ಹಾನಗಲ್ಲ: ಹಿಂದೂ ಎನ್ನುವುದು ಜೀವನ ಪದ್ಧತಿಯಾಗಿದೆ. ಹಿಂದೂ ಸಮಾಜ ಸಂಘಟಿತಗೊಂಡಾಗ ನಮಗೆ ಯಾವ ಸಮಸ್ಯೆಯೂ ಎದುರಾಗದು. ಹಿಂದೂ ಸಮಾಜ ಒಗ್ಗೂಡಿಸುವ ಪ್ರಯತ್ನವಾಗಬೇಕಿದೆ ಎಂದು ಜಡೆ ಸಂಸ್ಥಾನಮಠದ ಜಗದ್ಗುರು ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.ತಾಲೂಕಿನ ತಿಳವಳ್ಳಿಯ ಶಾಂತೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಭಾನುವಾರ ಸಂಜೆ ನಡೆದ ಹಿಂದೂ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಬದುಕು ಇಡೀ ಸಮಾಜಕ್ಕೆ, ಪ್ರಕೃತಿಗೆ ಮೀಸಲು ಎನ್ನುವವರು ಹಿಂದೂಗಳು. ಇಂತಹ ವಿಚಾರವನ್ನು ಜಗತ್ತಿಗೆ ಕೊಟ್ಟಿದ್ದು ಭಾರತ. ನಮ್ಮ ಸಂಸ್ಕೃತಿ ಬಗ್ಗೆ ನಮಗೆ ಹೆಮ್ಮೆಯಿದೆ. ಊರು, ಓಣಿ ನಮ್ಮದು ಎನ್ನುವುದು ಹಿಂದೂವಿನ ಗುಣ. ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು. ಪೂರ್ವಜರ ಪದ್ಧತಿ, ಆಚರಣೆಗಳನ್ನು ಪಾಲಿಸಬೇಕು. ಹಿಂದೂ ಸಮಾಜ ಶಕ್ತಿಶಾಲಿಯಾಗಬೇಕು. ಹಿಂದೂ ಸಮಾಜವನ್ನು ಸಂಘಟಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.ಹಿಂದೂ ಸಮ್ಮೇಳನದ ಮುಖ್ಯ ವಕ್ತಾರರಾಗಿದ್ದ ಹಾರಿಕಾ ಮಂಜುನಾಥ ಮಾತನಾಡಿ, ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಪ್ರದಾಯ, ಖನಿಜ ಸಂಪತ್ತಿಗೆ ಕೊರತೆ ಇಲ್ಲ. ಆದರೆ ನಮ್ಮಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಮೊದಲು ನಾನು ಹಿಂದೂ, ನಾನು ಭಾರತೀಯ ಎನ್ನುವ ಭಾವ ಮೂಡಬೇಕು. ಅಂದಿನಿಂದ ಇಲ್ಲಿಯವರೆಗೂ ಸನಾತನ ಧರ್ಮ ಹಿಂದೂಗಳ ಸಂಘಟನೆ ಮಾಡುವಲ್ಲಿ ನಿರತವಾಗಿದೆ. ಹಿಂದೂಗಳಲ್ಲಿ ನೂರಾರು ಜಾತಿಗಳಿವೆ. ಇವರೆಲ್ಲರೂ ತಮಗಿಷ್ಟವಾದ ದೇವರನ್ನು ಪೂಜೆ ಮಾಡಬಹುದು. ನಮ್ಮ ಹಿಂದೂ ಧರ್ಮ ಭವ್ಯ ಪರಂಪರೆಯನ್ನು ಹೊಂದಿದೆ. ಹಿಂದೂ ಸಂಸ್ಕೃತಿ, ಸಮಾಜವನ್ನು ಇಂದು ನಾವೆಲ್ಲರೂ ಒಗ್ಗೂಡಿಸಲು