅನ್ಯಾಯದ ವಿರುದ್ಧ ಹೋರಾಟ ಕೈ ಬಿಡುವ ಮಾತೇ ಇಲ್ಲ

| Published : Sep 11 2025, 12:03 AM IST

ಸಾರಾಂಶ

ರಾಜಕೀಯ ಅಧಿಕಾರಕ್ಕಾಗಿ ಕುತ್ತಿಗೆ ಹಿಸುಕುವ ಕೆಲಸ ಮಾಡಲಾಗುತ್ತಿದೆ. ಒಳ ಮೀಸಲಾತಿ ಹಂಚಿಕೆ ಸಂಬಂಧ ಆರೋಗ್ಯ ಪೂರ್ಣ ಚರ್ಚೆ ಮಾಡುತ್ತೇವೆ. ಆದರೆ ದಾಳಿ ಮಾಡ್ತಿವಿ, ಚಪ್ಪಲಿ ಹಾರ ಹಾಕ್ತೀವಿ ಅಂದರೆ ನಾವು ಬಿಡಲ್ಲ. ಮಾದಿಗರ ಇತಿಹಾಸ ಗೊತ್ತಿಲ್ಲದೆ ಮಾತನಾಡಲಾಗುತ್ತಿದೆ. ಬಡ್ತಿಯಲ್ಲಿ ಇಲ್ಲ. ಬ್ಯಾಕ್‌ ಲಾಕ್‌ ನಲ್ಲಿ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಒಳ ಮೀಸಲಾತಿ ಹಂಚಿಕೆಯಲ್ಲಾಗಿರುವ ಅನ್ಯಾಯದ ವಿರುದ್ಧ ಹೋರಾಟ ಕೈ ಬಿಡುವ ಮಾತೇ ಇಲ್ಲ. ಅಲೆಮಾರಿ ಸಮುದಾಯಗಳನ್ನು ಸೇರಿಸಿಕೊಂಡು ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಬಿ.ಆರ್‌. ಭಾಸ್ಕರ್‌ ಪ್ರಸಾದ್‌ ಎಚ್ಚರಿಸಿದರು.

ನಗರದ ಜೆ.ಎಲ್‌.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಪರ ವೇದಿಕೆ ಆಯೋಜಿಸಿದ್ದ ಒಳ ಮೀಸಲಾತಿಯ ಒಳಸುಳಿಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರಾಜಕೀಯ ಅಧಿಕಾರಕ್ಕಾಗಿ ಕುತ್ತಿಗೆ ಹಿಸುಕುವ ಕೆಲಸ ಮಾಡಲಾಗುತ್ತಿದೆ. ಒಳ ಮೀಸಲಾತಿ ಹಂಚಿಕೆ ಸಂಬಂಧ ಆರೋಗ್ಯ ಪೂರ್ಣ ಚರ್ಚೆ ಮಾಡುತ್ತೇವೆ. ಆದರೆ ದಾಳಿ ಮಾಡ್ತಿವಿ, ಚಪ್ಪಲಿ ಹಾರ ಹಾಕ್ತೀವಿ ಅಂದರೆ ನಾವು ಬಿಡಲ್ಲ. ಮಾದಿಗರ ಇತಿಹಾಸ ಗೊತ್ತಿಲ್ಲದೆ ಮಾತನಾಡಲಾಗುತ್ತಿದೆ. ಬಡ್ತಿಯಲ್ಲಿ ಇಲ್ಲ. ಬ್ಯಾಕ್‌ ಲಾಕ್‌ ನಲ್ಲಿ ಇಲ್ಲ. ರಾಜಕೀಯದಲ್ಲಿ ಒಳ ಮೀಸಲಾತಿ ಇಲ್ಲ ಎನ್ನುವುದು ಸರಿಯಲ್ಲ. ಆರ್ಥಿಕವಾಗಿ, ರಾಜಕೀಯವಾಗಿ ಒಳ ಮೀಸಲಾತಿ ಜಾರಿ ಅಗತ್ಯ ಎಂದರು.

ಪ.ಜಾತಿ ಒಳ ಮೀಸಲಾತಿಯಲ್ಲಿ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂದ್ರ (ಎಕೆಎಡಿಎಎ) ಕುರಿತ ಗೊಂದಲ ಪರಿಹರಿಸಿ, ಬಡ್ತಿ ಮತ್ತು ಬ್ಯಾಕ್‌ ಲಾಗ್‌ ಹುದ್ದೆಯಲ್ಲಿ ಒಳ ಮೀಸಲಾತಿ ಕಲ್ಪಿಸದಿದ್ದರೆ ಸೆ. 14 ರಿಂದ ರಾಜ್ಯವ್ಯಾಪ್ತಿ 2ನೇ ಹಂತದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಮಾತನಾಡಿ, ನಮ್ಮ ಹೋರಾಟ ಯಾರ ವಿರೋಧವಾಗಿಯೂ ಅಲ್ಲ. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಒಳ ಮೀಸಲಾತಿಯಲ್ಲಿ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂದ್ರ ಕುರಿತಂತೆ ಪರಿಶೀಲನೆ ಆಗಬೇಕಿದೆ ಎಂದು ಅವರು ಒತ್ತಾಯಿಸಿದರು.

ಚಿತ್ರದುರ್ಗ ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ, ಮುಖಂಡರಾದ ಕೋಡಿಹಳ್ಳಿ ಸಂತೋಷ್, ಕುಮಾರ್, ಪ್ರಕಾಶ್, ಮಂಜುನಾಥ್ ಗೋಪಾಲಪುರ, ಮರಡೀಪುರ ರವಿಕುಮಾರ್ ಮೊದಲಾದವರು ಇದ್ದರು.