ಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ಬದಲಾವಣೆ ಆಗಬೇಕಿದೆ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

| Published : Jan 03 2024, 01:45 AM IST

ಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ಬದಲಾವಣೆ ಆಗಬೇಕಿದೆ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕ್ಷೇತ್ರ ಇಂದು ಸ್ವಾಮೀಜಿಗಳ, ರಾಜಕಾರಣಿಗಳ, ಉದ್ಯಮಿಗಳ ಹಿಡಿತದಲ್ಲಿ ಸಿಲುಕಿ ದುಬಾರಿಯಾಗುತ್ತಿದೆ. ಬಡಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕದಂತಾಗಿದೆ. ಇಡೀ ಶಿಕ್ಷಣ ಕ್ಷೇತ್ರದ ವ್ಯವಸ್ಥೆ ಬದಲಾಗಬೇಕಿದೆ. ಹಣವಿಲ್ಲದವರಿಗೂ ಕಾನ್ವೆಂಟ್‌ಗಳಲ್ಲಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಶಿಕ್ಷಣ ದೊರೆಯಬೇಕಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ನೆಲದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಶಾಲಾ ಶಿಕ್ಷಣದ ಪಠ್ಯ ಕ್ರಮದಲ್ಲಿ ಅಮೂಲಾಗ್ರವಾದ ಬದಲಾವಣೆಯಾಗಬೇಕಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಸಂಸ್ಕೃತಿ ಸಂಗಮ ನೆಲಸಂಸ್ಕೃತಿ ನಾಟಕೋತ್ಸವದಲ್ಲಿ ಮಾತನಾಡಿ, ಮಕ್ಕಳಿಗೆ ನೆಲದ ಸಂಸ್ಕೃತಿಯ ಪರಿಚಯ ಮಾಡಿ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಾ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದರು.

ಶಿಕ್ಷಣ ಕ್ಷೇತ್ರ ಇಂದು ಸ್ವಾಮೀಜಿಗಳ, ರಾಜಕಾರಣಿಗಳ, ಉದ್ಯಮಿಗಳ ಹಿಡಿತದಲ್ಲಿ ಸಿಲುಕಿ ದುಬಾರಿಯಾಗುತ್ತಿದೆ. ಬಡಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕದಂತಾಗಿದೆ. ಇಡೀ ಶಿಕ್ಷಣ ಕ್ಷೇತ್ರದ ವ್ಯವಸ್ಥೆ ಬದಲಾಗಬೇಕಿದೆ. ಹಣವಿಲ್ಲದವರಿಗೂ ಕಾನ್ವೆಂಟ್‌ಗಳಲ್ಲಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಶಿಕ್ಷಣ ದೊರೆಯಬೇಕಿದೆ ಎಂದರು.

ಪ್ರಸ್ತುತ ಪೋಷಕರು ಕಾನ್ವೆಂಟ್ ಶಿಕ್ಷಣಕ್ಕೆ ಮಾರುಹೋಗಿ ಶಿಕ್ಷಣಕ್ಕಾಗಿ ದುಬಾರಿ ಹಣ ಖರ್ಚು ಮಾಡುತ್ತಿದ್ದಾರೆ. ಕಾನ್ವೆಂಟ್‌ಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾದ ಶಿಕ್ಷಕರಿದ್ದಾರೆ ಎಂದರು.

ಸರ್ಕಾರಿ ಶಾಲೆ ಕಲಿಕಾ ಪರಿಸರವೂ ಉತ್ತಮವಾಗಿದೆ. ಪೋಷಕರು ಖಾಸಗಿ ಕಾನ್ವೆಂಟ್ ವ್ಯಾಹೋಹ ತೊರೆಯಬೇಕು. ಸರ್ಕಾರಿ ಶಾಲೆಗಳಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಸರ್ಕಾರಿ ಶಾಲೆಗಳಲ್ಲಿ ಕಲಿತವರು ಸಮಾಜಕ್ಕೆ ಕೊಡುಗೆ ನೀಡುವ ಪ್ರಜೆಯಾಗಿ ರೂಪುಗೊಳ್ಳುತ್ತಿದ್ದಾರೆ ಎಂಬುದನ್ನು ಪೋಷಕರು ಮನಗಾಣಬೇಕು ಎಂದರು.

