ಅಂತರ್ಜಾಲ ಬಳಕೆಗೆ ಮಿತಿ ಇರಲಿ: ನ್ಯಾ.ಇಂದ್ರೇಶ್

| Published : Oct 12 2025, 01:00 AM IST

ಸಾರಾಂಶ

ವಂಚಕರಿಂದ ಇಂಥ ಬೆದರಿಕೆ ಕರೆಗಳು ಬಂದಾಗ ಜನರು ಕೂಡ ಆತಂಕಕ್ಕೆ ಒಳಗಾಗದೆ, ಮಾಹಿತಿಯನ್ನು ಪರಾಮರ್ಶಿಸಬೇಕು. ಬಲವಂತವಾಗಿ ಅಥವಾ ಒತ್ತಡದಲ್ಲಿ ಹಣವನ್ನು ವರ್ಗಾಯಿಸಬಾರದು. ಬ್ಯಾಂಕ್‌ಗಳು, ಮೊಬೈಲ್ ಫೋನ್‌ಗಳ ಮೂಲಕ ಕೆವೈಸಿ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ. ಯಾವುದೇ ಡಿಜಿಟಲ್ ವಂಚನೆಯಾದಾಗ ಸೈಬರ್ ಕ್ರೈಮ್ ವಿಭಾಗದ ಸಹಾಯವಾಣಿ (೧೯೩೦) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಾವಿಂದು ತಂತ್ರಜ್ಞಾನದ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ವೆಬ್ ಸೈಟ್‌ಗಳ ಮೂಲಕ ಅಗಾಧ ಮಾಹಿತಿಯನ್ನು ಮೊಬೈಲ್‌ನಲ್ಲೇ ಪಡೆಯುತ್ತಿದ್ದೇವೆ. ವಿದ್ಯಾರ್ಥಿಗಳು ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸ್ವಯಂ ಮಿತಿ ಹಾಕಿಕೊಳ್ಳಬೇಕು. ಅದರಲ್ಲಿ ಸಿಕ್ಕ ಮಾಹಿತಿ ಸರಿಯೋ ತಪ್ಪೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚನ್ನಪಟ್ಟಣ ತಾಲೂಕು ಕಾನೂನು ಸೇವಾ ಸಮಿತಿ, ಚನ್ನಪಟ್ಟಣ ವಕೀಲರ ಸಂಘ ಹಾಗೂ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ಜೀವನದ ಮೇಲೆ ಸೈಬರ್ ಅಪರಾಧಗಳ ಪರಿಣಾಮ ಮತ್ತು ಮುನ್ನೆಚ್ಚರಿಕೆ ವಿಷಯದ ಕುರಿತು ಕಾನೂನು ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಬಂದ ಮೇಲೆ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಆಸಕ್ತಿ ಕಡಿಮೆಯಾಗತೊಡಗಿದೆ, ಪ್ರತಿಯೊಂದನ್ನು ಅಂತರ್ಜಾಲದಲ್ಲಿ ಹುಡುಕಿ ಓದಿಕೊಳ್ಳುತ್ತಾರೆ, ಅದು ಸರಿಯೋ ತಪ್ಪೋ ಯೋಚಿಸುವುದಿಲ್ಲ ಅದನ್ನೇ ಓದಿಕೊಳ್ಳುತ್ತಾರೆ. ಇದು ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ಬೆಳವಣಿಗೆಯಲ್ಲ, ಆದ ಕಾರಣ ಅಂರ್ತಜಾಲ ಬಳಕೆಯಲ್ಲಿ ಸ್ವಯಂ ಮಿತಿ ಹಾಕಿಕೊಳ್ಳಬೇಕು. ಇಂಟರ್ನೆಟ್ ಮೂಲಕ ನಾವು ಒಳ್ಳೆಯದನ್ನೂ ನೋಡಬಹುದು ಕೆಟ್ಟದನ್ನೂ ನೋಡಬಹುದು, ಆದರೆ ನಮ್ಮ ಆಯ್ಕೆ ಯಾವಾಗಲೂ ಒಳ್ಳೆಯದು ಮಾತ್ರ ಆಗಬೇಕು ಎಂದರು.

