ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಂದಲೇ ರಾಜಕೀಯದಲ್ಲಿ ಬೆಳವಣಿಗೆ ಕಂಡು ಈಗ ಗೌಡರನ್ನೇ ಟೀಕಿಸುತ್ತಿರುವ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಕೃತಜ್ಞತೆ ಎಂಬುದೇ ಇಲ್ಲ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಟೀಕಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇವೇಗೌಡರಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ, ಸಹಾನುಭೂತಿ ಇರುವುದರಿಂದಲೇ ಅವರು ಭಾವನಾತ್ಮಕವಾಗಿ ಭಾಷಣ ಮಾಡುತ್ತಾರೆ. ಅದರಲ್ಲೇನು ತಪ್ಪು? ದೇವೇಗೌಡರು ಏನೆಂಬುದು ಇಡೀ ದೇಶಕ್ಕೇ ಗೊತ್ತಿದೆ. ಅವರಿಂದಲೇ ರಾಜಕೀಯವಾಗಿ ಎತ್ತರಕ್ಕೇರಿ ಅವರಿಗೇ ದ್ರೋಹ ಬಗೆದು ಪಕ್ಷಾಂತರ ಮಾಡಿ ಇಂದು ಅವರ ವಿರುದ್ಧವೇ ಮಾತನಾಡುತ್ತಿರುವ ಸಚಿವರು ಒಮ್ಮೆ ರಾಜಕೀಯವಾಗಿ ಬೆಳೆದುಬಂದ ಹಾದಿಯನ್ನು ಒಮ್ಮೆ ತಿರುಗಿ ನೋಡಲಿ ಎಂದು ಸೂಕ್ಷ್ಮವಾಗಿ ಹೇಳಿದರು.
ಕುಮಾರಸ್ವಾಮಿ ಅವರು ಸ್ಟೀಲ್ ಕಂಪನಿಗಳಿಂದ ವಸೂಲಿಗೆ ಇಳಿದಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಕುಮಾರಸ್ವಾಮಿಗೆ ದುಡ್ಡು ಮಾಡುವ ಹಪಾಹಪಿತನವಿದ್ದಿದ್ದರೆ ಲಾಟರಿ, ಮದ್ಯ ನಿಷೇಧ ಮಾಡುತ್ತಿರಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಮೆಚ್ಚುಗೆಯ ಆಡಳಿತ ನೀಡಿದ್ದಾರೆ. ನಿಮ್ಮ ಹಾಗೆ ಚುನಾವಣೆಗಳಲ್ಲಿ ಹೊಸ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಆರ್ಥಿಕ ಬುನಾದಿ ಹಾಕಿಕೊಂಡವರಲ್ಲ ಎಂದು ಕುಟುಕಿದರು.ಲೀಡರ್ ಆಗುವೆನೆಂಬ ಭ್ರಮೆ ಬೇಡ:
ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದರೆ ದೊಡ್ಡ ಲೀಡರ್ ಆಗುತ್ತೇನೆ ಎಂಬುದನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಬೇರೆಯವರ ಬಗ್ಗೆ ಮಾತನಾಡುವಾಗ ಚಲುವರಾಯಸ್ವಾಮಿ ಸ್ವಲ್ಪ ಯೋಚನೆ ಮಾಡಿ ಮಾತನಾಡೋದು ಒಳ್ಳೆಯದು. ಹಿಂದೊಮ್ಮೆ ಹಣ ವಸೂಲಿ ಬಗ್ಗೆ ನಿಮ್ಮ ಇಲಾಖೆ ಅಧಿಕಾರಿಗಳೇ ರಾಜ್ಯಪಾಲರಿಗೆ ನಿಮ್ಮ ವಿರುದ್ಧ ಪತ್ರ ಬರೆದಿದ್ದನ್ನು ಮರೆತಿರಾ? ಇವೆಲ್ಲವನ್ನೂ ಬಿಟ್ಟು ಯೋಚಿಸಿ ಮಾತನಾಡುವುದನ್ನು ಸಚಿವರು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಚಲುವರಾಯಸ್ವಾಮಿ ಮೇಲೆ ಹಲ್ಲೆಯಾಗಿರುವುದನ್ನು ಮಾಧ್ಯಮದಲ್ಲಿ ಗಮನಿಸಿದೆವು. ಕೀಲಾರ ಜಯರಾಮ್ ಒಳ್ಳೆಯ ವ್ಯಕ್ತಿ. ಆ ಘಟನೆ ಹೇಗಾಯಿತು, ಏಕಾಯಿತು ಎಂಬುದು ಗೊತ್ತಿಲ್ಲ. ನಾನೂ ಅದೇ ಸ್ಥಳದಲ್ಲಿದ್ದೆನಾದರೂ ಪಕ್ಕದ ಕೊಠಡಿಯಲ್ಲಿ ಏನು ನಡೆಯಿತು ಎಂಬುದು ಗೊತ್ತಾಗಲಿಲ್ಲ. ನಾನು ಅಲ್ಲಿಗೆ ಹೋಗುವುದರೊಳಗೆ ಎಲ್ಲರೂ ಶಾಂತವಾಗಿದ್ದರು ಎಂದಷ್ಟೇ ಪುಟ್ಟರಾಜು ಹೇಳಿದರು.
