ಕನ್ನಡಪ್ರಭ ವಾರ್ತೆ ಬೆಳಗಾವಿಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಹಿತಕ್ಕಾಗಿ ನಡೆಯುವ ಹೋರಾಟದಲ್ಲಿ ಮುಖಂಡರು ಕಾರ್ಖಾನೆ ಮಾಲೀಕರಿಂದ ಹಣ ಪಡೆದು ದ್ರೋಹ ಬಗೆಯಬಾರದು. ರೈತರ ಸಂಪೂರ್ಣ ವಿಶ್ವಾಸವೇ ಹೋರಾಟದ ಶಕ್ತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಹಿತಕ್ಕಾಗಿ ನಡೆಯುವ ಹೋರಾಟದಲ್ಲಿ ಮುಖಂಡರು ಕಾರ್ಖಾನೆ ಮಾಲೀಕರಿಂದ ಹಣ ಪಡೆದು ದ್ರೋಹ ಬಗೆಯಬಾರದು. ರೈತರ ಸಂಪೂರ್ಣ ವಿಶ್ವಾಸವೇ ಹೋರಾಟದ ಶಕ್ತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಹೇಳಿದರು.

ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಐದನೇ ದಿನಕ್ಕೆ ಕಾಲಿಟ್ಟಿರುವ ರೈತರ ಹೋರಾಟವನ್ನುದ್ದೇಶಿಸಿ ಮಾತನಾಡಿದ ಅವರು, ಕಬ್ಬು, ಕಾಯಿಪಲ್ಯ, ಭತ್ತ, ರಾಗಿ, ತೊಗರಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯದಿರುವುದು ಕೃಷಿ ಕ್ಷೇತ್ರದ ಗಂಭೀರ ಸಮಸ್ಯೆಯಾಗಿದೆ ಎಂದರು.

ರೈತರ ಹೋರಾಟವನ್ನು ಮುನ್ನಡೆಸುವ ಮುಖಂಡರು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ಕಾರ್ಖಾನೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ರೈತರ ಹಿತಾಸಕ್ತಿಗೆ ಧಕ್ಕೆ ತರಬಾರದು. ರೈತರ ನಂಬಿಕೆಯನ್ನು ಉಳಿಸಿಕೊಂಡಾಗ ಮಾತ್ರ ಹೋರಾಟಕ್ಕೆ ಯಶಸ್ಸು ದೊರೆಯುತ್ತದೆ ಎಂದರು.

ರೈತರು ಜಾತಿ, ಮತಗಳ ಭೇದ ಮರೆತು ಒಗ್ಗಟ್ಟಾಗಬೇಕು. ಒಂದು ಕೋಟಿ ರೈತರು ಸಂಘಟಿತರಾದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ರೈತರ ಶಕ್ತಿಯನ್ನು ಗುರುತಿಸಲೇಬೇಕಾಗುತ್ತದೆ. ಒಗ್ಗಟ್ಟಿನ ಹೋರಾಟದಿಂದ ಮಾತ್ರ ರೈತರ ಬೇಡಿಕೆಗಳಿಗೆ ನ್ಯಾಯ ದೊರಕಿಸಿಕೊಳ್ಳಲು ಸಾಧ್ಯ ಎಂದರು.

ಸಾಮಾಜಿಕ ಜಾಲತಾಣಗಳನ್ನು ರೈತರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ತಮ್ಮ ಸಮಸ್ಯೆಗಳು, ಬೆಳೆಗಳಿಗೆ ಸಿಗುತ್ತಿರುವ ಬೆಲೆ ಹಾಗೂ ಹೋರಾಟದ ಬೆಳವಣಿಗೆಗಳನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಹೋರಾಟದ ಸಭೆಗಳಲ್ಲಿ ತಾಯಂದಿರು ಮತ್ತು ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ರೈತರ ಹೋರಾಟಕ್ಕೆ ಮಹಿಳೆಯರ ಬೆಂಬಲ ಮತ್ತಷ್ಟು ಬಲ ತುಂಬಲಿದೆ ಎಂದು ಚುನಪ್ಪ ಪೂಜೇರಿ ಹೇಳಿದರು.