ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ: ಬಸವರಾಜ ರಾಯರಡ್ಡಿ

| Published : Jul 13 2024, 01:34 AM IST / Updated: Jul 13 2024, 01:35 AM IST

ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ: ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಕಳೆದ ಸರ್ಕಾರಕ್ಕಿಂತ ₹4 ಸಾವಿರ ಕೋಟಿ ಹೆಚ್ಚಿಗೆ ಕಾಂಗ್ರೆಸ್ ಸರ್ಕಾರ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕುಕನೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಕಳೆದ ಸರ್ಕಾರಕ್ಕಿಂತ ₹4 ಸಾವಿರ ಕೋಟಿ ಹೆಚ್ಚಿಗೆ ಕಾಂಗ್ರೆಸ್ ಸರ್ಕಾರ ಖರ್ಚು ಮಾಡುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಅನುದಾನ ಗ್ಯಾರಂಟಿ ಯೋಜನೆಗೆ ಮೀಸಲಾಗಿದೆ. ಆಂತರಿಕ ಆರ್ಥಿಕ ಸ್ಥಿತಿ ಕಷ್ಟಕರವಾಗಿದೆ ಎಂದು ಅವರು ಗುರುವಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸ್ಪಷ್ಟನೆ ನೀಡಿದ ಅವರು, ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗೆ ₹60 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಈ ಮಧ್ಯೆಯೂ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದಿದ್ದೇನೆ ಎಂದು ಹೇಳಿದ್ದೆ. ಆದರೆ ಅದನ್ನು ತಿರುಚಿ ರಾಜ್ಯದಲ್ಲಿ ಪೂರ್ಣ ಅನುದಾನ ಗ್ಯಾರಂಟಿಗೆ ಸೀಮಿತ ಎಂಬ ಹೇಳಿಕೆ ಪ್ರಕಟವಾಗಿದೆ ಎಂದು ಹೇಳಿದರು.

ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಂಡವಾಳ ವೆಚ್ಚ ₹56 ಸಾವಿರ ಕೋಟಿ, ಅದೇ ಬಿಜೆಪಿ ಸರ್ಕಾರದ ಬಂಡವಾಳ ವೆಚ್ಚ ₹52 ಸಾವಿರ ಕೋಟಿ ಇತ್ತು. ಕಳೆದ ಬಿಜೆಪಿ ಸರ್ಕಾರಕ್ಕಿಂತ ಈಗಿನ ಸರ್ಕಾರದ ಬಂಡವಾಳ ವೆಚ್ಚ ₹4 ಸಾವಿರ ಕೋಟಿ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ವೆಚ್ಚ ಸಹ ಹೆಚ್ಚಿದೆ. ರಾಜ್ಯದಲ್ಲಿ ಯಾವುದೇ ಹಣದ ಕಠಿಣತೆ ಇಲ್ಲ. ನಿವೃತ್ತಿ ವೇತನಕ್ಕೆ ₹11 ಸಾವಿರ ಕೋಟಿ, ರೈತರ ವಿದ್ಯುತ್ ಪಂಪ್‌ಸೆಟ್‌ಗೆ ₹18 ಸಾವಿರ ಕೋಟಿ, ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ, ಶೂಗೆ ₹15 ಸಾವಿರ ಕೋಟಿ, ಗ್ಯಾರಂಟಿ ಯೋಜನೆಗೆ ₹60 ಸಾವಿರ ಕೋಟಿ ಹಣ ನೀಡಿದ್ದೇವೆ. ಇದರ ಜತೆಗೆ ಬೇರೆ ಬೇರೆ ಯೋಜನೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಅಲ್ಲದೆ ರಾಜ್ಯದ ತೆರಿಗೆ ಸಂಗ್ರಹ ಸಹ ಕಳೆದ ವರ್ಷಕ್ಕಿಂತ ಶೇ. 14ರಷ್ಟು ಹೆಚ್ಚಿದೆ. ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆ ಇಲ್ಲ ಎಂದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ₹5 ಸಾವಿರ ಕೋಟಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನಮ್ಮ ಸರ್ಕಾರ ₹5 ಸಾವಿರ ಕೋಟಿ ಹಣ ನೀಡಿದೆ. ಕಳೆದ ಬಿಜೆಪಿ ಸರ್ಕಾರ ಬರೀ ₹3 ಸಾವಿರ ಕೋಟಿ ನೀಡಿತ್ತು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಕ್ಷೇತ್ರದಲ್ಲಿ 6 ಪ್ರೌಢಶಾಲೆ, ಮೂರು ಪಿಯುಸಿ ಕಾಲೇಜುಗಳನ್ನು ಪ್ರಾರಂಭಿಸಿ ಸಂಬಳ, ಪೀಠೋಪಕರಣಕ್ಕೆ, ಕಟ್ಟಡಕ್ಕೆ ಹಣ ಮೀಸಲಿಟ್ಟಿದ್ದೇವೆ ಎಂದರು.