ಸಾರಾಂಶ
- ಜೂನ್ 20ರವರೆಗೆ ಭತ್ತ ನೋಂದಣಿ, ಜುಲೈ ಅಂತ್ಯದವರೆಗೆ ಖರೀದಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಮುಂಗಾರು ಮಳೆ ಜಿಲ್ಲಾದ್ಯಂತ ಉತ್ತಮವಾಗಿ ಶುರುವಾಗಿದ್ದು, ಬಿತ್ತನೆ ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಹಿನ್ನೆಲೆ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ನಮ್ಮ ಜಿಲ್ಲೆಗೆ ಕಳೆದ ವರ್ಷದ ಬೇಡಿಕೆಯಷ್ಟು ದಾಸ್ತಾನು ಇದೆ ಎಂದರು.ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಜಿಲ್ಲೆಯಲ್ಲಿ ಸಾಕಷ್ಟು ದಾಸ್ತಾನಿದೆ. ಯಾವುದೇ ಭಯ, ಆತಂಕ ಬೇಡ. ಬಿತ್ತನೆ ಬೀಜ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಮಾರಾಟ ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ನಿಶ್ಚಿತ. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಈ ಬಗ್ಗೆ ನಿಗಾ ವಹಿಸಿದ್ದು, ಕೃತಕ ಅಭಾವ ಸೃಷ್ಟಿಸುವವರು, ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ತಪ್ಪಿದ್ದಲ್ಲ ಎಂದರು.
ರೈತರು ಡಿಎಪಿ ಗೊಬ್ಬರ ಬದಲಾಗಿ ಗಂಧಕಯುಕ್ತ ಗೊಬ್ಬರವನ್ನು ಬಳಸಿದರೆ, ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ರೈತರು ಸಹ ಉತ್ತಮ ಗುಣಮಟ್ಟದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲೇ ಖರೀದಿಸಬೇಕು. ಉತ್ಪನ್ನಗಳನ್ನು ಖರೀದಿಸಿದ ರಸೀದಿಗಳನ್ನು ರೈತರು ಬೆಳೆಯನ್ನು ಕಟಾವು ಮಾಡುವವರೆಗೂ ಜಾಗೃತವಾಗಿ ಇಟ್ಟುಕೊಂಡಿರಬೇಕು. ಬೀಜ, ಗೊಬ್ಬರದಲ್ಲಿ ಲೋಪದೋಷ ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಂಡು, ಸೂಕ್ತ ಪರಿಹಾರ ಕಂಡುಕೊಳ್ಳಲು ರಸೀದಿ ಅತ್ಯಗತ್ಯ ಎಂದು ತಿಳಿಸಿದರು.ರೈತರು ಸಹ ರೈತ ಸಂಪರ್ಕ ಕೇಂದ್ರ, ಅಧಿಕೃತವಾದ, ಪ್ರಮಾಣೀಕೃತ ಬಿತ್ತನೆ ಬೀಜ, ಗೊಬ್ಬರವನ್ನೇ ಖರೀದಿಸಬೇಕು. ಮಳೆಗಾಲದಲ್ಲಿ ರೈತರಿಗೆ ಬೇಕಾದ ಬೀಜ, ಗೊಬ್ಬರಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಭತ್ತದ ಬೆಲೆ ಕುಸಿದಿದ್ದು, ಜಿಲ್ಲೆಯ 5 ಭತ್ತ ಖರೀದಿ ಕೇಂದ್ರದಲ್ಲಿ ಕೇವಲ 4 ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಹಿಂಗಾರು ವಿಳಂಬ ಹಿನ್ನೆಲೆಯಲ್ಲಿ ಒಂದಿಷ್ಟು ಸಮಸ್ಯೆಯಾಗಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನವರು ಕೃಷಿ ಸಚಿವ ಚಲುವರಾಯ ಸ್ವಾಮಿ ಜೊತೆಗೆ ಚರ್ಚಿಸಿ, ಸಮಸ್ಯೆ ಪರಿಹರಿಸಿದ್ದಾರೆ. ಜೂ.20ರವೆಗೆ ನೋಂದಣಿಗೆ ಅವಕಾಶವಿದ್ದು, ಜುಲೈ ಅಂತ್ಯದವರೆಗೆ ಖರೀದಿ ಕೇಂದ್ರದಲ್ಲಿ ಖರೀದಿಸಲಾಗುವುದು. ರೈತರು ಎಫ್‌ಎಕ್ಯೂ ಮಾನದಂಡದಂತೆ ಭತ್ತ ತಂದು ಮಾರಾಟ ಮಾಡಬಹುದು ಎಂದು ಹೇಳಿದರು.