ಶ್ರಮಿಸಬೇಕು. ರಾಮ, ಕೃಷ್ಣ, ವಾಲ್ಮೀಕಿ, ವ್ಯಾಸ, ಶಿವಾಜಿ ಈ ರೀತಿ ಅನೇಕ ಮಹನೀಯರನ್ನು ನಾವು ಜಾತಿಗೆ ಸೀಮಿತ ಮಾಡಿ ಅನುಸರಿಸೊಲ್ಲ. ಆ ರೀತಿ ಹಿಂದೂ ಧರ್ಮದಲ್ಲಿ ಯಾವುದೇ ಜಾತಿಗಳಿರಲಿ, ಯಾವುದೇ ದೇವರನ್ನು ಪೂಜಿಸಲಿ, ನಾವೆಲ್ಲರೂ ಹಿಂದೂಗಳು ಎಂಬ ಏಕತಾಭಾವ ಮರೆಯಬಾರದು ಎಂದರು.ಹಿಂದೂ ಸಮ್ಮೇಳನದ ಅಧ್ಯಕ್ಷ ಗಣೇಶಪ್ಪ ಕೋಡಿಹಳ್ಳಿ, ತಿಳವಳ್ಳಿ ಕಲ್ಮಠದ ಬಸವನಿರಂಜನ ಮಹಾಸ್ವಾಮಿಗಳು, ಘೋಡಗೇರಿಯ ಪ್ರಭುಲಿಂಗ ಮಹಾಸ್ವಾಮಿಗಳು, ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಸದಸ್ಯರು ಹಾಗೂ ಎಲ್ಲ ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು. ಭವ್ಯ ಶೋಭಾಯಾತ್ರೆ: ಸಮ್ಮೇಳನದ ನಿಮಿತ್ತ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಶೋಭಾಯಾತ್ರೆ, ಗ್ರಾಮದ ಮಡಿವಾಳರ ಓಣಿ, ಕರೇಗಲ್ಲ ಸರ್ಕಲ್, ಹನುಮಂತ ದೇವಸ್ಥಾನದ ರಸ್ತೆ, ಪೇಟೆ ಓಣಿ ಹಾಗೂ ಹರ್ಡೀಕರ ಸರ್ಕಲ್ ಮೂಲಕ ಶಾಂತೇಶ್ವರ ಪ್ರೌಢ ಶಾಲಾ ಆವರಣಕ್ಕೆ ಬಂದು ತಲುಪಿತು. ಶೋಭಾ ಯಾತ್ರೆಯಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿ ಭಾರತ್ ಮಾತಾ ಕೀ ಜೈ ಸೇರಿದಂತೆ ದೇಶಭಕ್ತಿಯ ಘೋಷಣೆಗಳನ್ನು ಹಾಕಿದರು. ವಿವಿಧ ಕಲಾ ತಂಡಗಳು ವಾದ್ಯ ಮೇಳಗಳು, ಟ್ರ್ಯಾಕ್ಟರ್‌ಗಳಲ್ಲಿ ಭಾರತ ಮಾತೆ ಪೋಟೊ ಸೇರಿದಂತೆ ವಿವಿಧ ಸಮಾಜದ ಕುಲ ದೇವರುಗಳು, ಸಂತರು, ಶರಣರು, ಮಹಾತ್ಮರು ಹಾಗೂ ದೇಶದ ಮಹಾನ ನಾಯಕರ ಸ್ತಬ್ಧ ಚಿತ್ರಗಳು ಗಮನ ಸೆಳೆದವು.ಹಿಂದೂ ಸಮಾಜ ಒಗ್ಗೂಡಿಸುವ ಪ್ರಯತ್ನವಾಗಬೇಕು-ಸ್ವಾಮೀಜಿ
ಹಿಂದೂ ಎನ್ನುವುದು ಜೀವನ ಪದ್ಧತಿಯಾಗಿದೆ. ಹಿಂದೂ ಸಮಾಜ ಸಂಘಟಿತಗೊಂಡಾಗ ನಮಗೆ ಯಾವ ಸಮಸ್ಯೆಯೂ ಎದುರಾಗದು. ಹಿಂದೂ ಸಮಾಜ ಒಗ್ಗೂಡಿಸುವ ಪ್ರಯತ್ನವಾಗಬೇಕಿದೆ ಎಂದು ಜಡೆ ಸಂಸ್ಥಾನಮಠದ ಜಗದ್ಗುರು ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.