ಸಾರಾಂಶ
ಅಭಿವೃದ್ಧಿ ಮೂಲಕವೇ ಆರೋಪಗಳಿಗೆ ಉತ್ತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳೂ ಉತ್ತಮವಾಗಿ ನಡೆಯುತ್ತಿವೆ. ಆದರೆ, ಈ ವಿಚಾರವಾಗಿ ಬಿಜೆಪಿಯವರು ಬರೀ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ಮೂಲಕವೇ ಆರೋಪಗಳಿಗೆ ಉತ್ತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಭೈರದೇವನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಸರ್ಕಾರದ ಎರಡು ವರ್ಷದ ಮೊದಲ ಸಾಧನಾ ಸಮಾವೇಶ ಮತ್ತು ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ’ ನೆರವೇರಿಸಿದ ಬಳಿಕ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ಇಲ್ಲಿಯವರೆಗೆ ಗ್ಯಾರಂಟಿ ಯೋಜನೆಗಳ ಮೂಲಕ 80 ಸಾವಿರ ಕೋಟಿ ರು. ಜನರ ಜೇಬಿಗೆ ಹಾಕಿದ್ದೇವೆ. ಈ ಬಾರಿಯ ಬಜೆಟ್‌ನಲ್ಲೂ 50 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ. ಈ ಯೋಜನೆಗಳಿಂದ ಜನರಲ್ಲಿ ಕೊಳ್ಳುವ ಸಾಮರ್ಥ್ಯ ಹೆಚ್ಚಿದೆ. ಅವರ ಆರ್ಥಿಕತೆ ಸುಧಾರಿಸಲಿದೆ ಎಂದರು.
ಸುಳ್ಳು ಆರೋಪ: ಬಿಜೆಪಿಯವರು ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ, ಸರ್ಕಾರ ಪಾಪರ್ ಆಗಿದೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅಂಥ ಯಾವುದೇ ಸಮಸ್ಯೆಗಳೂ ಆಗಿಲ್ಲ. ಇವತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ 1,000 ಕೋಟಿ ರು. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಅಷ್ಟೇ ಅಲ್ಲ, ಕಳೆದ ಎರಡು ವರ್ಷಗಳಿಂದ ಜಿಲ್ಲೆಯ 5000 ಕೋಟಿ ರು. ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಮತ್ತು ಜಿಲ್ಲಾಡಳಿತ ಸಂಕೀರ್ಣ ಮಾಡಿದ್ದೂ ನಮ್ಮ ಸರ್ಕಾರದಲ್ಲೇ. ಕಳೆದ ವರ್ಷಕ್ಕಿಂತ ಈ ವರ್ಷದ ಬಜೆಟ್ 28 ಸಾವಿರ ಕೋಟಿ ರು.ಗಿಂತಲೂ ಹೆಚ್ಚು ಹೇಗಾಗುತ್ತಿತ್ತು?. ಬಂಡವಾಳ ವೆಚ್ಚಕ್ಕೆ ಈ ಬಾರಿ 80 ಸಾವಿರ ಕೋಟಿ ರು. ಇಡಲಾಗಿದೆ ಎಂದು ಹೇಳಿದರು.
ಕನ್ನಡಕದ ಕಲೆ ತೊಳೆಯಿರಿ: ಬಿಜೆಪಿಯವರ ಕನ್ನಡಕದ ಗಾಜುಗಳು ಕಲೆಯಿಂದ ಕೂಡಿವೆ. ಹಾಗಾಗಿ ಬಿಜೆಪಿ ಪರಿವಾರದವರು ಮೊದಲು ತಮ್ಮ ಕನ್ನಡದ ಕಲೆ ತೊಳೆದುಕೊಂಡರೆ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕಾಣುತ್ತವೆ ಎಂದು ತಿರುಗೇಟು ನೀಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಕಂದಾಯ ಸಚಿವ ಕೃಷ್ಣಬೈರೇಗೌಡ, ವಸತಿ ಸಚಿವ ಜಮೀರ್ ಅಹಮದ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಶರತ್ ಬಚ್ಚೇಗೌಡ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಕೆರೆ ಭರ್ತಿಗೆ ಟೆಂಡರ್ ಕರೆಯಲು ಮನವಿ
ಬೆಂಗಳೂರು ಗ್ರಾಮಾಂತರ ಉಸ್ತುವಾರಿಯೂ ಆದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಎತ್ತಿನಹೊಳೆ ಯೋಜನೆಯ ಮೂಲಕ ಕುಡಿಯುವ ನೀರು ಹಂಚಿಕೆ ಮಾಡಿದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಕಟ್ಟಕಡೆಯ ಗ್ರಾಮಕ್ಕೂ ನೀರು ಸಿಗುವಂತೆ ಮಾಡಬೇಕೆಂದು ಅವರು ಮನವಿ ಮಾಡಿದರು.
ಜಿಲ್ಲೆಯಲ್ಲಿ 150 ಕೋಟಿ ರು. ಸಿಎಸ್‌ಆರ್ ಹಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಉದ್ಯೋಗ ಮೇಳಗಳ ಮೂಲಕ ಜಿಲ್ಲೆಯ 2.5 ಲಕ್ಷ ಮಂದಿಗೆ ಉದ್ಯೋಗ ಕೊಡಿಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ 5 ಸಾವಿರ ಮಂದಿಗೆ ಕೆಲಸ ಕೊಡಿಸಲಾಗಿದೆ ಎಂದು ಸಚಿವರು ವಿವರಿಸಿದರು. -ಕೋಟ್-
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುವ ಮೂಲಕ ನುಡಿದಂತೆ ನಡೆಯುತ್ತಿದೆ. ಜೊತೆಗೆ ಸಾವಿರಾರು ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನೂ ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿದೆ.
-ಕೃಷ್ಣ ಬೈರೇಗೌಡ, ಕಂದಾಯ ಸಚಿವ
ಜಿಲ್ಲೆಯ ವಸತಿ ರಹಿತ ಬಡವರಿಗಾಗಿ 2500 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಅಲ್ಪಸಂಖ್ಯಾತರ ಮದುವೆ-ಶುಭ ಸಮಾರಂಭಗಳ ಅನುಕೂಲಕ್ಕಾಗಿ 4 ಶಾದಿ ಮಹಲ್ ನಿರ್ಮಾನಕ್ಕೆ ಮಂಜೂರು ನೀಡಿದೆ.
-ಜಮೀರ್ ಅಹಮದ್ ಖಾನ್, ವಸತಿ ಸಚಿವ