ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇಲ್ಲ. ಸಮರ್ಥ ಶಿಕ್ಷಕರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ಉತ್ತಮ ಸಾಧನೆ ಮಾಡಿದ್ದಾರೆ. ಆದ್ದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮರುಳಾಗದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂದು ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇಲ್ಲ. ಸಮರ್ಥ ಶಿಕ್ಷಕರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ಉತ್ತಮ ಸಾಧನೆ ಮಾಡಿದ್ದಾರೆ. ಆದ್ದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮರುಳಾಗದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂದು ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್ ಹೇಳಿದರು. ಅವರು ಶಿರಾ ರಂಗನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ದಾನಿಗಳಿಂದ ನಿರ್ಮಾಣವಾಗಿರುವ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಕಲಾ ಕುಟೀರವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಮ್ಮ ಶಾಲೆಯನ್ನು ಮರೆಯದೆ, ತಮ್ಮಿಂದಾಗುವ ಸಹಕಾರ ಶಾಲೆಗಳ ಅಭಿವೃದ್ಧಿಗೆ ನೀಡುವುದು ಉತ್ತಮ ಬೆಳವಣಿಗೆ ಎಂದ ಅವರು ನಗರಸಭೆಯಿಂದ ರಂಗನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಒಂದು ಕೊಠಡಿಯನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಅವರು ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ. ಎಲ್ಲಾ ಸಂಪಾದನೆಗಿಂತ ಶಿಕ್ಷಣ ಸಂಪಾದಿಸಬೇಕು. ಆ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಬದುಕುವ ಸಾಮರ್ಥ್ಯ ಬರುತ್ತದೆ. ಶಿರಾದಲ್ಲಿ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದ ಅವರು ರಂಗನಾಥ ನಗರ ಶಾಲೆಯು ನಗರದ ಕೇಂದ್ರ ಭಾಗದಲ್ಲಿದ್ದು, ಉತ್ತಮ ಶಾಲೆಯಾಗಿದೆ. ಈ ಶಾಲೆಯನ್ನು ಹಿರಿಯ ಪ್ರಾಥಮಿಕ ಪಾಠಶಾಲೆಯಾಗಿ ಉನ್ನತೀಕರಿಸಲು ಪತ್ರ ಬರೆಯಲಾಗುವುದು ಹಾಗೂ ಇಂಗ್ಲಿಷ್ ಮಾಧ್ಯಮ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ ರಂಗನಾಥ ನಗರದ ಶಾಲೆಯ ಕಲಾ ಕುಟೀರಕ್ಕೆ ಸಾವಿತ್ರಿ ಬಾಯಿ ಫುಲೆ ಅವರ ಹೆಸರಿಟ್ಟಿರುವುದು ಶ್ಲಾಘನೀಯ. ಈ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಲು ಸಾವಿತ್ರ ಬಾಯಿ ಫುಲೆ ಅವರೇ ಕಾರಣ. ವಿದ್ಯಾರ್ಥಿಗಳು ಸಾವಿತ್ರಿ ಬಾಯಿ ಫುಲೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಗಿರಿಜ ವಿಜಯಕುಮಾರ್, ಬಿ.ಆರ್.ಸಿ. ರಂಗಪ್ಪ, ಇಸಿಓ ಮಂಜಪ್ಪ, ಸಿ.ಆರ್.ಪಿ. ಕರಿಯಣ್ಣ, ಆನಂದ್ ಕುಮಾರ್ ಗುರೂಜಿ, ಮುಖ್ಯ ಶಿಕ್ಷಕ ಬಿ.ಟಿ.ರಂಗನಾಥ್, ಶಿಕ್ಷಕರಾದ ಸುಮಾ ದೀಪಕ್, ಗೀತಾ ಸುರೇಶ್, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಮುಖಂಡರಾದ ವಿಜಯ್ ಕುಮಾರ್, ಕಟ್ಟಡ ಕಾರ್ಮಿಕರ ಸಂಘದ ಖಜಾಂಚಿ ಆರ್.ಕಂಬಣ್ಣ, ರವಿಕುಮಾರ್, ರೂಪೇಶ್, ವಿ.ಎಸ್.ಚಲಪತಿ ಸೇರಿದಂತೆ ಹಳೇ ವಿದ್ಯಾರ್ಥಿಗಳು ಹಾಜರಿದ್ದರು.