ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯಲ್ಲಿ 13 ಸಾವಿರ ಮೆಟ್ರಿಕ್ ಟನ್ ಯುರಿಯಾ, 5942 ಮೆಟ್ರಿಕ್ ಟನ್‌ ಡಿಎಪಿ, 54710 ಮೆಟ್ರಿಕ್ ಟನ್ ಕಾಂಪ್ಲೆಕ್ಸ್‌, 3074 ಮೆಟ್ರಿಕ್‌ ಟನ್ ಪೊಟ್ಯಾಷ್‌ ರಸಗೊಬ್ಬರ ದಾಸ್ತಾನಿದ್ದು, ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಜಿಯಾವುಲ್ಲಾ ಹೇಳಿದರು.

ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ನೇತೃತ್ವದ ರೈತ ನಿಯೋಗಕ್ಕೆ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ, ರೈತರು ಯಾವುದೇ ಆತಂಕ, ಭಯಪಡುವ ಅವಶ್ಯಕತೆಯೂ ಇಲ್ಲ ಎಂದರು.

ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಮಧ್ಯ ಪ್ರಾಚ್ಯದ ಯುದ್ಧದ ಪರಿಣಾಮ ರಸಗೊಬ್ಬರ ತಯಾರಿಕೆ ಕಚ್ಚಾ ವಸ್ತುಗಳ ಆಮದಿನಲ್ಲಿ ಭಾರೀ ಸಮಸ್ಸೆಯಾಗಿದ್ದರಿಂದ ರಸಗೊಬ್ಬರದ ಕೊರತೆ ಎದುರಾಗಬಹುದು ಎಂಬ ಆತಂಕದಲ್ಲಿದ್ದಾರೆ. ಈ ಕಾರಣಕ್ಕೆ ಹೆಚ್ಚು ಹೆಚ್ಚು ಗೊಬ್ಬರ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ರಸಗೊಬ್ಬರ ಮಾರಾಟಗಾರರು ಕೃತಕ ಆಭಾವ ಸೃಷ್ಟಿಸಿ, ಬೆಲೆ ಹೆಚ್ಚಿಸುತ್ತಿದ್ದಾರೆ. ಹಾಗಾಗಿ ಕೃಷಿ ಇಲಾಖೆ ಸ್ಪಷ್ಟಿಕರಣ ನೀಡಲಿ ಎಂದು ಆಗ್ರಹಿಸಿದರು.

ಕೃಷಿ ಜಂಟಿ ನಿರ್ದೇಶಕ ಕೆ.ಜಿಯಾವುಲ್ಲಾ ಮಾತನಾಡಿ, ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಎಂ.ಆರ್.ಪಿ ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವ ಮಾರಾಟಗಾರರ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.


ಜಿಲ್ಲೆಯ ರೈತರಿಗೆ ಮೆಕ್ಕೆಜೋಳ ಬೆಳೆ ಕಡಿಮೆ ಮಾಡಿ ರಾಗಿ ಬೆಳೆಯಲು ಉತ್ತೇಜಿಸಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ 187500 ಮೆಟ್ರಿಕ್ ಟನ್ ರಾಗಿ ಉತ್ಪಾದನೆ ಮಾಡಬೇಕು ಎಂದರು.

ರೈತ ಮುಖಂಡರಾದ ಲೋಕಿಕೆರೆ ಟಿ.ಎಚ್.ಶಂಕರಮೂರ್ತಿ, ಕಲ್ಕೆರೆ ಸಿ.ರಾಮಚಂದ್ರ, ಕೃಷಿ ಉಪನಿರ್ದೇಶಕ ರೇವಣ್ಣಸಿದ್ದಗೌಡ್ರು, ಜಿಲ್ಲಾ ಆತ್ಮ ಯೋಜನಾಧಿಕಾರಿ ಚಂದ್ರಶೇಖರ, ಕೃಷಿ ಜಾರಿದಳ ಸಹಾಯಕ ನಿರ್ದೇಶಕರಾದ ಗೋವರ್ಧನ, ಶ್ರೀನಿವಾಸಲು, ಹೊನ್ನಾಳಿ ಕೃಷಿ ಸಹಾಯಕ ನಿರ್ದೇಶಕರಾದ ವಿಶ್ವನಾಥ, ಚೆನ್ನಗಿರಿ ಅರುಣಕುಮಾರ, ದಾವಣಗೆರೆ ಕೃಷಿ ಸಹಾಯಕ ನಿರ್ದೇಶಕ ಶ್ರೀಧರ ಇತರರು ಇದ್ದರು.