- ನಾಳೆ, ನಾಡಿದ್ದು ಎಲ್ಲರನ್ನೂ ಕರೆಸಿ ಮಾತಾಡುತ್ತೇವೆ: ಎಸ್‌.ಎಸ್‌.ಮಲ್ಲಿಕಾರ್ಜುನ । - ಇಂದು ಸಿಎಂ, ಡಿಸಿಎಂ ಜೊತೆಗೆ ಜಮೀರ್ ಸಹ ನಾಮಪತ್ರ ಸಲ್ಲಿಸಲು ಭಾಗಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಸಾದಿಕ್ ಪೈಲ್ವಾನ್ ಹೊಸಬರೇನೂ ಅಲ್ಲ. ನಮ್ಮವರೇ ಆಗಿದ್ದು, ಎಲ್ಲರ ಜೊತೆಗೂ ನಾಳೆ ಅಥವಾ ನಾಡಿದ್ದು ಮಾತನಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾದಿಕ್‌ ಪೈಲ್ವಾನರು ಈಗ ಸ್ವಲ್ಪ ಸಿಟ್ಟಿನಲ್ಲಿರುತ್ತಾರೆ. ನಾನು ಕರೆ ಮಾಡಿದೆನಾದರೂ ಕರೆ ಸ್ವೀಕರಿಸಲಿಲ್ಲ. ಸಾದಿಕ್‌ ಅವರ ತಮ್ಮ ಅಯೂಬ್‌ ನಮ್ಮ ಬ್ಲಾಕ್ ಅಧ್ಯಕ್ಷ. ನಮ್ಮ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಎಲ್ಲವೂ ಸರಿಯಾಗಲಿದ್ದು, ಸಾದಿಕ್‌ ಜೊತೆಗೂ ಮಾತನಾಡುವೆ ಎಂದರು.


ಚುನಾವಣೆ ಬಂದಾಗ ಎಲ್ಲರಿಗೂ ಶಾಸಕರಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ಟಿಕೆಟ್ ಕೊಡುವುದು ಒಂದು ಅಷ್ಟೇ. ನನಗೂ ಸಹ ಹೈಕಮಾಂಡ್ ಕೇಳಿದಾಗ ನೀವು ನಾಮಪತ್ರ ಹಿಂಪಡೆಯಲು ಹೇಳಿದರೆ ತೆಗೆದುಕೊಳ್ಳುತ್ತೇವೆಂದು ಸ್ಪಷ್ಟವಾಗಿ ಹೇಳಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ, ಜನಾಂಗ ಅಂತಿಲ್ಲ. ಕಾಂಗ್ರೆಸ್ಸೆಂದರೆ ಒಂದೇ ಮನೆ. ಈ ಹಿಂದೆಯೂ ನಮಗೆ ಆಶೀರ್ವಾದ ಮಾಡಿದ್ದಾರೆ. ಈಗಲೂ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ನಿಂದ ಈಗಾಗಲೇ ಬಿ ಫಾರಂ ಫೈನಲ್ ಆಗಿದ್ದು, ನಾಳೆ ಅಥವಾ ನಾಡಿದ್ದು ಎಲ್ಲರಿಗೂ ಕರೆಸಿ, ಮಾತನಾಡುತ್ತೇವೆ. ಎಲ್ಲವನ್ನೂ ಸರಿ ಮಾಡುತ್ತೇವೆ. ಎಐಸಿಸಿ, ಕೆಪಿಸಿಸಿಯಿಂದ ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರ ಸಮ್ಮುಖದಲ್ಲೇ ಆ ಮುಖಂಡರಿಗೆ ಜವಾಬ್ದಾರಿ ನೀಡಿದ್ದಾರೆ. ನಾವೆಲ್ಲರೂ ಸೇರಿಯೇ ಅಲ್ಪಸಂಖ್ಯಾತ ಮುಖಂಡರಿಗೆ ಜವಾಬ್ದಾರಿ ನೀಡಿದ್ದೇವೆ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪನವರು 40 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದವರು. ಸಮರ್ಥ ಶಾಮನೂರಿಗೂ ಪಕ್ಷ ನೋಡಿದೆ. ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಪಕ್ಷದಿಂದ ಗೆಲ್ಲುವಂತಹ ಸೂಕ್ತ ಅಭ್ಯರ್ಥಿ ಆಗಬೇಕೆಂದು ಎಲ್ಲಾ ನಾಯಕರ ಸಮ್ಮುಖ ಸಂಧಾನ ಮಾಡಿಯೇ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಮುಸ್ಲಿಂ ಸಮುದಾಯದಿಂದ ಯಾವುದೇ ಬೇಡಿಕೆಗಳೂ ಇಲ್ಲ. ಅಬ್ದುಲ್‌ ಜಬ್ಬಾರ್‌ರಿಗೆ ಹಿಂದೆ ಎಂಎಲ್ಸಿ ಮಾಡುವಂತೆ ಎಸ್‌.ಎಂ. ಕೃಷ್ಣ, ಸಿದ್ದರಾಮಯ್ಯರಿಗೆ ಕೇಳಿದ್ದೆವು. ನಮ್ಮ ಪಕ್ಷವು ಜಬ್ಬಾರ್‌ ಅವರನ್ನು ಎಂಎಲ್ಸಿ ಸಹ ಮಾಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೇರಳದಲ್ಲೂ ಚುನಾವಣೆ ನಡೆಯುವ ಹಿನ್ನೆಲೆ ವಸತಿ ಸಚಿವ ಜಮೀರ್ ಅಹಮ್ಮದ್‌ ಅವರಿಗೆ ಅಲ್ಲಿಗೆ ಆಹ್ವಾನಿಸಿದ್ದಾರಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹಾಗೂ ಮಾ.23ರಂದು ನಾಮಪತ್ರ ಸಲ್ಲಿಸಲು ಬರುವಂತೆ ಸೂಚನೆ ನೀಡಿದ್ದಾರೆ. ನಾನೂ ಹೇಳಿದ್ದು, ನಾಮಪತ್ರ ಸಲ್ಲಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಜಮೀರ್ ಅಹಮ್ಮದ್, ಎಂ.ಬಿ.ಪಾಟೀಲ, ಸಂತೋಷ ಲಾಡ್‌ ಸೇರಿದಂತೆ ಅನೇಕ ಸಚಿವರು, ಮಾಜಿ ಸಚಿವರು, ಶಾಸಕರು, ಮುಖಂಡರು ಬರುತ್ತಾರೆ. ಎಲ್ಲರೂ ಸೇರಿಯೇ ನಾಮಪತ್ರ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.

ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಜಮೀರ್ ಅಹಮ್ಮದ್ ಸಹ ಬರುತ್ತಾರೆ. ಮೊನ್ನೆ ಹಬ್ಬದ ದಿನ ಚೆನ್ನಾಗಿದೆಯೆಂದು ತಮ್ಮ ಪತ್ನಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದರಿಂದ ಸಮರ್ಥ ಶಾಮನೂರು ನಾಮಪತ್ರ ಸಲ್ಲಿಸಿದ್ದರು. ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅವಾಗಲೂ ಹೈಕಮಾಂಡ್ ನಿಲುವಿಗೆ ನಾವು ಬದ್ಧ. ವರಿಷ್ಠರು ವಾಪಸ್‌ ತೆಗೆಸಬೇಕೆಂದರೆ ಸಮರ್ಥ ಎಂ. ಶಾಮನೂರು ನಾಮಪತ್ರ ವಾಪಸ್‌ ತೆಗೆಸುವುದಾಗಿ ಅಂದೇ ನಾನು ಭರವಸೆ ನೀಡಿದ್ದೆ. ಈಗ ಪಕ್ಷವು ಸಮರ್ಥಗೆ ಅವಕಾಶ ನೀಡಿದೆ. ಕಾಂಗ್ರೆಸ್ಸನ್ನು ಗೆಲ್ಲಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಮಾ.23ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆಗೆ ಬಂದು, ಸಮರ್ಥ ಜೊತೆಗೆ ನಾಮಪತ್ರ ಸಲ್ಲಿಸುವರು. ಅನಂತರ ಇಲ್ಲಿಂದ ಬಾಗಲಕೋಟೆಗೆ ತೆರಳಿ, ಉಮೇಶ ಮೇಟಿ ನಾಮಪತ್ರ ಸಲ್ಲಿಸುವಾಗ ಜೊತೆಗಿರುತ್ತಾರೆ. ಸೋಮವಾರವೇ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏಕಕಾಲಕ್ಕೆ ಪೂಜೆ ಇಟ್ಟುಕೊಂಡಿದ್ದಾರೆ. ಇದೇನೂ ಹೊಸದಂತೂ ಅಲ್ಲ. ಪೂಜೆ ಸಲ್ಲಿಸುವುದರೊಂದಿಗೆ ನಾಮಪತ್ರ ಸಲ್ಲಿಸುವ ಮೆರವಣಿಗೆ ಶುರುವಾಗುತ್ತದೆ. ಎರಡೂ ಪಕ್ಷಗಳ ಸಮಯವನ್ನು ಪೊಲೀಸರು ಮ್ಯಾನೇಜ್ ಮಾಡುತ್ತಾರೆ. ಯಾರಿಗಾದರೂ ಹಿಂದೆ, ಮುಂದೆ ಆಗುತ್ತದಷ್ಟೇ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದರು.