ಕೀಲಾರ ಜಯರಾಂ ಆಣೆ ಮಾಡಲಿ:ಕುಮಾರಸ್ವಾಮಿ ಅವರಿಂದ ಕೀಲಾರ ಜಯರಾಮ್‌ಗೆ ಅನ್ಯಾಯ ಆಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ವಿಚಾರವಾಗಿ ಕೀಲಾರ ಜಯರಾಮ್ ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಿ ಹೇಳಲಿ. ಕುಮಾರಸ್ವಾಮಿಯಿಂದ ಅನ್ಯಾಯ ಆಗಿದೆಯಾ, ಚಲುವರಾಯಸ್ವಾಮಿ ಮೇಲೆ ಹಲ್ಲೆ ಮಾಡಿದಿರಾ ಎಂಬುದನ್ನು ಚಾಮುಂಡಿ ಬೆಟ್ಟದಲ್ಲೇ ತೀರ್ಮಾನ ಮಾಡೋಣ ಎಂದು ಆಹ್ವಾನ ನೀಡಿದರು.
ನಿಖಿಲ್ ಗೆಲವು ನಿಶ್ಚಿತ:ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಗೆಲುವು ನಿಶ್ಚಿತ. ಯೋಗೇಶ್ವರ್ ಪಕ್ಷ ಬದಲಿಸಿದ್ದು, ನಿಖಿಲ್ ಗೆಲುವಿಗೆ ವರದಾನವಾಗಿದೆ. ಜಿಲ್ಲೆಯ ಸುಮಾರು ೫ ಸಾವಿರ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಎರಡು ಚುನಾವಣೆಯಲ್ಲಿ ನಿಖಿಲ್ ಸೋತಿರುವುದರಿಂದ ಅವರನ್ನೇ ಗೆಲ್ಲಿಸಬೇಕೆಂದು ಚನ್ನಪಟ್ಟಣದ ಜನರು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.
ಸಚಿವರು ತಾಳ್ಮೆ ಇಟ್ಟುಕೊಳ್ಳಲಿ: ಕೆಟಿಎಸ್ಸಚಿವ ಎನ್. ಚಲುವರಾಯಸ್ವಾಮಿ ಅವರು ತಾಳ್ಮೆ ಇಟ್ಟುಕೊಳ್ಳಬೇಕು. ಯಾರಾದರೂ ಬಂದು ತಮ್ಮ ಬಳಿ ಸಮಸ್ಯೆಗಳನ್ನು ಹೇಳಿಕೊಂಡಾಗ ಕೇಳಬೇಕು. ಸಾಧ್ಯವಾದರೆ ಪರಿಹರಿಸಿಕೊಡಬೇಕು. ತಾಳ್ಮೆಯನ್ನು ಕಳೆದುಕೊಂಡರೆ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹೇಳಿದರು.
ದೇವೇಗೌಡರು ದೇಶಕಂಡ ಅಪರೂಪದ ರಾಜಕಾರಣಿ, ಅದ್ಭುತ ಹೋರಾಟಗಾರ. ಅಂತಹವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಅವರ ವಯಸ್ಸಿಗೆ, ಹಿರಿತನಕ್ಕೆ ಗೌರವಕೊಟ್ಟು ಮಾತನಾಡಬೇಕು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಅಮರಾವತಿ ಚಂದ್ರಶೇಖರ್, ತಾಯೂರು ಪ್ರಕಾಶ್, ಯೋಗೇಶ್ ಇದ್ದರು.