ಇಂದು ಮೊಬೈಲ್ ಇಲ್ಲದ ಮನೆ ಇಲ್ಲ ಎಂಬಂತಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮೊಬೈಲ್ ಮೇಲೆ ಅವಲಂಬನೆ ಅಧಿಕವಾಗಿದೆ. ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ಇಂದು ನಮ್ಮ ಎಲ್ಲ ಡೇಟಾ ಕೂಡ ಮೊಬೈಲ್ ನಲ್ಲಿರುತ್ತದೆ, ಮಗುವಿನ ಕೈಗೆ ಮೊಬೈಲ್ ಕೊಟ್ಟರೆ ಅದು ಏನನ್ನಾದರೂ ಒತ್ತಿ ನಿಮ್ಮ ಡೇಟಾ ಇನ್ನಾರಿಗೋ ಹೋಗಿ ನಿಮಗೆ ವಂಚನೆ ಆಗುವ ಸಾದ್ಯತೆ ಇರುತ್ತದೆ, ಇಂತಹುಗಳಿಂದ ಸೈಬರ್ ಕ್ರೈಂ ಪ್ರಕರಣ ಆಗುವುದು, ಹಾಗಾಗಿ ಮೊಬೈಲ್ ನಲ್ಲಿ ನಿಮ್ಮ ಡೇಟಾಗಳನ್ನು ಸುರಕ್ಷಿತವಾಗಿ ಇಡಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ.ವಿ.ರೇಣುಕ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಡಿಜಿಟಲ್ ಕ್ರಾಂತಿ ಸಂಭವಿಸಿದ ನಂತರ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ನಮ್ಮ ಅಂಗೈಯಲ್ಲಿದ್ದು, ಇದರೊಂದಿಗೆ ಅನೇಕ ಸೌಲಭ್ಯಗಳ ಜೊತೆ ಅಪಾಯಗಳೂ ಎದುರಾಗಿದೆ. ಇಂದಿನ ಮಾಹಿತಿ ಯುಗದಲ್ಲಿ ಉತ್ತಮ ಮಾಹಿತಿ ಎಷ್ಟು ಸುಲಭವಾಗಿ ಲಭ್ಯವಾಗಿದೆಯೋ ಅಷ್ಟೇ ಸುಲಭವಾಗಿ ಸುಳ್ಳು ಮಾಹಿತಿಗಳು ಲಭ್ಯವಾಗುತ್ತಿದ್ದು, ಪ್ರತಿಯೊಬ್ಬರೂ ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ದೇಶದಲ್ಲಿ ಯುವಜನರೇ ಬಹುಸಂಖ್ಯಾತರು, ಹೆಚ್ಚಿನವರ ಬಳಿ ಸ್ಮಾರ್ಟ್ ಫೋನ್‌ಗಳಿವೆ. ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡಿ, ಜನರನ್ನು ವಂಚಿಸುವುದು ಹೆಚ್ಚಾಗಿದೆ. ಎಷ್ಟೋ ಯುವಕರು ಬೆಟ್ಟಿಂಗ್‌ಗೆ ಬಲಿಯಾಗಿ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಅನುಮಾನಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ತಂತ್ರಜ್ಞಾನದ ದೆಸೆಯಿಂದ ಪ್ರತಿಯೊಬ್ಬರೂ ಪ್ರತಿಯೊಂದು ವ್ಯವಹಾರಕ್ಕೂ ಆನ್ಲೈನ್ ಮೇಲೆ ಅವಲಂಬನೆ ಹೆಚ್ಚಾಗಿದೆ. ಇದರ ದುರುಪಯೋಗ ಪಡೆಯುತ್ತಿರುವ ದುರುಳರು, ಜನರು ವೈಯಕ್ತಿಕ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕರೇ ಸಹಕರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಮಾತನಾಡಿ, ನಾಗರಿಕರನ್ನು ಡಿಜಿಟಲ್ ಬಂಧನದಲ್ಲಿರಿಸಿ, ಅವರ ಖಾತೆಗಳಲ್ಲಿದ್ದ ಹಣವನ್ನೆಲ್ಲ ವಂಚಕರು ದೋಚುತ್ತಾರೆ. ಕೂಡಿಟ್ಟ ಹಣವನ್ನೆಲ್ಲ ಕಳೆದುಕೊಳ್ಳುವುದನ್ನು ನೋಡುವುದು ನಿಜವಾಗಿಯೂ ಹೃದಯವಿದ್ರಾವಕ. ಇಂತಹುದು ಮತ್ತೆ ಸಂಭವಿಸದಂತೆ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ವಂಚಕರಿಂದ ಇಂಥ ಬೆದರಿಕೆ ಕರೆಗಳು ಬಂದಾಗ ಜನರು ಕೂಡ ಆತಂಕಕ್ಕೆ ಒಳಗಾಗದೆ, ಮಾಹಿತಿಯನ್ನು ಪರಾಮರ್ಶಿಸಬೇಕು. ಬಲವಂತವಾಗಿ ಅಥವಾ ಒತ್ತಡದಲ್ಲಿ ಹಣವನ್ನು ವರ್ಗಾಯಿಸಬಾರದು. ಬ್ಯಾಂಕ್‌ಗಳು, ಮೊಬೈಲ್ ಫೋನ್‌ಗಳ ಮೂಲಕ ಕೆವೈಸಿ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ. ಯಾವುದೇ ಡಿಜಿಟಲ್ ವಂಚನೆಯಾದಾಗ ಸೈಬರ್ ಕ್ರೈಮ್ ವಿಭಾಗದ ಸಹಾಯವಾಣಿ (೧೯೩೦) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಬೇಕು ಎಂದರು.

ಕರ್ನಾಟಕ ರಾಜ್ಯ ವಕೀಲ ಪರಿಷತ್‌ನ ಮಾಜಿ ಅಧ್ಯಕ್ಷ ಎಚ್.ಸಿ ಶಿವರಾಮು ಮಾತನಾಡಿದರು.

ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಅಪರ ಸಿವಿಲ್ ನ್ಯಾಯಾಧೀಶರಾದ ಎಸ್.ಎನ್ ಸುರೇಶ್, ಚನ್ನಪಟ್ಟಣ ವಕೀಲ ಸಂಘದ ಅಧ್ಯಕ್ಷ ಟಿ.ವಿ ಗಿರೀಶ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಉಪಾಧ್ಯಕ್ಷ ಕೆ. ವೆಂಕಟೇಶ್ ಮೂರ್ತಿ, ಚನ್ನಪಟ್ಟಣ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜು, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಕೆಂಚೇಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಷಾಮಾಲಿನಿ, ಚನ್ನಪಟ್ಟಣ ನಗರದ ಉಪ ಅಧೀಕ್ಷಕ ಗಿರೀಶ್, ಚನ್ನಪಟ್ಟಣ ವಕೀಲರ ಸಂಘದ ಉಪಾಧ್ಯಕ್ಷ ಎಸ್. ಬಿ ಧನಂಜಯ ಇತರರು ಇದ್ದರು.