ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ: ನ್ಯಾ.ಅರಳಿ ನಾಗರಾಜ

| Published : Feb 16 2025, 01:47 AM IST

ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ: ನ್ಯಾ.ಅರಳಿ ನಾಗರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭುಗಳು ಭೂಮಿ, ಹೇಮ ಮತ್ತು ಕಾಮಿನಿ ನಿನ್ನವಳಲ್ಲ ಅವು ಜಗಕಿಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನರತ್ನ ಆ ಒಡವೆಯನ್ನು ನೀನು ಧರಿಸಿದೆಯಾದರೆ ನಿನಗಿಂತ ಅಧಿಕರು ಯಾರಿಲ್ಲ ಎಂದು ಹೇಳಿದ್ದಾರೆ. ನಾವು ಆಸ್ತಿ ಗಳಿಕೆಗೆ ಗಮನ ಕೊಡದೆ ಜ್ಞಾನ ಗಳಿಕೆಗೆ ಒತ್ತು ಕೊಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ತಿಳಿಸಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನೆಲೆ ಫೌಂಡೇಷನ್ ಶಾರದಾ ನೆಲೆಯ ಹೆಣ್ಣು ಮಕ್ಕಳ ಉಚಿತ ವಿದ್ಯಾರ್ಥಿನಿಲಯದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ 23ನೇ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಅವರು ವಚನಶಾಲೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭುಗಳು ಭೂಮಿ, ಹೇಮ ಮತ್ತು ಕಾಮಿನಿ ನಿನ್ನವಳಲ್ಲ ಅವು ಜಗಕಿಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನರತ್ನ ಆ ಒಡವೆಯನ್ನು ನೀನು ಧರಿಸಿದೆಯಾದರೆ ನಿನಗಿಂತ ಅಧಿಕರು ಯಾರಿಲ್ಲ ಎಂದು ಹೇಳಿದ್ದಾರೆ. ನಾವು ಆಸ್ತಿ ಗಳಿಕೆಗೆ ಗಮನ ಕೊಡದೆ ಜ್ಞಾನ ಗಳಿಕೆಗೆ ಒತ್ತು ಕೊಡಬೇಕು ಎಂದರು.

ವಿದ್ಯಾರ್ಥಿಗಳು ಆಲಿಸಿದಂತಹ ವಿಷಯಗಳನ್ನು ಅರ್ಥೈಸಿಕೊಂಡು, ನಂತರ ದಾಖಲಿಸಿ ಸಂದರ್ಭನುಸಾರ ಆಚರಣೆಗೆ ತಂದರೆ ವಿಶೇಷ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ. ನಾವು ನಮಗಾಗಿ ಬದುಕುವುದಕ್ಕಿಂತ ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವ ಕೌಶಲ್ಯವನ್ನು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ನಮ್ಮ ಮನದ ಮೈಲಿಗೆಯನ್ನು ಹೋಗಲಾಡಿಸಿಕೊಳ್ಳಲು ಶರಣರ ವಚನಗಳು ಸಹಾಯಕವಾಗಿದ್ದು, ಅವುಗಳನ್ನು ಅಧ್ಯಯನ ಮತ್ತು ಅನ್ವಯದ ದೃಷ್ಟಿಯಿಂದ ಅಭ್ಯಾಸ ಮಾಡಬೇಕು. ಗಣಿತದ ಮೂಲಕ್ರಿಯೆಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡು ಮಿತ್ರರನ್ನು ಕೂಡಬೇಕು, ಶತ್ರುಗಳನ್ನು ಕಳೆಯಬೇಕು, ಸದ್ಗುಣಗಳನ್ನು ಗುಣಿಸಬೇಕು, ದುರ್ಗುಣಗಳನ್ನು ಭಾಗಿಸಬೇಕು ಎಂದರು.

ಪಠ್ಯದಲ್ಲಿ ಇರುವ ಹೊಂದಿಸಿ ಬರೆಯಿರಿ ವಿಭಾಗದಲ್ಲಿ ಸರಿಯಾಗಿ ಹೊಂದಿಸಿದರೆ ಪದಕ್ಕೆ ಅರ್ಥ ಬರುತ್ತದೆ. ಹೊಂದಾಣಿಕೆ ಮಾಡಿಕೊಂಡು ಬಾಳಿದರೆ ಜೀವನಕ್ಕೆ ಅರ್ಥ ಬರುತ್ತದೆ. ಹಳಸಿದ ಅನ್ನ ತಿಂದರೆ ಹೊಟ್ಟೆ ಕೆಡುತ್ತದೆ ಎಂದು ಗೊತ್ತು. ಹಾಗೆಯೇ ಕೆಟ್ಟ ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ತಲೆ ಕೆಡುತ್ತದೆ ಎಂಬ ಅರಿವು ಇರಬೇಕು ಎಂದರು.

ನಂತರ ವಚನ ವಾಚನ ಮಾಡಿದ 20 ವಿದ್ಯಾರ್ಥಿನಿಯರಿಗೆ ವಚನ ಭಾರತ ಪುಸ್ತಕ ಮತ್ತು ವಚನದೀವಿಗೆ ಪ್ರಮಾಣಪತ್ರ ನೀಡಲಾಯಿತು.

ನೆಲೆ ಫೌಂಡೇಷನ್ ಶಾರದಾ ನೆಲೆ ಕಮಿಟಿ ಸದಸ್ಯರಾದ ವಕೀಲ ಪಿ.ಜೆ. ರಾಘವೇಂದ್ರ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕಿ ಮಲ್ಲಮ್ಮ ಶಿವಪ್ರಸಾದ್, ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ವಸತಿನಿಲಯದ ಮೇಲ್ವಿಚಾರಕಿ ರೇವತಿ, ಚಂದ್ರು ಇದ್ದರು.