ಚಿಕ್ಕಮಗಳೂರುಯಶಸ್ಸು ಗಳಿಸುವುದಕ್ಕೆ ಯಾವುದೇ ಶಾರ್ಟ್ ಕಟ್ ಇಲ್ಲ. ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾತ್ರ ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ಅರಣ್ಯ ಇಲಾಖೆ ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರಸಾಗರ್ ಹೇಳಿದರು.
ಐಟಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಯಶಸ್ಸು ಗಳಿಸುವುದಕ್ಕೆ ಯಾವುದೇ ಶಾರ್ಟ್ ಕಟ್ ಇಲ್ಲ. ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾತ್ರ ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ಅರಣ್ಯ ಇಲಾಖೆ ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರಸಾಗರ್ ಹೇಳಿದರು.
ನಗರದ ಎಐಟಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಸ್ಪರ್ಧೆ ಎದುರಿಸಬೇಕಾದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಪದ್ಧತಿಯ ಅಧ್ಯಯನ ಹಾಗೂ ಕಲಿಕಾ ಕ್ರಮದಿಂದ ಹೊರ ಬರಬೇಕಿದೆ. ಸಾಕಷ್ಟು ಅವಕಾಶ ವಿದ್ದು, ಹುಡುಕಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಸ್ಪಾರ್ಟ್ ಅಪ್ ಆರಂಭಿಸುವುದು, ಹೊಸ ಹೊಸ ಆಲೋಚನೆ, ಸಂಶೋಧನೆ, ಆವಿಷ್ಕಾರದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಿದ್ದು, ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ಮಾತ್ರ ಯಶಸ್ವಿಯಾಗ ಬಹುದು ಎಂದು ಹೇಳಿದರು.ವಿದ್ಯಾರ್ಥಿಗಳು ಮೊದಲು ಪ್ರಶ್ನಿಸುವ ಮೂಲಕ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಆಗ ಮಾತ್ರ ಇರುವ ಸಮಸ್ಯೆ ಗಳಿಗೆ ಪರಿಹಾರ ಕಂಡಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಜೈವಿಕ ಇಂಧನ ಪರಿಸರ ಸ್ನೇಹಿ ಇಂಧನಗಳಾಗಿವೆ. ಅವುಗಳನ್ನು ಕೃಷಿ ತ್ಯಾಜ್ಯ, ಮರಗಳು, ಬೆಳೆ ಗಳು ಅಥವಾ ಹುಲ್ಲಿ ನಂಥಹ ಜೈವಿಕ ವಸ್ತುಗಳನ್ನು ಬಳಸಿ ಉತ್ಪಾದಿಸುವುದರಿಂದ ಪ್ರಕೃತಿ ಮೇಲೆ ಯಾವುದೇ ಅಡ್ಡಪರಿಣಾಮವಾಗದೇ ಮನುಷ್ಯನ ಆರೋಗ್ಯಕ್ಕೂ ಪೂರಕವಾಗಲಿದೆ ಎಂದು ಹೇಳಿದರು.ಜೈವಿಕ ಇಂಧನಗಳ ನೈಸರ್ಗಿಕ ಪ್ರಯೋಜನ ಮತ್ತು ಸುಸ್ಥಿತಿ ಇಂಧನವನ್ನು ಉತ್ತೇಜಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಹೋಲಿಸಿದರೆ ಜೈವಿಕ ಇಂಧನ ಪರಿಸರಕ್ಕೆ ಪೂರಕವಾಗಿವೆ. ಅಲ್ಲದೇ ಹವಮಾನ ಬದಲಾವಣೆ ಕಡಿಮೆ ಮಾಡುವ ಸುಸ್ಥಿರ ಇಂಧನವಾಗಿದೆ ಎಂದು ತಿಳಿಸಿದರು.ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಗೌತಮ್ ಮಾತನಾಡಿ, ನೈಸರ್ಗಿಕ ಇಂಧನ ಬಳಕೆ ಮಾಡಿಕೊಳ್ಳುವ ಮೂಲಕ ಭೂಮಿಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಎಂಜಿನಿಯರ್‌ಗಳು ಚಿಂತನೆ ನಡೆಸಬೇಕು ಎಂದರು.
ಕಾಲೇಜು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಗ್ರಂಥಾಲಯಗಳಲ್ಲಿ ಪುಸ್ತಕ, ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಬಹುತೇಕ ವಿದ್ಯಾರ್ಥಿಗಳು ತಾಂತ್ರಿಕ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ತೆಗೆದುಕೊಳ್ಳುತ್ತಿಲ್ಲ. ಆ ಬಗ್ಗೆ ಅವರಿಗೆ ಅರಿವು ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ಮೊದಲು ಕಂಫರ್ಟ್ ಜೋನ್‌ನಿಂದ ಹೊರಗೆ ಬರಬೇಕು. ಸಂಶೋಧನೆ, ಆವಿಷ್ಕಾರಗಳಿಗೆ ಭಯ ಪಡ ಬಾರದು. ಬದಲಾವಣೆ ಆಗಬೇಕಾದರೆ, ಆ ನಿಟ್ಟಿನಲ್ಲಿ ಇಡುವ ಮೊದಲ ಹೆಜ್ಜೆ ಅತ್ಯಂತ ಮಹತ್ವದ್ದಾಗಿದೆ ಎಂದರು.ಈ ವೇಳೆ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಕಿರಣ್, ಮೆಕ್ಯಾನಿಕಲ್ ವಿಭಾಗದ ಪ್ರಭಾರಿ ಮುಖ್ಯಸ್ಥ ಡಾ. ಅಭಿಜಿತ್ ವೈದ್ಯ, ರೋಟಿಕ್ ವಿಭಾಗದ ಪ್ರಭಾರಿ ಮುಖ್ಯಸ್ಥ ಡಾ. ಎಸ್.ಎಸ್.ಮನು ಉಪಸ್ಥಿತರಿದ್ದರು.