ಸಮಾಜದಲ್ಲಿನ ಯಾವ ಕಾಯಕಗಳು ಮೇಲು-ಕೀಳು ಎಂಬುದಿಲ್ಲ. ಮಾಡುವ ಕಾಯಕದಿಂದ ಕೀಳಿರಿಮೆ ಕಾಣುತ್ತಿದ್ದರೆ ಅದೇ ವೃತ್ತಿಯ ಕಾಯಕವನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿ, ಗೌರವದಿಂದ ಕಾಣುವಂತಹ ವಾತಾವರಣ ನಿರ್ಮಾಣ ಮಾಡಿದವರು ವಚನಕಾರರು ಎಂದು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ನಂದಿನಿ ಮಲ್ಲಿಕಾರ್ಜುನ್ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಸಮಾಜದಲ್ಲಿನ ಯಾವ ಕಾಯಕಗಳು ಮೇಲು-ಕೀಳು ಎಂಬುದಿಲ್ಲ. ಮಾಡುವ ಕಾಯಕದಿಂದ ಕೀಳಿರಿಮೆ ಕಾಣುತ್ತಿದ್ದರೆ ಅದೇ ವೃತ್ತಿಯ ಕಾಯಕವನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿ, ಗೌರವದಿಂದ ಕಾಣುವಂತಹ ವಾತಾವರಣ ನಿರ್ಮಾಣ ಮಾಡಿದವರು ವಚನಕಾರರು ಎಂದು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ನಂದಿನಿ ಮಲ್ಲಿಕಾರ್ಜುನ್ ಹೇಳಿದರು.

ನಗರದ ಹಾಲಪ್ಪ ವೃತ್ತದ ಭದ್ರಾ ಪ್ರೌಢಶಾಲೆಯಲ್ಲಿ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ೬೬೮ನೇ ವಚನ ಮಂಟಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯೆ ಎಂಬುದು ಕೇವಲ ಮೇಲ್ವರ್ಗದವರ ಸ್ವತ್ತು ಎಂಬಂಥ ಕಾಲಘಟ್ಟದಲ್ಲಿ ಅನುಭವ ಮಂಟಪ ರೂಪಿಸುವ ಮೂಲಕ ಸಮಾನತೆ ಪ್ರತಿಪಾದಿಸಿ ವಿದ್ಯೆ ಎಲ್ಲರಿಗೂ ದೊರೆಯುವಂತೆ ಮಾಡಿದರು. ಅಲ್ಲದೇ, ಸಮಾಜದಲ್ಲಿನ ಅಸ್ಪೃಶ್ಯತೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಉಂಟು ಮಾಡಿ ನೊಂದವರ ಧ್ವನಿಯಾದರು ಎಂದರು.

ಬಸವಾದಿ ಶಿವಶರಣರು ತಮ್ಮ ಜೀವನದ ಅನುಭವಗಳನ್ನು, ಮೂಢನಂಬಿಕೆಗಳನ್ನು, ಅವಮಾನದ ಪ್ರಸಂಗಗಗಳನ್ನು, ಅನುಭವದ ಯಾತನೆಗಳನ್ನು ಮತ್ತು ಉದ್ಭವಿಸಿದ ಸಮಸ್ಯೆಗಳ ಅನುಭವಗಳ ಆಧಾರದ ಮೇಲೆ ವಚನ ಸಾಹಿತ್ಯಗಳನ್ನು ರಚಿಸಿ ಸಮಾಜಕ್ಕೆ ನೀಡಿ, ಅವುಗಳು ಮುಂದಿನ ತಲೆಮಾರಿನವರು ಅನುಭವಿಸಬಾರದೆಂಬುದನ್ನು ತಿಳಿಸಿದ್ದರು ಎಂದರು.

ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಅದರದೇ ಆದ ಪರಿಹಾರ ಇದ್ದೇ ಇರುತ್ತದೆ. ಅದೇ ರೀತಿ ಸಮಾಜದಲ್ಲಿನ ಸಮಸ್ಯೆಗಳಿಗೆ ಬಸವಾದಿ ಶಿವಶರಣರ ವಚನ ಸಾಹಿತ್ಯಗಳಲ್ಲಿ ಸೂಕ್ತವಾದ ಪರಿಹಾರವಿದೆ ಎಂದರು.

ಕದಳಿ ವೇದಿಕೆ ಅಧ್ಯಕ್ಷೆ ಗಂಗಾ ಕುಬ್ಸದ್ ಮಾತನಾಡಿ, ೧೨ನೇ ಶತಮಾನದ ಅನುಭವ ಮಂಟಪದಲ್ಲಿದ್ದ ಅಲ್ಲಮಪ್ರಭುದೇವರು ಹಾಗೂ ಅಕ್ಕ ಮಹಾದೇವಿ ಇವರಿಬ್ಬರೂ ಶಿವಮೊಗ್ಗ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಅನುಭವ ಮಂಟಪ ರೂಪಿಸಿದ ಜಗಜ್ಯೋತಿ ಬಸವಣ್ಣನವರು ಅದರ ಅಧ್ಯಕ್ಷತೆ ತಾವು ವಹಿಸದೆ ತಳ ಸಮುದಾಯದ ಅಲ್ಲಮಪ್ರಭುದೇವರನ್ನು ಶೂನ್ಯ ಪೀಠಾಧ್ಯಕ್ಷರನ್ನಾಗಿ ಮಾಡುವ ಮೂಲಕ ಸಮಾನತೆ ಹರಿಕಾರರಾದರು. ಮುಂದೆ ಅಲ್ಲಮಪ್ರಭುದೇವರು ೧೬೩೬ ವಚನಗಳನ್ನು ರಚಿಸಿ ಸಮಜಕ್ಕೆ ಕೊಡುಗೆಯಾಗಿ ನೀಡಿದರು. ಇದೇ ರೀತಿ ಅಕ್ಕ ಮಹಾದೇವಿಯವರು ಸಹ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಶಾಲೆ ಮುಖ್ಯೋಪಾಧ್ಯಾಯ ಎಂ.ಎಸ್. ಬಾಲರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.

ಪುನೀತ್ ವಚನ ಗಾಯನ ಮಾಡಿದರು. ರುದ್ರಯ್ಯ ಸ್ವಾಗತಿಸಿ, ಮಲ್ಲಿಕಾಂಬ ಕಾರ್ಯಕ್ರಮ ನಿರೂಪಿಸಿ, ವಿ. ರಾಜಶೇಖರಪ್ಪ ವಂದಿಸಿದರು.