ಮಕ್ಕಳಿಂದಲೇ ಹತ್ತು ನಾಟಕಗಳ ಪ್ರದರ್ಶನ:

ನೆಲ ಸಂಸ್ಕೃತಿಯ ನಾಟಕೋತ್ಸವ ಶಿಬಿರ ಜಿಲ್ಲೆಯಲ್ಲಿ ಪ್ರಥಮ ಪ್ರಯತ್ನವಾಗಿದೆ. ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಶಾಸಕರ ಸಹಕಾರದಲ್ಲಿ ನಾಟಕೋತ್ಸವ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಿಂದಲೆ ಇಲ್ಲಿನ ಮಣ್ಣಿನ ವಿಚಾರಗಳನ್ನು ಸಂಗ್ರಹಿಸಿ ಇದಕ್ಕೆ ಪೂರಕವಾದ ನಾಟಕಗಳನ್ನು ತಯಾರಿಸಿ ಮಕ್ಕಳಿಗೇ ಕಲಿಸಿ ಅವರಿಂದಲೇ ಪ್ರದರ್ಶನ ಮಾಡಿಸಲಾಗುತ್ತದೆ ಎಂದರು.

ಶಿಬಿರದಲ್ಲಿ ಕಲಿತ ಮಕ್ಕಳಿಂದ ಮೇಲುಕೋಟೆಯಲ್ಲಿ ನಾಲ್ಕು ಹಾಗೂ ವಿವಿಧ ತಾಲೂಕು ಕೇಂದ್ರದಲ್ಲಿ ಒಂದೊಂದು ನಾಟಕಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ ಎಂದರು.

ಮಂಡ್ಯ ಜಿಲ್ಲಾ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಶಾಲಾಮಕ್ಕಳು ರಂಗಕಲೆಯಲ್ಲಿ ಪ್ರಾಥಮಿಕ ಹಂತದಿಂದಲೇ ತೊಡಗಿಸಿಕೊಳ್ಳಲು ಪೂರಕ ವಾತಾವರಣ ದೊರೆಯಬೇಕು. ಇದಕ್ಕಾಗಿ ಪೋಷಕರು ಮತ್ತು ಶಿಕ್ಷಕರು ವೇದಿಕೆ ಕಲ್ಪಿಸಿಕೊಡಬೇಕು. ಮಕ್ಕಳು ಕಲಿತು ಪ್ರದರ್ಶಿಸುವ ನಾಟಕಗಳಿಗೆ ನನ್ನ ಸಂಪೂರ್ಣಬೆಂಬಲವಿದೆ ಎಂದು ಹೇಳಿದರು.

ಬಿಇಒ ಚಂದ್ರಶೇಖರ್ ಮಾತನಾಡಿ, ನಾಟಕಗಳೂ ಸಹ ಪಠ್ಯದ ಭಾಗಗಳಾಗಿವೆ. ನಮ್ಮ ಸಂಸ್ಕೃತಿಪರಿಚಯವನ್ನು ಮಕ್ಕಳಿಗೆ ಮಾಡಿಸುವ ಜವಾಬ್ದಾರಿ ನಮ್ಮಮೇಲಿದೆ. ಮಕ್ಕಳನ್ನು ರಂಗಕಲೆಯಲ್ಲಿ ತೊಡಗಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು ತಿಳಿಸಿದರು.

ಕಾರ್ಯಕ್ರಮದಲ್ಲಿ 30 ದಿನಗಳ ಕಾಲ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಚೇತನಗಳಿಗೆ ಗದ್ದಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಿದೆ. ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯರಿಗೆ ಪ್ರಥಮ ಗದ್ದಿಗೆ ಗೌರ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯಕಾರ್ಯದರ್ಶಿ ಜಿ.ಎನ್.ನಾಗರಾಜು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಪಿ.ನಾಗರಾಜು, ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್, ಶಿಕ್ಷಣ ಸಂಯೋಜಕ ರಮೇಶ್, ಕನಗೋನಹಳ್ಳಿ ಪರಮೇಶ್, ಪರಿಸರ ತಜ್ಞ ಸಂತೋಷ್ ಕೌಲಗಿ, ಕಸಾಪ ಮಾಜಿ ಅಧ್ಯಕ್ಷ ವೆಂಕಟರಾಮೇಗೌಡ, ಸಾಹಿತಿ ಸಿ.ಎನ್.ನಾಗರಾಜು, ಹೋರಾಟಗಾರ್ತಿ ಕುಮಾರಿ, ದೃಶ್ಯ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಗಿರೀಶ್, ಗಾಮನಹಳ್ಳಿ ಸ್ವಾಮಿ, ಚೇ.ಬಾಲು, ಮುಖ್ಯಶಿಕ್ಷಕ ಸಂತಾನರಾಮನ್, ಶಿಕ್ಷಕಿ ಮಹಾಲಕ್ಷ್ಮಿ, ಬಿ.ಜಯಂತಿ ಮಹಮದ್ ಇಮ್ರಾನ್ ಪೂರ್ಣಿಮ ಮತ್ತಿತರರು ಭಾಗವಹಿಸಿದ್ದರು.