- - - (ಕೋಟ್‌)

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಎಐಸಿಸಿಯಿಂದ ಬಂದ ಬಿ ಫಾರಂ ಸಮರ್ಥ ಶಾಮನೂರುಗೆ ನೀಡಿದ್ದಾರೆ. ನಾಮಪತ್ರ ಸಲ್ಲಿಸಿ, ಕಾಂಗ್ರೆಸ್ಸನ್ನು ಗೆಲ್ಲಿಸಲು ಸೂಚಿಸಿದ್ದಾರೆ. ನಾವೆಲ್ಲರೂ ಸಮಸ್ತ ಮತ್ತು ಉತ್ತರ- ದಕ್ಷಿಣ ಕ್ಷೇತ್ರಗಳ ಕಾಂಗ್ರೆಸ್ ಕುಟುಂಬದವರೆಲ್ಲಾ ಒಟ್ಟಾಗಿ ಹೆಚ್ಚಿನ ಕೆಲಸ ಮಾಡಿ, ಮತದಾರರ ಮನ ಗೆದ್ದು, ಸಮರ್ಥಗೆ ಗೆಲ್ಲಿಸುವ ಕೆಲಸವನ್ನು ಮಾಡುತ್ತೇವೆ. ಈ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.

- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ.

- - -

(ಬಾಕ್ಸ್‌) * ಸಂಘ ಪರಿವಾದವರ ಕಾಂಗ್ರೆಸ್ ಸೇರ್ಪಡೆ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿಯ ಸಾಕಷ್ಟು ಜನರು, ಆರೆಸ್ಸೆಸ್‌ನ ಕಟ್ಟಾ ಅನುಯಾಯಿಗಳು, ಶಾಖಾ ಪ್ರಮುಖರು ಸ್ವಯಂ ಪ್ರೇರಣೆಯಿಂದ ಇವತ್ತು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದಿನಿಂದಲೂ ಆಗದ ಕೆಲಸವನ್ನು ನಮ್ಮ ಅವಧಿಯಲ್ಲಿ ಮಾಡಿಸಿದ್ದೇವೆ ಎಂಬುದನ್ನು ಮೆಚ್ಚಿ ಬಂದಿದ್ದಾರೆ. ನಾವು ಕೆಲಸ ಮಾಡಿಕೊಟ್ಟಿದ್ದೇವೆಂಬ ಕಾರಣಕ್ಕಾಗಿ ನಿಮ್ಮ ಮಗನ ಚುನಾವಣೆಗೆ ದುಡಿಯುತ್ತೇವೆಂದು ಸೇರ್ಪಡೆ ಆಗಿದ್ದಾರೆ. ಹೀಗೆ ಸೇರ್ಪಡೆಯಾದವರು ಕಡಿಮೆ ನಾಯಕರಲ್ಲ. ಸಂಘ ಪರಿವಾರದವರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ನಮಗೆ ಆನೆಬಲ ತಂದಂತಾಗಿದೆ.

- - -

-22ಕೆಡಿವಿಜಿ12: ದಾವಣಗೆರೆಯಲ್ಲಿ ಭಾನುವಾರ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮಾಧ್ಯಮಗಳೊಂದಿಗೆ ಮಾತನಾಡಿದರು. -22ಕೆಡಿವಿಜಿ13: ದಾವಣಗೆರೆಯ ತಮ್ಮ ನಿವಾಸದಲ್ಲಿ ಭಾನುವಾರ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಬಿಜೆಪಿ, ಆರೆಸ್ಸೆಸ್‌ನ ಮುಖಂಡರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.