ದ್ವೇಷದ ರಾಜಕಾರಣ ಮಾಡಲ್ಲ: ಸಿಎಂ, ಡಿಸಿಎಂ

| Published : Jun 15 2024, 01:03 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿಗರ ಆರೋಪವನ್ನು ಕಾಂಗ್ರೆಸ್‌ ತಳ್ಳಿಹಾಕಿದೆ

- ಬಎಸ್‌ವೈ ವಿರುದ್ಧ ‘ಪೋಕ್ಸೋ’ ಷಡ್ಯಂತ್ರ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಮುಖ್ಯಮಂತ್ರಿ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿಗರ ಆರೋಪವನ್ನು ಕಾಂಗ್ರೆಸ್‌ ತಳ್ಳಿಹಾಕಿದೆ. ಕಾಂಗ್ರೆಸ್‌ ದ್ವೇಷದ ರಾಜಕೀಯ ಮಾಡುತ್ತಿಲ್ಲ. ಪ್ರಕರಣದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ.

ಯಡಿಯೂರಪ್ಪ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತೀವ್ರ ಕಿಡಿಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇನೆ. ಕಾಂಗ್ರೆಸ್‌ ಯಾವತ್ತೂ, ಯಾವುದೇ ಪ್ರಕರಣದಲ್ಲಿ ದ್ವೇಷದ ರಾಜಕೀಯ ಮಾಡುವುದಿಲ್ಲ. ನಾವು ಕಾನೂನು ರೀತಿ ಕೆಲಸ ಮಾಡುತ್ತೇವೆ. ಕೋರ್ಟ್‌ ಆದೇಶಕ್ಕೆ ಎಲ್ಲರೂ ತಲೆಬಾಗಬೇಕಾಗುತ್ತದೆ. ವಿರೋಧ ಪಕ್ಷಗಳ ಎಲ್ಲಾ ಆರೋಪಗಳಿಗೂ ನಾನು ಉತ್ತರ ಕೊಡಬೇಕಂತ ಏನೂ ಇಲ್ಲ ಎಂದಿದ್ದಾರೆ.

ದ್ವೇಷ ರಾಜಕಾರಣದ ಅಗತ್ಯವಿಲ್ಲ: ಕಾಂಗ್ರೆಸ್ ಯಾರ ಮೇಲೂ ದ್ವೇಷದ ರಾಜಕೀಯ ಮಾಡಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಾಹೀರಾತು ವಿಚಾರದಲ್ಲಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸು ದಾಖಲಿಸಿರುವುದು ಯಾವ ರಾಜಕಾರಣ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಪ್ರಕರಣದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಆದರೆ ಕಾಂಗ್ರೆಸ್ ಪಕ್ಷ ಯಾರ ಮೇಲೂ ದ್ವೇಷ ಮಾಡುವುದಿಲ್ಲ. ದ್ವೇಷ ರಾಜಕಾರಣದ ಬಗ್ಗೆ ನಾನು ಮಾತನಾಡಿದರೆ ವಿಚಾರ ಎಲ್ಲೆಲ್ಲೋ ಹೋಗುತ್ತದೆ. ಈ ವಿಚಾರದಲ್ಲಿ ನನಗೂ ಅಯ್ಯೋ ಅನಿಸುತ್ತದೆ. ಅಂಥ ಕಠಿಣ ಪರಿಸ್ಥಿತಿಯನ್ನು ನಾವು ಅನುಭವಿಸಿದ್ದೇವೆ ಎಂದರು.

ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ನ್ಯಾಯಾಲಯದ ಮುಂದೆ ಹಾಜರಾದರು. ಅವರ ವಿರುದ್ಧ ಕೇಸು ಹಾಕಿರುವುದು ಯಾವ ರಾಜಕಾರಣ? ಬಿಜೆಪಿ ವಿರುದ್ಧದ ಜಾಹೀರಾತಿಗೂ ರಾಹುಲ್ ಗಾಂಧಿ ಅವರಿಗೂ ಏನು ಸಂಬಂಧ? ದ್ವೇಷದ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಆ ಜಾಹೀರಾತು ಕೊಟ್ಟಿದ್ದು ರಾಹುಲ್ ಗಾಂಧಿ ಅವರೇ? ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾ ಅಥವಾ ಕೆಪಿಸಿಸಿ ಅಧ್ಯಕ್ಷರಾ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು, ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಪೋಕ್ಸೋ ಗಂಭೀರ ಪ್ರಕರಣ. ಯಾವುದೇ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಹೈಕೋರ್ಟ್‌ ವಾರೆಂಟ್ ಜಾರಿ ಮಾಡಿದೆ. ಯಡಿಯೂರಪ್ಪ ತಪ್ಪಿತಸ್ಥರು ಹೌದೋ, ಅಲ್ವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.