ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಂದು ಸಮಾಜ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕ ಜಾಗೃತಿಯಿರಬೇಕು. ಶಿಕ್ಷಣವಿಲ್ಲದ ಸಮುದಾಯ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೊಸದುರ್ಗ ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಕುರುಬರ ಸಂಘದಿಂದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ನಮ್ಮ ಸಮುದಾಯದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಆದರೆ ಜನಾಂಗ, ಸಂಘಟನೆಗಳು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಹಿಂದೆಬಿದ್ದಿವೆ. ತಾತ್ಸಾರ ಮನೋಭಾವನೆ ಬೇಡ. 2002 ರಲ್ಲಿ ಆರಂಭಗೊಂಡ ಪ್ರತಿಭಾ ಪುರಸ್ಕಾರದಲ್ಲಿ 25 ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದರು.ವಿದ್ಯಾರ್ಥಿಗಳ ಓದಿಗೆ ಸಹಾಯ ಮಾಡಿದರೆ ಬೇರೆಯವರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಇದಕ್ಕಾಗಿ ₹8 ಲಕ್ಷ ಸಂಗ್ರಹ ಮಾಡಿ ಬ್ಯಾಂಕ್‍ನಲ್ಲಿ ಠೇವಣಿ ಇಡಲಾಗಿದೆ. ಇದಕ್ಕೆ ಜನಾಂಗದ ಪ್ರತಿಯೊಬ್ಬರು ಆರ್ಥಿಕ ನೆರವು ಸೇರಿಸಿದರೆ ಪ್ರತಿ ವರ್ಷವೂ ದೊಡ್ಡ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರವನ್ನು ಮಾಡಲು ಸಹಾಯವಾಗಲಿದೆ ಎಂದು ಮನವಿ ಮಾಡಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಮಕ್ಕಳ ಪ್ರತಿಭೆಯನ್ನು ಕೇವಲ ಅಂಕಗಳಿಂದ ಅಳೆಯಬಾರದು ಎಂದರು.ಮಕ್ಕಳು ಸಾಮಾಜಿಕ ಜಾಲತಾಣಗಳ ವ್ಯಾಮೋಹಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಸರಿದಾರಿಗೆ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಗಮನ ಕೊಡಬೇಕೆಂದು ಹೇಳಿದರು.ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ. ಜಗದೀಶ್ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಘೋಷವಾಕ್ಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಎಲ್ಲಾ ಸಮುದಾಯದವರು ಒತ್ತು ಕೊಡಬೇಕು ಎಂದರು.ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷೆ ಶ್ರೀಮತಿ ರಜಿನಿ ಲೇಪಾಕ್ಷಿ, ಕುರುಬರ ಸಂಘದ ಮಹಿಳಾಧ್ಯಕ್ಷೆ ಶ್ರೀಮತಿ ಎನ್.ಎಂ.ಪುಷ್ಪವಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರೇಣುಪ್ರಸಾದ್, ಡಾ.ರೇಖ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ವೇದಿಕೆಯಲ್ಲಿದ್ದರು.1ಎಚ್‌ಎಸ್‌ಡಿ10: ತಾಲೂಕು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕುರುಬ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
----ಕೋಟ್ಐದು ಉಚಿತ ಗ್ಯಾರೆಂಟಿಗಳನ್ನು ರಾಜ್ಯದ ಬಡವರಿಗೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ತಪ್ಪು ಮಾಡದಿದ್ದರೂ ವಿನಾಕಾರಣ ಎದುರಾಳಿಗಳು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕುತಂತ್ರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಅವರಿಗೆ ಬೆಂಬಲವಾಗಿ ನಿಲ್ಲಬೇಕು. ದ್ವೇಷ ಅಸೂಯೆ ಬಿಟ್ಟು ಮೊದಲು ಸಂಘಟಿತರಾಗಿ ಧರ್ಮ ದೇಶ ಕಾಯುವ ಸಮರ್ಥ ಮಕ್ಕಳನ್ನು ತಯಾರು ಮಾಡಿ.
ಈಶ್ವರಾನಂದಪುರಿ ಸ್ವಾಮೀಜಿ ಹೊಸದುರ್ಗ