ದೇವಸ್ಥಾನಗಳ ಒಡೆದು ನಿರ್ಮಿಸಿದ ಮಸೀದಿ ಒಡೆಯುವುದರಲ್ಲಿ ತಪ್ಪಿಲ್ಲ: ಕೆಎಸ್‌ ಈಶ್ವರಪ್ಪ

| Published : Jan 15 2024, 01:52 AM IST / Updated: Jan 15 2024, 04:29 PM IST

ದೇವಸ್ಥಾನಗಳ ಒಡೆದು ನಿರ್ಮಿಸಿದ ಮಸೀದಿ ಒಡೆಯುವುದರಲ್ಲಿ ತಪ್ಪಿಲ್ಲ: ಕೆಎಸ್‌ ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಅನಂತಕುಮಾರ ಹೆಗಡೆ ಅವರು ನಮ್ಮ ರಾಜ್ಯದಲ್ಲಿರುವ ಗುಲಾಮಗಿರಿಯ ಸಂಕೇತವಾಗಿರುವ ಮಸೀದಿಗಳನ್ನು ಒಡೆದು ಹಾಕುತ್ತೇವೆ ಎನ್ನುವ ಮಾತಿಗೆ ನನ್ನ ಸಹಮತವಿದೆ ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.

ಲಕ್ಷ್ಮೇಶ್ವರ: ಸಂಸದ ಅನಂತಕುಮಾರ ಹೆಗಡೆ ಅವರು ನಮ್ಮ ರಾಜ್ಯದಲ್ಲಿರುವ ಗುಲಾಮಗಿರಿಯ ಸಂಕೇತವಾಗಿರುವ ಮಸೀದಿಗಳನ್ನು ಒಡೆದು ಹಾಕುತ್ತೇವೆ ಎನ್ನುವ ಮಾತಿಗೆ ನನ್ನ ಸಹಮತವಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಯಶ್ ಕಟೌಟ್ ಕಟ್ಟುವ ವೇಳೆ ಮೃತಪಟ್ಟಿರುವ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋಗುತ್ತಿರುವ ಸಂದರ್ಭದಲ್ಲಿ ಪಟ್ಟಣದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರ ನಿವಾಸದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ 500 ವರ್ಷಗಳ ಹಿಂದೆ ರಾಜ್ಯದಲ್ಲಿ ದೇವಸ್ಥಾನಗಳನ್ನು ಒಡೆದು ಹಾಕಿ ನಿರ್ಮಾಣಗೊಂಡಿರುವ ಮಸೀದಿಗಳನ್ನು ಒಡೆದು ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಬೋಧಿಸಿರುವುದನ್ನು ನಾನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಹುದ್ದೆಗೆ ನಾವು ಬೆಲೆ ನೀಡಬೇಕು ಹೊರತು ವ್ಯಕ್ತಿಗೆ ಅಲ್ಲ ಎಂದರು.

ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ರಾಮಮಂದಿರ ಉದ್ಘಾಟನೆಯ ವಿಚಾರದಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿಲ್ಲ, ಕೆಲವು ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಯ ಆನಂತರ ಅಲ್ಲಿಗೆ ಹೋಗುವುದಾಗಿ ತಿಳಿಸಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಮಮಂದಿರ ಉದ್ಘಾಟನೆ ಬಳಿಕ ತೆರಳುವುದಾಗಿ ಹೇಳಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಕೆಲವು ಮಠಾಧೀಶರು ಮಾತ್ರ ಅಪಸ್ವರ ಎತ್ತಿದ್ದಾರೆ. ಉಳಿದಂತೆ ಯಾರೂ ಅದರ ಬಗ್ಗೆ ಮಾತಾಡಿಲ್ಲ, ಬಿಜೆಪಿ ರಾಮಮಂದಿರ ಉದ್ಘಾಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ, 500 ವರ್ಷಗಳ ಹಿಂದೆ ನಿರ್ಮಿಸಿದ ಬಾಬ್ರಿ ಮಸೀದಿಯು ಗುಲಾಮಗಿರಿಯ ಸಂಕೇತವಾಗಿತ್ತು. 

ಅದನ್ನು ಕಿತ್ತು ಹಾಕಿ ಅಪಾರ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿದ್ದೇವೆಯೇ ಹೊರತು ರಾಜಕಾರಣ ಮಾಡುವ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಮಮಂದಿರ ನಿರ್ಮಾಣ ಅಪೂರ್ಣಗೊಂಡಿದ್ದರೂ ಉದ್ಘಾಟನೆ ಮಾಡಲು ಹೊರಟಿದ್ದಾರೆ ಎನ್ನುವುದು ಸರಿಯಲ್ಲ, ಗರ್ಭಗುಡಿಯ ಸಂಪೂರ್ಣ ಕೆಲಸ ಮುಗಿದ ಹಿನ್ನೆಲೆಯಲ್ಲಿ ಉದ್ಘಾಟನೆ ನಡೆಯುತ್ತಿದೆ. ಕೆಲವು ಸಣ್ಣ ಪುಟ್ಟ ಕಾರ್ಯಗಳು ಉಳಿದಿರಬಹುದು. ಅದನ್ನು ಸರಿಪಡಿಸುವ ಕಾರ್ಯ ಮುಂದೆ ಮಾಡುತ್ತೇವೆ ಎಂದರು.

ಹಾನಗಲ್ಲ ತಾಲೂಕಿನಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿ ಅತ್ಯಾಚಾರ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಯಾಕೆ ಉತ್ತರಿಸುತ್ತಿಲ್ಲ? ಬಿಜೆಪಿಯವರು ಮಹಿಳೆ ರಕ್ಷಣೆಗೆ ನಿಂತರೆ ಅದು ನೈತಿಕ ಪೊಲೀಸಗಿರಿ ಎಂದು ಹೇಳುತ್ತೀರಿ. 

ಅದೆ ಮುಸ್ಲಿಂ ಗೂಂಡಾಗಳು ಮಾಡಿದರೆ ಅದು ನೈತಿಕ ಪೊಲೀಸ್‌ಗಿರಿ ಅಲ್ಲವೆ ಎಂದ ಅವರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಅತ್ಯಾಚಾರ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನನ್ನ ಮಗ ಕಾಂತೇಶ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಮ್ಮ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡಿದಲ್ಲಿ ಸ್ಪರ್ಧಿಸುತ್ತಾರೆ. ಬಿಜೆಪಿ ವರಿಷ್ಠರು ಆತನನ್ನು ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸುತ್ತೇವೆ ಎಂದು ಹೇಳಿದರು. 

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಕಾಂತೇಶ್, ಫಕ್ಕಿರೇಶ ರಟ್ಟಿಹಳ್ಳಿ, ಚಂಬಣ್ಣ ಬಾಳಿಕಾಯಿ. ಸುನೀಲ ಮಹಾಂತಶೆಟ್ಟರ, ಶಿವಯೋಗಿ ಅಂಕಲಕೋಟಿ, ಈರಣ್ಣ ಅಕ್ಕೂರ, ನಾಗರಾಜ ಕುಲಕರ್ಣಿ, ಅಶೋಕ ಪಾಟೀಲ, ಸಿದ್ದನಗೌಡ ಬೊಳ್ಳೊಳ್ಳಿ, ಶಕ್ತಿ ಕತ್ತಿ ಇದ್ದರು.