- - -(ಬಾಕ್ಸ್) * ಜೂನ್ 5ರಿಂದ ಡಿಸಿ ಕಚೇರಿ ಪ್ಲಾಸ್ಟಿಕ್ ಮುಕ್ತ
ಜೂನ್ 5ರಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಪ್ಲಾಸ್ಟಿಕ್ ಮುಕ್ತವಾಗಲಿದೆ. ಇಡೀ ಕಚೇರಿಯನ್ನು ಪ್ಲಾಸ್ಟಿಕ್ ಮುಕ್ತ ಕಚೇರಿ ಎಂಬುದಾಗಿ ಘೋಷಣೆ ಮಾಡಲಿದ್ದೇವೆ. ಜಿಲ್ಲೆಯ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮತ್ತಿತರೆ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ನಗರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಅಭಿಯಾನ ಕೈಗೊಂಡಿದ್ದೇವೆ. ಅದನ್ನು ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆ ವೈಜ್ಞಾನಿಕವಾಗಿ ವಿಲೇ ಮಾಡಲಿದೆ ಎಂದು ವಿವರಿಸಿದರು.
ಅಂಗಡಿ ಮುಂಗಟ್ಟುಗಳು, ಬಟ್ಟೆ ಅಂಗಡಿಗಳು ಮತ್ತಿತರೆ ಕಡೆ ಪ್ಲಾಸ್ಟಿಕ್ ಮಾರಾಟ ಅಥವಾ ಬಳಕೆ ಕಂಡು ಬಂದರೆ ಅಧಿಕ ತಂಡ ವಿಧಿಸಲಾಗುವುದು. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಒತ್ತಾಸೆಯಂತೆ ಜಿಲ್ಲಾಡಳಿತ ಭವನವನ್ನು ಪ್ಲಾಸ್ಟಿಕ್ ಮುಕ್ತ ಕಚೇರಿ ಮಾಡುವ ಸಂಕಲ್ಪ ಮಾಡಿದೆ. ಇದಕ್ಕಾಗಿ ಕಚೇರಿ ಅಧಿಕಾರಿ, ಸಿಬ್ಬಂದಿ, ಕಚೇರಿಗೆ ಬಂದು ಹೋಗುವ ಸಾರ್ವಜನಿಕರೂ ಅಂತಹ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.ನಗರ ವ್ಯಾಪ್ತಿಯ ಕಾಲುವೆ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿದ್ದರಿಂದ ಎಲ್ಲಿಯೂ ಅಷ್ಟೊಂದು ನೀರು ಸಮಸ್ಯೆ ಕಾಡುತ್ತಿಲ್ಲ. ಹರಿಹರ, ಹೊನ್ನಾಳಿಯಲ್ಲಿ ತ್ಯಾಜ್ಯ ನೀರು ತುಂಗಭದ್ರಾ ನದಿಗೆ ಸೇರದಂತೆ ತಡೆಗೆ ಸೂಚಿಸಲಾಗಿದೆ. ಮಲೇಬೆನ್ನೂರು, ಚನ್ನಗಿರಿ, ಹರಿಹರ, ಹೊನ್ನಾಳಿಯಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದೇವೆ. ಹರಿಹರದ ಬೆಂಕಿ ನಗರ, ಗುತ್ತೂರು ಭಾಗದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಸೂಚನೆಯಂತೆ ಸ್ವಚ್ಛ ಮಾಡಿಸಿದ್ದೇವೆ ಎಂದು ಡಿಸಿ ತಿಳಿಸಿದರು.
- - --23ಕೆಡಿವಿಜಿ7, 8:
ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.