ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಾನವನನ್ನು ಒಳಗೊಂಡು ಸೃಷ್ಟಿಯ ಸಮಸ್ತ ಜೀವಿಗಳು ಹಾಗೂ ಸಸ್ಯಗಳಿಗೆ ಇರುವುದು ಒಂದೇ ಭೂಮಿ. ಅದನ್ನು ಎಲ್ಲರೂ ಹಿತಮಿತವಾಗಿ ಬಳಸಬೇಕು. ಉದಾತ್ತವಾಗಿ ರಕ್ಷಿಸಬೇಕು ಹಾಗೂ ಅಭಿವೃದ್ಧಿಗೊಳಿಸಬೇಕು. ಆಗ ಮಾತ್ರ ಮನುಕುಲದ ನೆಮ್ಮದಿ ಸಾಧ್ಯ ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ .ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಪೆರೆಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಬದುಕುತ್ತಿರುವ ಭೂಮಿ ಸೃಷ್ಟಿಯಾಗಿ ಸುಮಾರು 8.3 ಬಿಲಿಯನ್ ವರ್ಷಗಳಾಗಿದೆ, ಭೂಮಿಯ ಮೇಲೆ ಪ್ರಸ್ತುತ 8.3 ಬಿಲಿಯನ್ ಜನರು ಭೂಮಿಯನ್ನು ಆಶ್ರಯಿಸಿದ್ದಾರೆ. ಈ ನಡುವೆ ಭೂಮಿಯ ಮೇಲಿನ ಚಟುವಟಿಕೆಗಳು ಪರಿಸರ ನಿಯಮಗಳನ್ನು ದಿಕ್ಕು ತಪ್ಪಿಸುತ್ತಿರುವ ಕಾರ್ಯಾಚರಣೆಗಳಿಂದ ಪರಿಸರದ ಆರೋಗ್ಯ, ಭೂಮಿಯ ಧಾರಣ ಶಕ್ತಿ ನಿರಂತರ ಕ್ಷೀಣಿಸುತ್ತಿದೆ ಎಂದರು.
ಪರಿಸರದ ರಕ್ಷಣೆ ಮತ್ತು ಉತ್ತೇಜನ ಒಬ್ಬ ವ್ಯಕ್ತಿಯಲ್ಲ ಒಂದು ಸಮಾಜದ್ದು ಅಲ್ಲ, ಒಂದು ದೇಶದ್ದು ಅಲ್ಲ. ವಿಶ್ವಸಂಸ್ಥೆಗೂ ಇದು ಸಾಧ್ಯವಾಗುವಂಥದ್ದಲ್ಲ. ಇದು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಕಾಳಜಿ ಮತ್ತು ಸಂವೇದನೆ ಆಗಬೇಕು. ಅವನ ಪರಿಸರದ ಸಂವೇದನೆಯು ಕಾರ್ಯಾಚರಣೆಗೆ ಬರಬೇಕು. ಅವನ ವೈಯಕ್ತಿಕ ಜೀವನದಲ್ಲಿ, ಕುಟುಂಬದಲ್ಲಿ ಅದು ಆಚರಣೆಗೆ ಬರಬೇಕು. ಆಗ ಮಾತ್ರ ಪರಿಸರ ಸುಸ್ಥಿತಿಗೆ ಬರಲು ಸಾಧ್ಯವಾಗುತ್ತದೆ ಎಂದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ವಿಶ್ವ ಪರಿಸರ ಜಾಗೃತಿ ಮೆರವಣಿಗೆ, ಪ್ರತಿಯೊಂದು ವಿಭಾಗದ ಆಯ್ದ ವಿದ್ಯಾರ್ಥಿಗಳು ಸಸ್ಯಗಳನ್ನು ನೆಡುವುದು, ಕ್ಯಾಂಪಸ್ ನಿರ್ದಿಷ್ಟ ಭಾಗದ ಸ್ವಚ್ಛತೆ, ಹಸಿರು ನಿರ್ವಹಣೆ ಕಾರ್ಯ ಮಾಡಲಾಯಿತು. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಜ್ಞಾವಿಧಿಯನ್ನು ಪಡೆದುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿ ಸಾಂಬೋಜಿ, ಶಿಲ್ಪ, ಶಾಂತ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಿನಾಥ್ ಸುಭಾಷಿಣಿ, ಅರೆ ವೈದ್ಯಕೀಯ ಶಿಕ್ಷಣ ವಿಭಾಗದ ಪ್ರೊ. ನರೇಶ್ ಕುಮಾರ್, ವಿಜಯಲಕ್ಷ್ಮಿ, ಸಂದೇಶ, ಅಲೈಯ್ಡ್ ಹೆಲ್ತ್ ವಿಭಾಗದ ಗುಣಶೀಲ, ಸಚಿನ್, ದೇವರಾಜ್ ಹರಿಣಿ, ಫಿಜಿಯೋಥೆರಪಿ ವಿಭಾಗದ ಡಾ. ಆಕಾಂಕ್ಷ, ಡಾ. ಬ್ಯೂಟಿ ಮತ್ತು ಎಲ್ಲ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಸಿಕೆಬಿ-2 ತಾಲೂಕಿನ ಪೆರೆಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಗಿಡ ನೆಟ್ಟರು.