ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ

| Published : Mar 24 2024, 01:30 AM IST

ಸಾರಾಂಶ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಜನಾಂಗದ ಬಿಜೆಪಿಯ ಕೆಲವು ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೆಲ್ಲಂಬಳ್ಳಿ ಸೋಮನಾಯಕ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಾವು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಜನಾಂಗದ ಬಿಜೆಪಿಯ ಕೆಲವು ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೆಲ್ಲಂಬಳ್ಳಿ ಸೋಮನಾಯಕ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಾವು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಸ್ಪಷ್ಟಪಡಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾವಾಗಲಿ ಅಥವಾ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾದ ಮಾಜಿ ಉಪಾಧ್ಯಕ್ಷ ಮಲ್ಲೇಶ್, ಮೈಸೂರಿನ ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಮಾಜಿ ಮೇಯ‌ರ್ ಶಿವಕುಮಾರ್, ಹಿರಿಯ ಮುಖಂಡರಾದ ಅಪ್ಪಣ್ಣ ಎಲ್ಲೂ ಸಭೆ ನಡೆಸಿ ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ. ಕೆಲ್ಲಂಬಳ್ಳಿ ಸೋಮನಾಯಕರು ತಮ್ಮಗಳ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ತಮ್ಮಗಳ ವಿರುದ್ಧ ಸುಳ್ಳು ಆರೋಪ ಮಾಡಿದರೆ ಅವರಿಗೆ ಲಾಭವಾಗುತ್ತೆ ಎಂದರೆ ಮಾಡಿಕೊಳ್ಳಲಿ. ಅವರು ನಾಯಕ ಜನಾಂಗ ಮತ್ತು ಬಿಜೆಪಿ ಪಕ್ಷವನ್ನು ಗುತ್ತಿಗೆ ಪಡೆದುಕೊಂಡಿಲ್ಲ ಎಂದು ಕಿಡಿಕಾರಿದರು.

ನನಗೆ ಬಿಜೆಪಿ ಅನೇಕ ಹುದ್ದೆಗಳನ್ನು ನೀಡಿದೆ. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿತು. ಸಮುದಾಯಕ್ಕೂ ಅನೇಕ ಕೊಡುಗೆಗಳನ್ನು ನೀಡಿದೆ ಬಿಜೆಪಿಯ ಉಪ್ಪಿನ ಋಣ ಸಮುದಾಯದ ಮೇಲಿದೆ.ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು.ಗುಂಡ್ಲುಪೇಟೆ ಮಲ್ಲೇಶ್ ಮಾತನಾಡಿ, ಕೆಲ್ಲಂಬಳ್ಳಿ ಸೋಮನಾಯಕ ಅವರಿಗೆ ಟೀಕೆ ಮಾಡುವುದನ್ನೇ ಒಂದು ಚಟವಾಗಿಸಿ ಕೊಂಡಿದ್ದಾರೆ. ಅವರಿಗೆ ಬಿಜೆಪಿ ಹನೂರಿನಿಂದ ಟಿಕೆಟ್‌ ನೀಡಿತ್ತು. ನಮ್ಮ ಜನಾಂಗದವರು ಪ್ರಾಬಲ್ಯ ಇರುವ ಅಲ್ಲಿ ಎಷ್ಟು ಮತ ಪಡೆದರು. ನಾವು ಪಕ್ಷದಲ್ಲಿರುವುದು ಇವರಿಗೆ ಇಷ್ಟವಿಲ್ಲವೇ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ಸುರೇಶ್‌, ಕಪಿನಿನಾಯಕ ಹಾಜರಿದ್ದರು.