ಸಾರಾಂಶ
ನನ್ನ ರಕ್ತದ ಕಣಕಣದಲ್ಲಿಯೂ ಮೋದಿಜಿ, ಬಿಜೆಪಿಯ ಹಿಂದುತ್ವ, ಕೇಸರಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ನನ್ನ ರಕ್ತದ ಕಣಕಣದಲ್ಲಿಯೂ ಮೋದಿಜಿ, ಬಿಜೆಪಿಯ ಹಿಂದುತ್ವ, ಕೇಸರಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಗುಳುಗುಳಿ ಶಂಕರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಶಂಕೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳ ಭೇಟಿಯಾಗಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕಾಗಿ ಬಿಜೆಪಿ ತೊರೆದು ಹೋದ ವ್ಯಕ್ತಿ. ಆದರೆ ನನಗೆ ಪಕ್ಷವೇ ಹೆತ್ತ ತಾಯಿ. ನಾನು ಪಕ್ಷ ತೊರೆಯುವುದಿಲ್ಲ ಎಂದು ಹೇಳಿದರು.
ಅಯನೂರು ಮಂಜುನಾಥ ಮತ್ತು ಆರ್.ಕೆ.ಸಿದ್ದರಾಮಣ್ಣನವರ ಚಿಲ್ಲರೆ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನಾನು ಪಕ್ಷದಲ್ಲಿ ಹಿರಿಯ ರಾಜಕಾರಣಿಯಾಗಿದ್ದು ಕೆಳಹಂತದ ಎಲ್ಲ ಕಾರ್ಯಕರ್ತರ ಸಂಪರ್ಕ ಇದೆ. ಈಗಾಗಲೇ ಆಂತರಿಕವಾಗಿ ಹಲವರು ನನಗೆ ಬೆಂಬಲಿಸುತ್ತಿದ್ದು ಚುನಾವಣಾ ಪ್ರಕ್ರಿಯೆ ನಂತರದಲ್ಲಿ ಬಹಿರಂಗವಾಗಿ ಬಿಜೆಪಿಯಿಂದ ಬಂಡೆದ್ದು ನನ್ನೊಂದಿಗೆ ಸೇರ್ಪಡೆಗೊಳ್ಳಲಿದ್ದಾರೆಂದರು.
ಶೀಘ್ರದಲ್ಲಿಯೇ ಕಾರ್ಯಕರ್ತರ ನೇರ ಸಂಪರ್ಕಕ್ಕೆ ಅನುಕೂಲವಾಗುವಂತೆ ಚುನಾವಣಾ ಪ್ರಚಾರ ಕಚೇರಿ ರಿಪ್ಪನ್‍ಪೇಟೆಯಲ್ಲಿ ಪ್ರಾರಂಭಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಜಿಲ್ಲಾ ಮುಖಂಡರಾದ ಆರ್.ಟಿ. ಗೋಪಾಲ, ನರಸಿಂಹ, ತರಕಾರಿ ಯೋಗೇಂದ್ರ ಗೌಡ, ಎಲ್. ನಿರೂಪ್‌ಕುಮಾರ್. ಪವನ್ ಶೆಟ್ಟಿ, ಕೆ. ಗಣೇಶ್‍ಪ್ರಸಾದ್ ಇನ್ನಿತರ ಮುಖಂಡರಿದ್ದರು.
ಕುಟುಂಬ ರಾಜಕಾರಣ ವಿರುದ್ಧ ನನ್ನ ಸ್ಪರ್ಧೆ: ಕೆ.ಎಸ್.ಈಶ್ವರಪ್ಪ
ಕನ್ನಡಪ್ರಭವಾರ್ತೆ ಸಾಗರ
ನನ್ನ ಸ್ಪರ್ಧೆ ಬಿಜೆಪಿ ವಿರುದ್ಧವಲ್ಲ. ಕುಟುಂಬ ರಾಜಕಾರಣದ ವಿರುದ್ಧ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಪಟ್ಟಣದಲ್ಲಿ ಭಾನುವಾರ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಸ್ಪರ್ಧೆ ಮಾಡಿರುವ ಬಗ್ಗೆ ದೇಶ ಮತ್ತು ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕುಟುಂಬ ರಾಜಕಾರಣ ವಿರೋಧಿಸುತ್ತ ಬಂದಿದ್ದಾರೆ. ಈ ಲೋಕಸಭಾ ಚುನಾವಣೆ ನಂತರ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಕೊನೆಯಾಗಲಿದೆ.
ಅವರು, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ತೊಲಗಬೇಕು ಎಂದು ಪುನರುಚ್ಚರಿಸಿದರು. ಅಬಸೆ ದಿನೇಶಕುಮಾರ್ ಜೋಷಿ ಮಾತನಾಡಿ, ಹಿಂದಿನಿಂದಲೂ ನಾನು ಈಶ್ವರಪ್ಪ ಕುಟುಂಬದ ಹಿತೈಷಿ. ವೈಯಕ್ತಿಕ ಹಿತಚಿಂತನೆ ಬದಿಗಿಟ್ಟು ದೇಶದ ಬಗ್ಗೆ ಚಿಂತನೆ ಮಾಡುವವರು ಈಶ್ವರಪ್ಪ.
ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಈಶ್ವರಪ್ಪ ಧ್ವನಿ ಎತ್ತಿದ್ದರೆ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇತ್ತು. ಪ್ರಸ್ತುತ ಈಶ್ವರಪ್ಪ ತೆಗೆದುಕೊಂಡ ತೀರ್ಮಾನಕ್ಕೆ ಜನಾಭಿಪ್ರಾಯ ಸಂಗ್ರಹವಾಗುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದು ಹೇಳಿದರು. ಎಸ್.ವಿ. ಕೃಷ್ಣಮೂರ್ತಿ, ಪ್ರಕಾಶ್ ಕುಂಠೆ, ಎಸ್.ಎಲ್. ಮಂಜುನಾಥ್, ಕಸ್ತೂರಿ ಸಾಗರ್, ಸತೀಶ್ ಹಕ್ರೆ, ನಾಗರಾಜ್ ಮೊಗವೀರ ಇನ್ನಿತರರಿದ್ದರು